Cycling Benefits: ಸೈಕ್ಲಿಂಗ್ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ!
ಬಾವಿಗಿಳಿಯದೆ ಬಾವಿಯ ಆಳವನ್ನು ಅಳೆಯಲು ಸಾಧ್ಯವಿಲ್ಲ. ಹಾಗೆಯೇ ಯಾವುದೇ ಕ್ಷೇತ್ರದಲ್ಲಿ ಒಂದಷ್ಟು ಅನುಭವ ಪಡೆಯದೆ ಅದರ ಆಳ ಅಗಲಗಳ ಕುರಿತ ಅರಿವು ನಮಗೆ ದಕ್ಕಲಾರದು. ಇಂತಹ ಅರಿವು ಕೇವಲ ಜ್ಞಾನದ ವಿಷಯಕ್ಕೆ ಮಾತ್ರ ಸೀಮಿತವಾಗಬೇಕಿಲ್ಲ.
ನಮ್ಮ ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ನಾವು ಹೆಚ್ಚು ಹೆಚ್ಚು ಅರಿವು ಪಡೆದುಕೊಳ್ಳಬೇಕಾದದ್ದು ಅಗತ್ಯ. ಆ ನಿಟ್ಟಿನಲ್ಲಿ ಸೈಕ್ಲಿಂಗ್ ಮಾಡುವುದರಿಂದ ಆರೋಗ್ಯದ ಮೇಲಾಗುವ ಸಾಕಾರಾತ್ಮಕ ಪರಿಣಾಮಗಳ ಕುರಿತು ಕಳೆದ ಹಲವು ವರ್ಷಗಳಿಂದ ಸೈಕ್ಲಿಂಗ್ ಮಾಡುವ ವ್ಯಕ್ತಿಯೊಬ್ಬರ ಅನುಭವದಿಂದ ತಿಳಿದುಕೊಳ್ಳೋಣ.

ಮನೆಗೊಂದು ಸೈಕಲ್ ವೈದ್ಯರಿಗೆ ಸಮ
'ನಾವು ಇರುವುದು ಬೊಮ್ಮನಹಳ್ಳಿ ಬಳಿಯ ಬೇಗೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ. ಕೆಲ ವರ್ಷಗಳಿಂದ ಅಪಾರ್ಟ್‌ಮೆಂಟ್ ನಾಲ್ಕೈದು ಮಂದಿ ಸ್ನೇಹಿತರ ಜೊತೆಗೂಡಿ ಪ್ರತಿ ಭಾನುವಾರ ಸೈಕ್ಲಿಂಗ್ ಮಾಡ್ತೀವಿ. ಪ್ರತಿ ಭಾನುವಾರ ಬೆಳಗ್ಗೆ ಆರು ಗಂಟೆಗೆಲ್ಲ ಎದ್ದು 60 ಕಿಮೀ ಹೆಚ್ಚು ಸೈಕ್ಲಿಂಗ್ ಮಾಡ್ತೀವಿ ಎನ್ನುತ್ತಾರೆ.
ನಮಗೆ ಪ್ರಾರಂಭದಲ್ಲಿ ಸೈಕ್ಲಿಂಗ್ ಮಾಡಲು ಸಾಕಷ್ಟ ತ್ರಾಸ ಆಗುತ್ತಿತ್ತು. ಒಂದೆರೆಡು ಕಿಮೀ ಸೈಕ್ಲಿಂಗ್ ಮಾಡುತ್ತಿದ್ದಂತೆ ಆಯಾಸದಿಂದ ಬಳಲುತ್ತಿದ್ದೆವು. ಸ್ನೇಹಿತರು ಜೊತೆಗಿದ್ದ ಪರಿಣಾಮ ಒಬ್ಬರಿಗೊಬ್ಬರು ಹುರಿದುಂಬಿಸಿಕೊಳ್ಳುತ್ತಾ ನೋವನ್ನು ಮರೆಯುತ್ತಿದ್ದೆವು. ಈಗ ನಮಗೆ ಸಲೀಸಲಾಗಿದೆ. ಹಾಗೂ ಪ್ರತಿವಾರವು ನಮ್ಮ ಆರೋಗ್ಯದ ಬ್ಯಾಲೆನ್ಸ್ ನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿದ್ದೇವೆ ಎಂದು ಬೇಗೂರಿನ ಶರತ್ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.
ಮಂಡಿ ನೋವು ಎಂದೂ ಬಾಧಿಸದು
'ಈಗ ನಾವು ಯುವಕರಿದ್ದೇವೆ. ಸದ್ಯ ದೇಹದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ನಮ್ಮ ವಯಸ್ಸು, ಆರೋಗ್ಯ ಹೀಗೆ ಇರುವುದಿಲ್ಲ. ವಯಸ್ಸಾದಂತೆ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಅದರಲ್ಲೂ ಜಡ್ಡುಗಟ್ಟಿದ ದೇಹವು ರೋಗ ರುಜಿನಗಳ ಆಶ್ರಯ ತಾಣವಾಗುತ್ತದೆ. ಆದರೆ, ದೇಹವನ್ನು ಸದಾ ಚಟುವಟಿಕೆಯಲ್ಲಿ ಇಟ್ಟುಕೊಳ್ಳುವವರಿಗೆ ರೋಗಗಳು ದೂರ ಇರುತ್ತವೆ.
ಮುಖ್ಯವಾಗಿ ವಯಸ್ಸಾದಂತೆ ನಮ್ಮ ಮೂಳೆಗಳು ಸವೆಯಲು ಪ್ರಾರಂಭಿಸುತ್ತವೆ. ಅದರಲ್ಲೂ ಮಂಡಿ ನೋವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಶಾಶ್ವತವಾಗಿ ಮುಕ್ತಿ ಪಡೆಯಬೇಕಾದರೆ ಈಗಿನಿಂದ ಸೈಕ್ಲಿಂಗ್ ಬಲು ಉಪಯೋಗಕಾರಿ ಎನ್ನುತ್ತಾ ನಗೆ ಬೀರುತ್ತಾರೆ ಅವರು.
ತೂಕ ಇಳಿಸಲು ಲಕ್ಷಗಟ್ಟಲೆ ಖರ್ಚು ಮಾಡಬೇಕಿಲ್ಲ
ಇವತ್ತು ತೂಕ ಇಳಿಸುವ ಪ್ರಕ್ರಿಯೆಯು ದೊಡ್ಡ ದಂಧೆಯಾಗಿ ವ್ಯಾಪಿಸಿಕೊಂಡಿದೆ. ಮಾತ್ರೆಗಳು, ವಿವಿಧ ರೀತಿಯ ಶೇಕ್ ಗಳನ್ನು ಕುಡಿಯುವ ಮೂಲಕ ತೂಕವನ್ನು ಇಳಿಸಿಕೊಳ್ಳಿ ಅಂತ ಜಾಹಿರಾತು ಫಲಕಗಳನ್ನು ನೋಡಬಹುದು. ಇದರ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂ. ಕಳೆದುಕೊಂಡು, ಆರೋಗ್ಯವನ್ನು ಮತ್ತಷ್ಟು ಹಾಳು ಮಾಡಿಕೊಂಡಿರುವ ಬೇಕಾದಷ್ಟು ಪ್ರಕರಣಗಳು ನಮ್ಮ ನಡುವೆ ಇದೆ.
ತೂಕ ಇಳಿಸಲು, ದೇಹದಲ್ಲಿರುವ ಬೊಜ್ಜನ್ನು ಕರಗಿಸಲು ದಿನದಲ್ಲಿ ಒಂದು ಅರ್ಧಗಂಟೆ ಸೈಕ್ಲಿಂಗ್ ಮಾಡಿದರೂ ಸಾಕು. ಯಾವುದೇ ಅಡ್ಡಪರಿಣಾಮ ಇಲ್ಲದೆ, ಆರೋಗ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳುತ್ತಲೆ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ಉಗುರಲ್ಲಿ ಪರಿಹಾರ ಆಗುವ ವಿಷಯಕ್ಕೆ ಕೊಡಲಿ ಎತ್ತಿಕೊಂಡ ಬಂದಂತೆ ನೈಸರ್ಗಿಕವಾಗಿ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಜಾಗದಲ್ಲಿ ಕೃತಕ ಪದಾರ್ಥಗಳನ್ನು ಬಳಸಿ ಅಪಾಯಕ್ಕೆ ಸಿಲುಕಬೇಡಿ ಎನ್ನುತ್ತಾರೆ ಆರೋಗ್ಯ ತಜ್ಞರು.
ಹೀಗೆ ಸೈಕ್ಲಿಂಗ್ ಮಾಡುವುದರಿಂದ ಹೃದಯ ಸಮಸ್ಯೆ, ಅಸ್ತಮಾ, ನರ ದೌರ್ಬಲ್ಯ, ಸ್ನಾಯು ಸೆಳೆತ ಸೇರಿದಂತೆ ಹಲವು ರೋಗಗಳನ್ನು ಒಂದು ನಯಾಪೈಸ ಖರ್ಚಿಲ್ಲದಂತೆ ತಡೆಯಬಹುದಾಗಿದೆ. ಮನೆಗೊಂದು ಸೈಕಲ್ ಇದ್ದರೆ ಒಬ್ಬ ಡಾಕ್ಟರ್ ಇದ್ದಂತೆ. ಎಲ್ಲವನ್ನು ಅದೇ ಗುಣ ಪಡಿಸುತ್ತದೆ.












Click it and Unblock the Notifications