ಟ್ರಾಫಿಕ್ ಕಿರಿಕಿರಿ, ಭಾರತದಲ್ಲಿ ಮುಂಬೈ ನಂ. 1, ಬೆಂಗಳೂರು ತೀರಾ ಹಿಂದಿಲ್ಲ
ಬೆಂಗಳೂರು: ಆಫೀಸ್‌ನಲ್ಲಿ ದಿನಕ್ಕೆ 10-12 ಗಂಟೆ ಕೆಲಸ ಮಾಡಿ ತರಾತುರಿಯಲ್ಲಿ ಮನೆಗೆ ಸೇರಲು ಹೊರಟರೆ ಟ್ರಾಫಿಕ್‌ನಲ್ಲಿ 1-2 ಗಂಟೆ ಕಾಲ ಕಳೆಯಬೇಕೆಂದರೆ ಅದೆಷ್ಟು ಸಹನೆ ಇರಬೇಕು. ಬೆಂಗಳೂರಿನಂಥ ನಗರವಾಸಿಗಳಿಗೆ ಇಂಥದ್ದೊಂದು ಸಹನೆ ಬೆಳೆದುಹೋಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ಒತ್ತಡ ಇರುವ ಅಗ್ರ ಹತ್ತು ನಗರಗಳ ಪಟ್ಟಿಯಲ್ಲಿ ಬೆಂಗಳೂರು ಐದನೇ ಸ್ಥಾನ ಹೊಂದಿದೆ.
ಬೆಂಗಳೂರಿಗೆ ಸಮಾಧಾನ ಎಂದರೆ ಟ್ರಾಫಿಕ್ ಒತ್ತಡದ ವಿಚಾರದಲ್ಲಿ ಮುಂಬೈಗಿಂತಲೂ ತುಸು ಕಡಿಮೆ ಇದೆ. ಗೋಶಾರ್ಟಿ (GoShorty) ಎಂಬ ಜಾಗತಿಕ ಸಂಶೋಧನಾ ಸಂಸ್ಥೆ ಪ್ರಕಟಿಸಿರುವ ಅತಿ ಹೆಚ್ಚು ವಾಹನದಟ್ಟನೆಯ ನಗರಗಳ ಪಟ್ಟಿಯಲ್ಲಿ ಮುಂಬೈ 3ನೇ ಸ್ಥಾನದಲ್ಲಿದೆ. ಟಾಪ್-10 ಪಟ್ಟಿಯಲ್ಲಿ ದೆಹಲಿಯೂ ಇದೆ. ಬೆಂಗಳೂರು ಮತ್ತು ದೆಹಲಿ ಸರಿಸಮ ಸ್ಥಿತಿಯಲ್ಲಿವೆ. ಅಲ್ಲಿಗೆ ಭಾರತದ ಮೂರು ನಗರಗಳು ಟಾಪ್ 10 ಪಟ್ಟಿಯಲ್ಲಿರುವುದು ಗಮನಾರ್ಹ.
ಬೆಂಗಳೂರಿನಲ್ಲಿ ವಾಹನದಟ್ಟನೆ ಶೇ. 48ರಷ್ಟು ಇದೆಯಂತೆ. ಇಲ್ಲಿ ಒಂದು ವರ್ಷಕ್ಕೆ 115 ಗಂಟೆಗಳನ್ನು ಟ್ರಾಫಿಕ್ ನುಂಗಿಹಾಕುತ್ತೆ ಎಂದು ಗೋಶಾರ್ಟಿ ಸಂಸ್ಥೆಯ ಸಮೀಕ್ಷೆ ಹೇಳುತ್ತದೆ.

ಟರ್ಕಿ ದೇಶದ ಇಸ್ತಾಂಬುಲ್ ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ದಟ್ಟನೆ ಇರುವ ನಗರ ಎನಿಸಿದೆ. ಇಲ್ಲಿ ವಾಹನ ದಟ್ಟನೆ ಶೇ. 62ರಷ್ಟು ಇದೆ. ಕೊಲಂಬಿಯಾ ದೇಶದ ಬೊಗೋಟಾ ನಗರದಲ್ಲಿ ಇದು ಶೇ. 55 ಇದೆ. ಮುಂಬೈ ಶೇ. 53ರಷ್ಟು ವಾಹನ ದಟ್ಟನೆ ಹೊಂದಿದೆ.
ಕುತೂಹಲ ಎಂದರೆ ವಾಹನದಟ್ಟನೆಯ ನಗರಗಳ ಟಾಪ್-10 ಪಟ್ಟಿಯಲ್ಲಿ ಜಪಾನ್‌ನ ಟೋಕಿಯೋ ಬಿಟ್ಟರೆ ಬೇರೆ ಮುಂದುವರಿದ ದೇಶಗಳ ಯಾವ ನಗರವೂ ಇಲ್ಲ. ರೊಮೇನಿಯಾ, ಕೊಲಂಬಿಯಾ, ಪೋಲೆಂಡ್, ಇಸ್ರೇಲ್, ಫಿಲಿಪ್ಪೈನ್ಸ್‌ನ ನಗರಗಳು ಈ ಪಟ್ಟಿಯಲ್ಲಿವೆ.
ಅತಿಹೆಚ್ಚು ಟ್ರಾಫಿಕ್ ಕಂಜೆಶ್ಚನ್ ಇರುವ ನಗರಗಳು
1) ಇಸ್ತಾಂಬುಲ್, ಟರ್ಕಿ: 62%
2) ಬೊಗೋಟಾ, ಕೊಲಂಬಿಯಾ: 55%
3) ಮುಂಬೈ, ಭಾರತ: 53%
4) ಬುಕಾರೆಸ್ಟ್, ರೊಮಾನಿಯ: 50%
5) ಬೆಂಗಳೂರು, ಭಾರತ: 48%
6) ಮುಂಬೈ, ಭಾರತ: 48%
7) ಲೋಡ್ಜ್, ಪೋಲೆಂಡ್: 45%
8) ಟೆಲ್ ಅವಿವ್, ಇಸ್ರೇಲ್: 43%
9) ಟೋಕಿಯೋ, ಜಪಾನ್: 43%
10) ಮನೀಲಾ, ಫಿಲಿಪ್ಪೈನ್ಸ್: 43%
ಏನಿದು ವಾಹನದಟ್ಟನೆ ಸಂಖ್ಯೆ?
ಬೆಂಗಳೂರಿನಲ್ಲಿ ಶೇ. 48ರಷ್ಟು ವಾಹನದಟ್ಟನೆ ಇದೆ ಎಂದು ಈ ಸಮೀಕ್ಷೆ ಹೇಳಿದೆ. ಇಲ್ಲಿ ವಾಹನ ದಟ್ಟನೆ ಎಂದರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳ ತಲುಪಲು ಸಾಮಾನ್ಯ ಸಂದರ್ಭಕ್ಕಿಂತ ಎಷ್ಟು ಹೆಚ್ಚುವರಿ ಸಮಯ ತಗಲುತ್ತದೆ ಎಂಬುದು ಲೆಕ್ಕ. ಅಂದರೆ ಟ್ರಾಫಿಕ್ ಇಲ್ಲದೇ ಇದ್ದಾಗ ಎಷ್ಟು ಸಮಯ ಆಗುತ್ತದೆ ಎಂಬುದು ಬೇಸ್‌ಲೈನ್. ಉದಾಹರಣೆಗೆ, ಬೆಂಗಳೂರಿನಲ್ಲಿ ಯಾವುದೇ ಟ್ರಾಫಿಕ್ ಇಲ್ಲದಿದ್ದರೆ ಜಯನಗರದಿಂದ ರಾಜಾಜಿನಗರಕ್ಕೆ 30 ನಿಮಿಷ ಆಗುತ್ತೆ ಎಂದಿಟ್ಟುಕೊಳ್ಳಿ. ನಗರದಲ್ಲಿ ಟ್ರಾಫಿಕ್ ದಟ್ಟನೆ ಶೇ. 50 ಇತ್ತೆಂದರೆ ಇದೇ ಸ್ಥಳ ತಲುಪಲು 45 ನಿಮಿಷ ಆಗುತ್ತದೆ.
ಬೆಂಗಳೂರಿನಲ್ಲಿ ಮಳೆಯ ಆರ್ಭಟದಲ್ಲಿ ಟ್ರಾಫಿಕ್ ಯದ್ವಾತದ್ವಾ ಹೆಚ್ಚಿಹೋಗಿದೆ. ಈಗ ಟ್ರಾಫಿಕ್ ಮಾಪನ ಮಾಡಿದರೆ ಬಹುಶಃ ವಿಶ್ವದ ನಂಬರ್ ಒನ್ ಟ್ರಾಫಿಕ್ ಕಿರಿಕಿರಿಯ ನಗರಿ ಎಂಬ ಪಟ್ಟ ಬೆಂಗಳೂರಿಗೆ ಬರಬಹುದು.

ಉದ್ಯಾನನಗರಿಯಲ್ಲಿ ಜನಸಂಖ್ಯೆ 1.3 ಕೋಟಿ ಇದೆ. ವಾಹನಗಳ ಸಂಖ್ಯೆಯೇ ಒಂದು ಕೋಟಿ ಗಡಿ ದಾಟಿದೆ. ಅವ್ಯವಸ್ಥಿತವಾಗಿ ಬೆಳೆದು ನಿಂತಿರುವ ಬೆಂಗಳೂರಿನ ರಸ್ತೆಗಳಿಗೆ ಇಷ್ಟು ಪ್ರಮಾಣದ ವಾಹನಗಳನ್ನು ನಿಭಾಯಿಸುವ ಶಕ್ತಿ ಇಲ್ಲ. ಆದ ಕಾರಣ ಟ್ರಾಫಿಕ್ ದಟ್ಟನೆ ಹೆಚ್ಚು.
ಗಮನಿಸಬೇಕಾದ ಅಂಶವೆಂದರೆ, ಬೆಂಗಳೂರಿನಲ್ಲಿ ಸೌಕರ್ಯ ಅಭಿವೃದ್ಧಿ ಯೋಜನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಮೆಟ್ರೋ ಎರಡನೇ ಹಂತ ಇನ್ನೂ ಪೂರ್ಣಗೊಂಡಿಲ್ಲ. ರಸ್ತೆ ದುರಸ್ತಿ ಕಾರ್ಯ, ವೈಟ್ ಟಾಪಿಂಗ್ ಇತ್ಯಾದಿ ಕಾಮಗಾರಿಗಳು ನಗರದ ವಿವಿಧೆಡೆ ನಡೆಯುತ್ತಿದೆ. ಇನ್ನೂ ಕೆಲ ವರ್ಷ ಇದು ಮುಂದುವರಿಯಲಿದೆ. ಅಲ್ಲಿಯವರೆಗೂ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲ್ಲ.
ಮುಂದೆ ಸಬರ್ಬನ್ ರೈಲು ಯೋಜನೆ ಬರಲಿದೆ. ಇವೆಲ್ಲವೂ ಪೂರ್ಣಗೊಂಡ ಬಳಿಕ ಬೆಂಗಳೂರಿನ ಜನತೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಗೊಂಡು ನಿರಾಳವಾಗಬಹುದು.
(ಒನ್ಇಂಡಿಯಾ ಸುದ್ದಿ)












Click it and Unblock the Notifications