ಬೆಂಗಳೂರಿನ ಈ ಹೋಟೆಲ್‌ನಲ್ಲಿ ರಿಯಲ್ ಎಸ್ಟೇಟ್, ಪಾಲಿಟಿಕ್ಸ್ ಬಗ್ಗೆ ಮಾತಾಡಂಗಿಲ್ಲ
ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಕೇವಲ ಹೊಟ್ಟೆ ತುಂಬಿಸುವ, ನಾಲಿಗೆಗೆ ರುಚಿ ನೀಡುವ ತಾಣಗಳು ಮಾತ್ರವಲ್ಲ. ಇವು ಚರ್ಚಾ ಸ್ಥಳಗಳೂ ಹೌದು. ಆತ್ಮೀಯರು ಯಾರಾದರೂ ಭೇಟಿಯಾದರೆ ಬನ್ನಿ ಹೋಟೆಲ್‌ನಲ್ಲಿ ಕಾಫಿ-ಟೀ ಕುಡಿಯುತ್ತಾ, ಊಟ ತಿನ್ಕೊಂಡು ಮಾತಾಡೋಣ ಎಂದು ಕರೆದುಕೊಂಡು ಹೋಗುವವರೇ ಹೆಚ್ಚು. ಗಂಟೆಗಟ್ಟಲೆ ಹರಟೆ ಹೊಡೆಯುತ್ತಾ ಹೋಟೆಲ್‌ಗಳಲ್ಲಿ ಕೂರುವವರು ಕೂಡ ಕಡಿಮೆಯೇನಿಲ್ಲ. ಆದರೆ ಬೆಂಗಳೂರಿನ ಪ್ರಸಿದ್ಧ ಹೋಟೆಲ್‌ವೊಂದು ತಮ್ಮ ಗ್ರಾಹಕರಿಗೆ ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದ್ದು, ಚರ್ಚೆ ಹುಟ್ಟುಹಾಕಿದೆ. ಇಷ್ಟಕ್ಕೂ ಹೋಟೆಲ್‌ನವರು ಹೇಳಿರೋದೇನು ಗೊತ್ತಾ?
ಬಹುತೇಕ ಹೋಟೆಲ್‌ಗಳು ಗ್ರಾಹಕ ಸ್ನೇಹಿಯಾಗಿ ಉಪಚರಿಸುತ್ತವೆ. ಗ್ರಾಹಕರ ಬಾಯಿಗೆ ಹಾಗೂ ಮನಸ್ಸಿಗೆ ಹಿತ ನೀಡುವಂತೆ ಅವರನ್ನು ಸತ್ಕರಿಸುತ್ತವೆ. ಈ ಕಾರಣದಿಂದಲೇ ಜನರ ಕೆಲ ಹೋಟೆಲ್‌ಗಳಿಗೆ ಡೈಲಿ ಕಸ್ಟಮರ್ ಕೂಡ ಆಗಿರುತ್ತಾರೆ. ಕೆಲವರು ಪ್ರತಿನಿತ್ಯವೂ ಚರ್ಚೆಗೆಂದೇ ಕೆಲ ಹೋಟೆಲ್‌ಗಳಿಗೆ ಹೋಗುವವರೂ ಇದ್ದಾರೆ. ಆದರೆ, ಬೆಂಗಳೂರಿನ ಪ್ರಖ್ಯಾತ ಹೋಟೆಲ್‌ವೊಂದು ತಮ್ಮ ಗ್ರಾಹಕರಿಗೆ ವಿಶೇಷ ರೂಲ್ಸ್ ಜಾರಿ ಮಾಡಿದೆ. ಇಲ್ಲಿ ಯಾವ ಕಾರಣಕ್ಕೂ ಈ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಡಿ ಎಂದು ಸೂಚನಾ ಫಲಕ ಹಾಕುವ ಮೂಲಕ ಗಮನ ಸೆಳೆದಿದೆ.

ಖ್ಯಾತ ಹೋಟೆಲ್ ಸಮೂಹವಾದ "ಪಾಕಶಾಲ" ಹೋಟೆಲ್‌ವೊಂದರಲ್ಲಿ ಈ ರೀತಿಯ ಸೂಚನಾ ಫಲಕ ಹಾಕಲಾಗಿದೆ. "ಇಲ್ಲಿನ ಪೀಠೋಪಕರಣಗಳು ಊಟೋಪಚಾರಕ್ಕೆ ಮಾತ್ರ. ಭೂ ವ್ಯವಹಾರ, ರಾಜಕೀಯ ಚರ್ಚೆಗಳಿಗೆ ಅಲ್ಲ, ದಯವಿಟ್ಟು ಅರ್ಥ ಮಾಡಿಕೊಂಡು ಸಹಕರಿಸಿ" ಎಂದು ಬೋರ್ಡ್ ಹಾಕಿದೆ. ಈ ಫೋಟೋ ಅನ್ನು ಗ್ರಾಹಕರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಆದರೆ, ಹೋಟೆಲ್‌ನಲ್ಲಿ ಚರ್ಚೆ ನಡೆಸದೆ ಊಟ ಮಾಡುವಂತೆ ನಿರ್ಬಂಧ ಹೇರುವುದು ಸರಿನಾ ಅಥವಾ ತಪ್ಪಾ? ಎನ್ನುವ ಚರ್ಚೆ ನಡೆಯುತ್ತಿದೆ.
ಸಾಮಾನ್ಯವಾಗಿ ಬೆಂಗಳೂರಿನ ರಿಯಲ್ ಎಸ್ಟೇಟ್‌ನವರು ಕಾಫಿ ಆರ್ಡರ್ ಮಾಡಿ ಹೋಟೆಲ್‌ಗಳಲ್ಲಿ ಗಂಟೆಗಟ್ಟಲೆ ಕೂರುತ್ತಾರೆ. ಇನ್ನೂ ಕೆಲವರು ಎಷ್ಟು ಹೊತ್ತಾದರೂ ಬೇರೆಯವರಿಗೆ ಸ್ಥಳ ನೀಡದೆ ರಾಜಕೀಯ ಚರ್ಚೆಗಳನ್ನು ಕೂಡ ನಡೆಸುತ್ತಿರುತ್ತಾರೆ. ಇದರಿಂದ ಕೆಲವರಿಗೆ ಕಸಿವಿಸಿಯಾಗುವ ಕಾರಣದಿಂದಲೂ ಹೋಟೆಲ್‌ನವರು ಈ ರೀತಿ ರೂಲ್ಸ್ ಜಾರಿ ಮಾಡಿರಬಹುದು ಎಂದು ಹೇಳುತ್ತಿದ್ದಾರೆ.

ಇನ್ನೂ ಕೆಲವರು ಹೋಟೆಲ್‌ಗಳು ಇರುವುದು ಹಸಿವು ನೀಗಿಸಿಕೊಳ್ಳಲು. ನೆಮ್ಮದಿಯಾಗಿ ಒಂದು ಊಟ ಮಾಡಿ ಹೋಗೋಣ ಎಂದೇ ಬಹುತೇಕರು ಹೋಟೆಲ್‌ಗಳಿಗೆ ಬರುತ್ತಾರೆ. ಅಲ್ಲಿ ರಾಜಕೀಯ ಹಾಗೂ ರಿಯಲ್ ಎಸ್ಟೇಟ್‌ನ ಚರ್ಚೆಗಳ ಅನಗತ್ಯ. ಇದರಿಂದ ಉಳಿದ ಗ್ರಾಹಕರಿಗೆ ತೊಂದರೆಯಾಗುವುದು ಮಾತ್ರವಲ್ಲದೆ, ಗಂಟೆಗಟ್ಟಲೆ ಕಾಯಬೇಕಾದ ಕಾರಣ ಹೋಟೆಲ್‌ನವರಿಗೂ ನಷ್ಟ ಎದುರಾಗುತ್ತದೆ. ಹಾಗಾಗಿ ಹೋಟೆಲ್‌ನವರ ರೂಲ್ಸ್ ಸರಿಯಾಗಿದೆ ಎಂದು ಪರವಾಗಿ ಹೇಳಿದ್ದಾರೆ.
ಕೆಲವೇ ಗ್ರಾಹಕರು ಗಂಟೆಗಟ್ಟಲೆ ಹೋಟೆಲ್‌ಗಳಲ್ಲಿ ಕೂತರೆ, ಬೇರೆ ಗ್ರಾಹಕರಿಗೆ ಕಾಯುವ ತಾಳ್ಮೆ ಇರುವುದಿಲ್ಲ. ಹೋಟೆಲ್‌ನಲ್ಲಿ ಜನಜಂಗುಳಿ ಇದ್ದರೆ, ಗ್ರಾಹಕರು ಬೇರೆ ಹೋಟೆಲ್‌ಗಳಿಗೆ ತೆರಳುತ್ತಾರೆ. ಇದರಿಂದ ಹೋಟೆಲ್ ವ್ಯವಹಾರದ ಮೇಲೂ ಪರಿಣಾಮ ಬೀರುತ್ತೆ. ಹಾಗಾಗಿ, ಇಲ್ಲಿ ಗಂಟೆಗಟ್ಟಲೆ ಚರ್ಚೆ ಮಾಡುವ ಬದಲಿಗೆ, ಬಂದ್ವಾ-ತಿಂದ್ವಾ-ಹೋದ್ವಾ ರೂಲ್ಸ್ ಫಾಲೋ ಮಾಡೋದೆ ಒಳ್ಳೇದು ಎಂದು ಹೇಳುತ್ತಿದ್ದಾರೆ. ಎಲ್ಲ ಹೋಟೆಲ್‌ಗಳಲ್ಲಿ ಇದೇ ರೀತಿಯ ರೂಲ್ಸ್ ಜಾರಿ ಮಾಡಿದರೆ, ಅನಗತ್ಯ ಚರ್ಚೆ ಬದಲಿಗೆ ನೆಮ್ಮದಿಯಾಗಿ ಊಟ ಮಾಡಬಹುದು ಎಂದು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.












Click it and Unblock the Notifications