Costly Dog: ದುಬಾರಿ ಶ್ವಾನಗಳ ಒಡೆಯ ಸತೀಶ್ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ
ಮನುಷ್ಯರೆಂದ ಮೇಲೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಸಕ್ತಿ ಇದ್ದೇ ಇರುತ್ತದೆ. ತಮ್ಮ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಕೆಲವರು ತಮ್ಮ ಹವ್ಯಾಸಗಳನ್ನು ಪೋಷಿಸಿಕೊಂಡು ಬರುತ್ತಾರೆ. ಹಳೆಯ ಕಾಯಿನ್‌ಗಳನ್ನು ಸಂಗ್ರಹಿಸುವುದು, ವಿವಿಧ ರೀತಿಯ ಕಾರುಗಳನ್ನು ಸಂಗ್ರಹಿಸುವುದು, ಹಳೆಯ ವಸ್ತುಗಳನ್ನು ಸಂಗ್ರಹಿಸುವುದು, ದುಬಾರಿ ಬಟ್ಟೆ ಅಥವಾ ಚಪ್ಪಲಿಗಳನ್ನು ಸಂಗ್ರಹಿಸುವುದು, ದುಬಾರಿ ವಾಚ್ ಕಲೆಕ್ಷನ್ ಹೀಗೆ ವಿವಿಧ ರೀತಿಯ ಹವ್ಯಾಸ ಅಥವಾ ಕ್ರೇಜ್ ಇರುತ್ತದೆ. ಅದೇ ರೀತಿ ಬೆಂಗಳೂರಿನ ಈ ವ್ಯಕ್ತಿಗೆ ಶ್ವಾನಗಳನ್ನು ಸಾಕುವುದರಲ್ಲಿ ಕ್ರೇಜ್ ಇದ್ದು, ಇದೀಗ ವಿಶ್ವದ ಅತ್ಯಂತ ದುಬಾರಿ ಶ್ವಾನವನ್ನು ಖರೀದಿಸಿ ಬೆಂಗಳೂರಿಗೆ ತಂದಿದ್ದಾರೆ.
ಬೆಂಗಳೂರು ಮೂಲದ ನಾಯಿ ತಳಿಗಾರ ಎಸ್.ಸತೀಶ್ ಅತೀವ ಶ್ವಾನ ಪ್ರೇಮಿಯಾಗಿದ್ದು, ವಿಶ್ವದ ಅತ್ಯಂತ ದುಬಾರಿ ಶ್ವಾನಗಳು ತಮ್ಮ ಬಳಿ ಇರಬೇಕು ಎನ್ನುವುದು ಇವರ ಅಭಿಲಾಷೆ ಆಗಿದೆ. ಈ ಹಿಂದೆ ಇಪ್ಪತ್ತು ಕೋಟಿ ರೂಪಾಯಿ ಶ್ವಾನ ಖರೀದಿಸಿ ಜನಪ್ರಿಯತೆ ಪಡೆದು ಎಲ್ಲೆಡೆ ವೈರಲ್ ಆಗಿದ್ದ ಎಸ್. ಸತೀಶ್ ಇದೀಗ ಬರೋಬ್ಬರಿ 50 ಕೋಟಿ ರೂಪಾಯಿ ಬೆಲೆ ಬಾಳುವ ಶ್ವಾನವೊಂದನ್ನು ಖರೀದಿಸಿದ್ದಾರೆ.

ಒಂದು ಶ್ವಾನಕ್ಕೆ 50 ಕೋಟಿ ರೂಪಾಯಿಯೇ ಎಂದು ಆಶ್ಚರ್ಯಪಟ್ಟುಕೊಂಡರೂ ಕೂಡ ಇದು ಸತ್ಯ ಸಂಗತಿ. ಬೆಂಗಳೂರಿನ ಶ್ವಾನ ಪ್ರಿಯ ಎಸ್. ಸತೀಶ್ ವಿಶ್ವದಲ್ಲೇ ಅತೀ ಅಪರೂಪದ ವುಲ್ಫ್-ಕಕೇಶಿಯನ್ ಶೆಫರ್ಡ್ ಹೈಬ್ರಿಡ್‌ಅನ್ನು ಖರೀದಿಸಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಶ್ವಾನವಾಗಿರುವ ಈ ವುಲ್ಫ್‌ಡಾಗ್‌ಗಾಗಿ ಅವರು ಬರೋಬ್ಬರಿ 4.4 ಮಿಲಿಯನ್ ಪೌಂಡ್ ಅಂದರೆ 49.23 ಕೋಟಿ ರೂಪಾಯಿ ವ್ಯಹಿಸಿದ್ದಾರಂತೆ. ಇನ್ನು ಈ ಶ್ವಾನದ ಸಾಗಾಣಿಕೆ ಎಲ್ಲಾ ಸೇರಿ 50 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಯುನೈಟೆಡ್ ಸ್ಟೇಟ್ಸ್‌ನಿಂದ ಈ ನಾಯಿಯನ್ನು ತರಲಾಗಿದ್ದು, ತೋಳದಂತೆ ಕಾಣುವ ಈ ದೈತ್ಯ ಶ್ವಾನವು 8 ತಿಂಗಳ ವಯಸ್ಸಿಗೆ ಬರೋಬ್ಬರಿ 75ಕೆಜಿಗೂ ಹೆಚ್ಚು ತೂಕ ಇದೆ. ಸದಾ ಹಸಿವಿನಿಂದ ಇರುವ ಈ ಶ್ವಾನವು ಪ್ರತಿ ದಿನ ಸುಮಾರು 3 ಕೆಜಿ ಹಸಿ ಮಾಂಸವನ್ನು ತಿನ್ನುತ್ತದೆಯಂತೆ. ಈ ಶ್ವಾನದ ಖರೀದಿ ಮಾತ್ರವಲ್ಲ ಸಾಕುವುದು ಕೂಡ ತುಂಬಾ ದುಬಾರಿಯಾಗಿದೆ. ನೋಡಲು ದೈತ್ಯವಾಗಿರುವ ಈ ಶ್ವಾನವು ಎಂತವರಿಗಾದರೂ ಭಯ ಹುಟ್ಟಿಸುತ್ತದೆ. ಆದರೆ ಮಾಲೀಕನ ಅಣತೆಯಂತೆ ನಡೆದುಕೊಳ್ಳುವ ಚಾಕಚಕ್ಯತೆ ಹೊಂದಿದೆ.

ಎಸ್.ಸತೀಶ್ ಯಾರು? ದುಬಾರಿ ಶ್ವಾನಗಳಿಂದ ಆಗುವ ಲಾಭವೇನು?
ತಮ್ಮ ಶ್ವಾನಗಳಿಂದಲೇ ಜನಪ್ರಿಯತೆ ಪಡೆದಿರುವ ಎಸ್.ಸತೀಶ್ ಮೂಲತಃ ಬೆಂಗಳೂರಿನವರು. ಮೊದಲಿನಿಂದಲೂ ಶ್ವಾನದ ಮೇಲೆ ಅತೀವ ಪ್ರೀತಿಯನ್ನು ಹೊಂದಿದ್ದ ಅವರು ಅದನ್ನೇ ವೃತ್ತಿಯಾಗಿ ಮಾಡಿಕೊಂಡರು. ಶ್ವಾನಗಳನ್ನು ಸಾಕುವುದು ಹಾಗೂ ಮಾರುವುದು ಅವರ ವ್ಯವಹಾರವಾಗಿದೆ. ಸುಮಾರು 10 ವರ್ಷಗಳ ಹಿಂದೆ ಶ್ವಾನ ಸಾಕುವುದನ್ನು ಆರಂಭಿಸಿದ ಸತೀಶ್, ಈಗಾಗಲೇ 150ಕ್ಕೂ ಹೆಚ್ಚು ವಿವಿಧ ತಳಿಗಳ ಶ್ವಾನಗಳನ್ನು ಹೊಂದಿದ್ದಾರೆ. ಇವರು ತಮ್ಮ ಬಳಿ ಇರುವ ವಿಭಿನ್ನ ತಳಿಯ ಶ್ವಾನಗಳನ್ನು ಪ್ರದರ್ಶನಕ್ಕೆ ಕರೆದುಕೊಂಡು ಹೋಗುತ್ತಾರೆ. 30 ನಿಮಿಷಗಳ ಪ್ರದರ್ಶನಕ್ಕೆ ಸತೀಶ್ ಕನಿಷ್ಠ 25,000 ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ತಮ್ಮ ಹವ್ಯಾಸವನ್ನೇ ವೃತ್ತಿ ಮಾಡಿಕೊಂಡ ಸತೀಶ್ ಸದ್ಯ ಲಾಭದಾಯಕ ಬ್ಯುಸಿನೆಸ್ ನಡೆಸುತ್ತಿದ್ದಾರೆ.












Click it and Unblock the Notifications