
2 ಇಂಚು 'ಬಾಲ'ದೊಂದಿಗೆ ಜನಿಸಿದ ಮಗು: ಫೋಟೋ ವೈರಲ್
ಮೆಕ್ಸಿಕೋ ನವೆಂಬರ್ 28: ಹೆಣ್ಣು ಮಗುವೊಂದು 2 ಇಂಚು ಉದ್ದದ ಬಾಲದೊಂದಿಗೆ ಜನಿಸಿರುವ ಅಪರೂಪದ ಘಟನೆ ಈಶಾನ್ಯ ಮೆಕ್ಸಿಕೋದಿಂದ ವರದಿಯಾಗಿದೆ. ವೈದ್ಯರು, ನರ್ಸ್‌ಗಳು ಮಾತ್ರವಲ್ಲದೆ ಪೋಷಕರು ಅಚ್ಚರಿಗೊಂಡಿದ್ದಾರೆ. ಬಾಲವನ್ನು ಹೊರತುಪಡಿಸಿ ಶಿಶು ಸಂಪೂರ್ಣವಾಗಿ ಆರೋಗ್ಯಕರವಾಗಿದೆ. ಗರ್ಭಾವಸ್ಥೆಯಲ್ಲಿ ಯಾವುದೇ ತೊಂದರೆಗಳಿಲ್ಲದೆ ಮಗು ಪೂರ್ಣಾವಧಿಯಲ್ಲಿ ಜನಿಸಿದೆ. ತಂದೆ-ತಾಯಿ ಕೂಡ ಆರೋಗ್ಯವಾಗಿದ್ದಾರೆ. ಆದರೂ ಈ ಮಗುವಿಗೆ ಬಾಲವಿರುವುದು ಬೆರಗುಗೊಳಿಸಿದೆ.
ವರದಿಗಳ ಪ್ರಕಾರ, ಎರಡು ತಿಂಗಳ ಹಿಂದೆ ನ್ಯೂವೊ ಲಿಯಾನ್‌ನಲ್ಲಿರುವ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಮಗುವಿಗೆ ಬಾಲವಿರುವುದು ವೈದ್ಯರು ಗಮನಿಸಿದ್ದಾರೆ.
ಬಾಲ ಮೃದುವಾಗಿ 2 ಇಂಚು ಉದ್ದ ಇದ್ದು ಕೂದಲಿನಿಂದ ಕೂಡಿದೆ ಎಂದು ವಿವರಿಸಲಾಗಿದೆ. ಕೆಳಭಾಗಕ್ಕೆ ಕಿರಿದಾಗಿದೆ. ಸುದ್ದಿ ಹೊರಬಿದ್ದ ತಕ್ಷಣ, ಬಾಲದ ಚಿತ್ರಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ.
ಮಗುವಿಗೆ ಎರಡು ತಿಂಗಳ ವಯಸ್ಸಾದಾಗ, ಆಕೆಯ ತೂಕ ಹೆಚ್ಚಾಗುವುದು. ಬಾಲದ ಬೆಳವಣಿಗೆಯಾಗುವ ಸಾಧ್ಯತೆ ಬಗ್ಗೆ ವೈದ್ಯರು ಅನುಮಾನಿಸಿದ್ದಾರೆ. ಈ ಬಗ್ಗೆ ಮರು-ಮೌಲ್ಯಮಾಪನ ಮಾಡಲಾಗಿದೆ. ಇದರ ಬೆನ್ನಲ್ಲೇ ಚಿಕ್ಕ ಆಪರೇಷನ್ ಮೂಲಕ ಬಾಲವನ್ನು ತೆಗೆಯಲಾಗಿದೆ. ಆ ದಿನ ಯಾವುದೇ ತೊಂದರೆಯಿಲ್ಲದೆ ಹೆಣ್ಣು ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
2017 ರ ವೇಳೆಗೆ ಇಂತಹ 195 ಪ್ರಕರಣಗಳನ್ನು ವಿಶ್ವದಾದ್ಯಂತ ಗುರುತಿಸಲಾಗಿದ್ದು, 20 ಸೆಂಟಿಮೀಟರ್‌ಗಳು (7.9 ಇಂಚುಗಳು) ಬಾಲ ಇರುವ ಮನುಷ್ಯರು ಕಂಡುಬಂದಿರುವುದು ಅತ್ಯಂತ ವಿರಳ ಎಂದು ವರದಿಗಳು ಸೂಚಿಸುತ್ತವೆ. ಹಿಂದಿನ 2021 ರಲ್ಲಿ ಬ್ರೆಜಿಲಿಯನ್ ಮಗುವೊಂದು ಬಾಲದೊಂದಿಗೆ ಜನಿಸಿತ್ತು. ಆದರೆ ಈ ಬಾಲಕ್ಕೆ ಕೊನೆಯಲ್ಲಿ ಚಂಡಿನಾಕಾರದ ಮಾಂಸವಿತ್ತು. ಬಳಿಕ ಅದನ್ನು ತೆಗೆದು ಹಾಕಲಾಯಿತು.