ಬಾಗಲಕೋಟೆ ಜಿಲ್ಲೆಯಲ್ಲಿ ಬೆಟ್ಟದ ಮಧ್ಯೆ ಜಲವೈಭವ: ಕೈ ಬೀಸಿ ಕರೆಯುತ್ತಿದೆ ಮಿನಿ ಫಾಲ್ಸ್
ಬಾಗಲಕೋಟೆ, ಜು.1: ಆ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಅನಾಹುತ ಸಾಕಷ್ಟು. ಸತತ ಎರಡು ವರ್ಷ ಭೀಕರ ಪ್ರವಾಹ. ಇದರ ಮಧ್ಯ ಅದೇ ವರುಣನ ಆರ್ಭಟದಿಂದ ಒಂದು ಕಡೆಗೆ ಕಣ್ಣಿಗೆ ತಂಪು ಹಾಗೂ ಕಿವಿ ಇಂಪು ಮೂಡಿಸುವ ಕಿರುಜಲಪಾತದ ವೈಭವ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಬೆಟ್ಟದ ಮೇಲಿಂದ ಸುರಿಯುವ ನೀರಿಗೆ ಮೈಯೊಡ್ಡಿ ಸುಮಧುರ ಅನುಭವ ಪಡೆಯುತ್ತಿದ್ದಾರೆ ನೂರಾರು ಜನರು. ಸಂಗೀತದ ಅಲೆಯಿರುವ, ಝುಳುಝುಳು ಹರಿಯುವ, ಧುಮ್ಮಿಕ್ಕಿ ಬರುವ ನೀರನ್ನು ಕಂಡು ಈಗ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಬೆಟ್ಟದ ಮಧ್ಯೆ ಜಲವೈಭವದ ಎಲ್ಲರನ್ನು ಸೆಳೆಯುತ್ತಿದ್ದು ಜನರು ಪುಲ್ ಮೋಜು ಮಸ್ತಿ ಮಾಡುತ್ತಿದ್ದಾರೆ.
ಬೆಟ್ಟವನ್ನು ಸೀಳಿಕೊಂಡು ಬೋರ್ಗರೆಯುತ್ತಿರುವ ಜಲಲಲ ಜಲಧಾರೆ. ತಕಥೈ ತಕಥೈ ಎಂದು ಎತ್ತರದಿಂದ ಬೀಳುವ ನೀರಿನ ನರ್ತನ. ದುಮ್ಮಿಕ್ಕುವ ಜಲಪಾತಕ್ಕೆ ಮೈಯೊಡ್ಡಿ ಕೇಕೆ ಹಾಕಿ ಸಂಭ್ರಮಿಸುತ್ತಿರುವ ಯುವಕರು, ಯುವತಿಯರು. ಹೌದು, ಇದು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ಕೋಟೆಕಲ್ ಪಾಲ್ಸ್, ಇದನ್ನು ಈ ಭಾಗದಲ್ಲಿ ದಿಡುಗು ಅಂತ ಕೂಡ ಕರೆಯುತ್ತಾರೆ. ಕಿರುಜಲಪಾತದ ವೈಭವ ಜೋಗ ಜಲಪಾತ, ಗೋಕಾಕ್ ಪಾಲ್ಸ್ ಗಿಂತ ತಾನೇನು ಕಡಿಮೆ ಎನ್ನುವಂತೆ ನೃತ್ಯಗೈಯುತ್ತಿದೆ. ಸದ್ಯ ಜನರನ್ನು ಕೈ ಮಾಡಿ ಕರೆಯುತ್ತಿದೆ. ಕೋಟೆಕಲ್ ಗ್ರಾಮಕ್ಕೆ ಹೊಂದಿಕೊಂಡ ಬೆಟ್ಟದಲ್ಲಿ ಈಗ ಧುಮ್ಮಿಕ್ಕಿ ಹರಿಯುವ ಜಲಪಾತದ ಕಲರವ ನಾದನಿನಾದ ಎಲ್ಲರನ್ನು ಆಕರ್ಷಿಸುತ್ತಿದೆ.

ಮಿಂದೇಳುತ್ತಾ ಹರ್ಷಪಡುತ್ತಿರುವ ಪ್ರವಾಸಿಗರು
ಸುಮಾರು ಐವತ್ತು ಅಡಿ ಎತ್ತರದಿಂದ ಬೀಳುವ ಜಲಪಾತ ವೀಕ್ಷಿಸಲು ಯುವಕರು, ಮಹಿಳೆಯರು, ಕಾಲೇಜ್ ವಿದ್ಯಾರ್ಥಿಗಳು ತಂಡೋಪತಂಡವಾಗಿ ಬರುತ್ತಿದ್ದಾರೆ. ಬೆಟ್ಟಗಳ ಮಧ್ಯದಲ್ಲಿನ ಜಲಧಾರೆಯನ್ನು ಕಂಡು ಅದರಲ್ಲಿ ಮಿಂದೇಳುತ್ತಾ ಹರ್ಷಪಡುತ್ತಿದ್ದಾರೆ. ಪ್ರತಿದಿನವೂ ಇಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇನ್ನು ವೀಕೆಂಡ್ ಸಂದರ್ಭದಲ್ಲಿ ಜಲಧಾರೆ ವೀಕ್ಷಣೆಗೆ ಬರುವವರ ಸಂಖ್ಯೆ ಇನ್ನು ಹೆಚ್ಚಾಗಿರುತ್ತದೆ. ಜಲಪಾತ ವೀಕ್ಷಿಸಲು ಬಹಳ ಸಂತೋಷ ಆಗಿದೆ. ಎಲ್ಲರೂ ಬಂದೂ ಎಂಜಾಯ್ ಮಾಡುತ್ತಿದ್ದಾರೆ..

ನೀರಲ್ಲಿ ಕುಣಿದು ಕುಪ್ಪಳಿಸ್ತಾರೆ ಯುವಕರು
ಪ್ರತಿ ವರ್ಷ ಮಳೆಗಾಲ ಬಂತೆಂದರೆ ಸಾಕು ಈ ಜಲಪಾತ ತುಂಬಿ ಹರಿಯುತ್ತದೆ. ಈ ವರ್ಷ ವರುಣನ ಆರ್ಭಟ ಜೋರಾಗಿದ್ದರಿಂದ ಕೋಟೆಕಲ್ ಪಾಲ್ಸ್ ಅಬ್ಬರವೂ ಜೋರಾಗಿದೆ. ಕಳೆದ ಒಂದು ವಾರದಿಂದ ಜಲಪಾತ ವೀಕ್ಷಣೆಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬಾಗಲಕೋಟೆ ಜಿಲ್ಲೆ ಸೇರಿದಂತೆ ವಿವಿಧ ಕಡೆಯಿಂದ ಸಾವಿರಾರು ಜನ ದಿನಾಲು ಈ ಜಲಪಾತದ ಸುಂದರ ದೃಶ್ಯವನ್ನು ಸವಿಯೋಕೆ ಬರುತ್ತಾರೆ. ಜಲಪಾತ ನೋಡೋಕೆ ಹೋದರೆ ಸುಮ್ಮನೆ ಇರೋಕೆ ಮನಸ್ಸೇ ಆಗೋದಿಲ್ಲ, ಅಲ್ಲಿ ಸುರಿಯುತ್ತಿರುವ ಜಲಧಾರೆಯಲ್ಲಿ ಮಿಂದೇಳಬೇಕು ಮನಬಂದಂತೆ ಕೂಗಾಡಿ ಹರ್ಷಪಡಬೇಕೆಂಬ ಭಾವನೆ ಎಲ್ಲರಲ್ಲೂ ಮೂಡುತ್ತೆ. ಅದರಂತೆ ಜಲಪಾತ ವೀಕ್ಷಣೆಗೆ ಬಂದ ಎಲ್ಲರೂ ನೀರಲ್ಲಿ ನೆನೆದು ಸಂಭ್ರಮ ಪಡ್ತಾರೆ. ಯುವಕರಂತೂ ನೀರಲ್ಲಿ ಕುಣಿದು ಕುಪ್ಪಳಿಸ್ತಾರೆ.

ರಸ್ತೆ ಅಭಿವೃದ್ಧಿಗೆ ಪ್ರವಾಸಿಗರ ಮನವಿ
ಈ ಜಲಪಾತ ಸದ್ಯ ಬಾಗಲಕೋಟೆ ಜಿಲ್ಲೆಯ ಪ್ರಸಿದ್ದ ಜಲಪಾತವಾಗಿ ಹೊರಹೊಮ್ಮುತ್ತಿದೆ. ತಾವು ತಂದ ತಿಂಡಿ ತಿನಿಸು ಊಟ ಕೂಡ ಹಸಿರು ವಾತಾವರಣದಲ್ಲಿ ಸವಿದು ಸಂಭ್ರಮಿಸ್ತಾರೆ. ಆದರೆ ಈ ಜಲಪಾತ ನೋಡಬೇಕಾದರೆ ಕನಿಷ್ಠ ಎಂದರೂ ಮೂರ್ನಾಲ್ಕು ಕಿ.ಮೀ. ದೂರ ಬೆಟ್ಟದಲ್ಲಿ ನಡೆಯಬೇಕು. ಕಲ್ಲುಮುಳ್ಳುಗಳ ಹಾದಿ ತುಳಿಯಬೇಕು. ನಂತರ ಕಾಣುವ ಜಲಪಾತ ನೀವು ನಡೆದು ಬಂದ ದಣಿವೆಲ್ಲವನ್ನು ಮರೆಸುತ್ತದೆ ಎನ್ನುವುದೇನೋ ನಿಜ. ಆದರೆ, ಈ ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸಿ, ಪ್ರವಾಸಿಗರನ್ನು ಸೆಳೆಯಲು ನಾಲ್ಕು ಕಿ.ಮೀ.ರಸ್ತೆ ಮಾಡಿಸಬೇಕು ಎನ್ನುವುದು ಅಲ್ಲಿಗೆ ಬರುವವರ ಪ್ರತಿಯೊಬ್ಬರ ಒತ್ತಾಸೆಯಾಗಿದೆ.
Recommended Video

ಮನಸ್ಸಿಗೆ ಆಹ್ಲಾದ ನೀಡುವ ಜಲಪಾತ
ಒಟ್ಟಾರೆ ಕಣ್ಣಿಗೆ ಮುದ ನೀಡುವ ಮೈಗೆ ತಂಪು ಕೊಡುವ ಈ ಜಲಪಾತ ಪ್ರವಾಸಿಗರ ಪಿಕ್ ನಿಕ್ ಸ್ಪಾಟ್ ಆಗಿದೆ. ಪಾಲ್ಸ್ ನ ಸೌಂದರ್ಯ ಕಣ್ತುಂಬಿಕೊಳ್ಳಬೇಕೆಂದರೆ ಮಳೆ ಕಡಿಮೆ ಆಗುವಷ್ಟರಲ್ಲಿ ನೀವೊಂದು ಸಲ ಇಲ್ಲಿಗೆ ಬರಬಹುದು. ಪ್ರಕೃತಿ ಸೌಂದರ್ಯ, ಹಾಲುನೊರೆಯ ಜಲಪಾತ ಖಂಡಿತ ನಿಮ್ಮ ಮನಸ್ಸಿಗೆ ಆಹ್ಲಾದವನ್ನು ನೀಡುತ್ತೆ. ಈ ಜಲಪಾತದಲ್ಲಿ ಭಾನುವಾರ ಸಾಕಷ್ಟು ಜನ ಸೇರಿ ಜಲಕ್ರೀಡೆ ಆಡಿದ್ದಾರೆ. ಕಳೆದು ನಾಲ್ಕೈದು ದಿನಗಳಿಂದ ಈ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದರಿಂದಾಗಿ ಜಲಪಾತದಲ್ಲಿ ನೀರು ಹೆಚ್ಚಿದೆ. ಅದೇ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಊರುಗಳಿಂದ ಜನರು ಜಲಪಾತಕ್ಕೆ ಬರಲಾರಂಭಿಸಿದ್ದಾರೆ.












Click it and Unblock the Notifications