• search

ಇತಿಹಾಸದಲ್ಲಿ ಎಂದೂ ನಡೆಯದ್ದನ್ನು ಅಂದು ಅಟಲ್ ಮಾಡಿದ್ದರು!

By ಆರ್ ಟಿ ವಿಠ್ಠಲಮೂರ್ತಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಇದು ಸುಮಾರು ಹದಿನೆಂಟು ವರ್ಷಗಳ ಹಿಂದೆ ದೇಶದ ಸಂಸತ್ತಿನಲ್ಲಿ ನಡೆದ ಘಟನೆ. ಅವತ್ತು ದೇಶದ ಪ್ರಧಾನಿಯಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ. ವಿರೋಧ ಪಕ್ಷದ ನಾಯಕರಾಗಿದ್ದವರು ಕಾಂಗ್ರೆಸ್ ಪಕ್ಷದ ಶ್ರೀಮತಿ ಸೋನಿಯಾ ಗಾಂಧಿ.

  ಒಮ್ಮೆ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಮಾತನಾಡಬೇಕಿರುತ್ತದೆ. ಆದರೆ ಕಲಾಪ ಆರಂಭವಾಗುವ ಮುನ್ನ ಸೋನಿಯಾ ಅವರಿಗಿಂತ ಮುಂಚಿತವಾಗಿ ಪ್ರಧಾನಿ ವಾಜಪೇಯಿ ಬರುತ್ತಾರೆ.

  'ಭಾರತದ ರಾಜಕೀಯ ಭೀಷ್ಮ'ನ ರಾಜಕಾರಣದ ಮೈಲುಗಲ್ಲುಗಳು

  ಬಂದವರು ತಮ್ಮ ಸೀಟಿನಲ್ಲಿ ಕುಳಿತು, ತಲೆ ಎತ್ತದೆ ಒಂದೇ ಸಮನೆ ಹಲವು ವಿಷಯಗಳನ್ನು ಎದುರಿಗಿದ್ದ ಹಾಳೆಯಲ್ಲಿ ಬರೆಯತೊಡಗುತ್ತಾರೆ. ತುಂಬ ಹೊತ್ತಿನಿಂದ ವಾಜಪೇಯಿ ಗಂಭೀರವಾಗಿ ಬರೆಯುತ್ತಲೇ ಇರುವುದನ್ನು ಕಂಡು ಅವರ ಸಚಿವ ಸಂಪುಟದ ಹಿರಿಯ ಸದಸ್ಯರೊಬ್ಬರಿಗೆ ಕುತೂಹಲ ಕೆರಳುತ್ತದೆ.

  Atal Bihari Vajpayee had done unthinkable

  ಇವತ್ತು ಸಂಸತ್ತಿನಲ್ಲಿ ಮುಂಚಿತವಾಗಿ ಮಾತನಾಡಬೇಕಿರುವುದು ವಿರೋಧ ಪಕ್ಷದ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ. ಅದಾದ ನಂತರ ವಿರೋಧ ಪಕ್ಷದ ಸಾಲಿನಲ್ಲಿರುವ ಇನ್ನೂ ಹಲವು ನಾಯಕರು ಮಾತನಾಡಬೇಕು.

  ಹೀಗೆ ಅವರೆಲ್ಲ ಮಾತನಾಡಿದ ನಂತರ ಆ ಚರ್ಚೆಯ ಮೇಲೆ ವಾಜಪೇಯಿ ಅವರು ಉತ್ತರ ನೀಡಬೇಕು. ಆದರೆ ಇದೇಕೋ ವಿಚಿತ್ರವಾಗಿದೆಯಲ್ಲ? ಪ್ರತಿಪಕ್ಷಗಳ ನಾಯಕರು ಮಾತನಾಡುವ ಮುನ್ನ ಸರ್ಕಾರವೇ ಮಾತನಾಡಲು ಸಜ್ಜಾಗುತ್ತಿರುವಂತಿದೆಯಲ್ಲ? ಅಂತ.

  ಅಟಲ್ ಬಿಹಾರಿ ವಾಜಪೇಯಿ ಅವರ 'ಇಷ್ಟದ' ಸಂಗತಿಗಳು...

  ಹಾಗಂತಲೇ ಆ ನಾಯಕರು ಮೆಲ್ಲಗೆ ಪ್ರಧಾನಿ ವಾಜಪೇಯಿ ಅವರ ಬಳಿ ಬಂದು ನೋಡುತ್ತಾರೆ. ಅಲ್ಲೇನು ದಾಖಲಾಗುತ್ತಿದೆ? ಖುದ್ದು ತಮ್ಮ ನೇತೃತ್ವದ ಎನ್.ಡಿ.ಎ ಸರ್ಕಾರದ ವೈಫಲ್ಯಗಳ ಬಗ್ಗೆ, ಇರುವ ಲೋಪ-ದೋಷಗಳ ಬಗ್ಗೆ ವಾಜಪೇಯಿ ಹಲವು ಮಾಹಿತಿಯನ್ನು ದಾಖಲಿಸುತ್ತಿದ್ದಾರೆ.

  Atal Bihari Vajpayee had done unthinkable

  ಅರೇ, ಪ್ರತಿಪಕ್ಷಗಳ ನಾಯಕರು, ಸದಸ್ಯರು ಮಾತನಾಡಿದ ನಂತರ ನೀಡಬೇಕಾದ ಉತ್ತರಕ್ಕೂ, ಇದಕ್ಕೂ ಏನು ಸಂಬಂಧ? ಅಂತ ಆ ಹಿರಿಯ ಮಂತ್ರಿ ಯೋಚಿಸುತ್ತಾರೆ. ಅವರು ಯೋಚನಾಮಗ್ನರಾಗಿ ನಿಂತಿರುವುದು ವಾಜಪೇಯಿ ಅವರಿಗೆ ಕಾಣುತ್ತದೆ.

  ಹಾಗಂತಲೇ, ವಾಜಪೇಯಿ ಮುಖ ಎತ್ತಿ, ಸಂಪುಟ ಸಹೋದ್ಯೋಗಿಯ ಮುಖ ನೋಡಿ ಮಂದಹಾಸ ಬೀರುತ್ತಾರೆ. ಆಗ ಕುತೂಹಲ ತಡೆಯಲಾಗದ ಆ ಮಂತ್ರಿ ಕೇಳುತ್ತಾರೆ: ಸಾರ್, ನೀವು ಸರ್ಕಾರದ ಸಾಧನೆಗಳ ಬಗ್ಗೆ ಸಮರ್ಥನೆ ಮಾಡಿಕೊಳ್ಳಬೇಕಾದವರು. ಆದರೆ ಸರ್ಕಾರದ ವೈಫಲ್ಯಗಳ ಬಗ್ಗೆ ದಾಖಲು ಮಾಡಿಕೊಳ್ಳುತ್ತಿದ್ದೀರಲ್ಲ ಯಾಕೆ?

  ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ

  ಆಗ ವಾಜಪೇಯಿ ಪುನ: ಮಂದಹಾಸ ಬೀರಿ : ಏನಿಲ್ಲ, ಇವತ್ತು ನಮ್ಮ ವಿರೋಧ ಪಕ್ಷದ ನಾಯಕರಾದ ಶ್ರೀಮತಿ ಸೋನಿಯಾ ಗಾಂಧಿ ಅವರು ಮಾತನಾಡುತ್ತಾರಲ್ಲ? ಅವರಿಗೆ ಮಾತನಾಡಲು ಅನುಕೂಲವಾಗಲಿ ಅಂತ ಈ ಎಲ್ಲ ವಿಷಯಗಳನ್ನು ಬರೆದುಕೊಡುತ್ತಿದ್ದೇನೆ ಅನ್ನುತ್ತಾರೆ!

  Atal Bihari Vajpayee had done unthinkable

  ಈ ಮಾತು ಕೇಳಿದ ಮಂತ್ರಿಯ ಮುಖದಲ್ಲಿ ಅಚ್ಚರಿಯೋ ಅಚ್ಚರಿ. ಹಾಗಂತಲೇ, ಪ್ರತಿಪಕ್ಷದ ನಾಯಕರು ಸರ್ಕಾರವನ್ನು ಟೀಕಿಸಲು ಪ್ರಧಾನಿಯೇ ಆಸ್ಪದ ಮಾಡಿಕೊಡುವುದೇ? ಇದು ಇತಿಹಾಸದಲ್ಲಿ ಎಂದೂ ನಡೆಯದ ವಿಷಯ. ಹೀಗೇಕೆ ಮಾಡುತ್ತಿದ್ದೀರಿ ಸಾರ್? ಎಂದು ಕೇಳುತ್ತಾರೆ.

  ಆಗ ವಾಜಪೇಯಿ ಹೇಳುತ್ತಾರೆ : ನೋಡಿ, ಇವತ್ತು ಶ್ರೀಮತಿ ಸೋನಿಯಾ ಗಾಂಧಿ ಮಹತ್ವದ ಜಾಗದಲ್ಲಿ ಕುಳಿತಿದ್ದಾರೆ. ಆ ಜಾಗದಲ್ಲಿ ಕುಳಿತು ಅವರು ಸರ್ಕಾರವನ್ನು ಸಮರ್ಪಕವಾಗಿ ಎದುರಿಸಬೇಕು. ಸರ್ಕಾರದ ಲೋಪದೋಷಗಳನ್ನು ಅಮೂಲಾಗ್ರವಾಗಿ ಬಿಂಬಿಸಬೇಕು ಎನ್ನುತ್ತಾರೆ.

  ವಾಜಪೇಯಿ ಅವರ ಮಾತನ್ನು ಕೇಳಿದ ಮಂತ್ರಿ, ಅದು ಅವರ ಕೆಲಸ. ಅದಕ್ಕೆ ಬೇಕಾದ ತಯಾರಿಯನ್ನು ಅವರು ಮಾಡಿಕೊಂಡು ಬರುತ್ತಾರೆ. ಆದರೆ ನೀವೇಕೆ ಅವರ ಕೆಲಸವನ್ನು ಸುಗಮಗೊಳಿಸಿ ಕೊಡುತ್ತಿದ್ದೀರಿ? ಅಂತ ಪ್ರಶ್ನಿಸುತ್ತಾರೆ.

  ಆಗ ತಮ್ಮ ಖುರ್ಚಿಯಿಂದ ಮೇಲೆದ್ದ ವಾಜಪೇಯಿ, ತಮ್ಮ ಸಂಫುಟ ಸಹೋದ್ಯೋಗಿಯ ಕಡೆ ತಿರುಗಿ, ಪ್ರಜಾಪ್ರಭುತ್ವ ಎಂಬ ರಥ ಯಶಸ್ವಿಯಾಗಿ ಮುನ್ನಡೆಯಲು ರಥದ ಎರಡು ಚಕ್ರಗಳ ಓಟ ಸುಗಮವಾಗಿರಬೇಕು. ಪ್ರಧಾನಿಯಾಗಿ ನಾನು ನನ್ನ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತೇನೆ. ಆದರೆ ಸಂಸದೀಯ ರಾಜಕಾರಣಕ್ಕೆ ಹೊಸಬರಾದ ಶ್ರೀಮತಿ ಸೋನಿಯಾ ಗಾಂಧಿ ಅವರು ಸರ್ಕಾರದ ಲೋಪದೋಷಗಳ ಬಗ್ಗೆ, ವೈಫಲ್ಯಗಳ ಬಗ್ಗೆ ಮಾತನಾಡುವಾಗ ವಿಫಲರಾಗಬಾರದು.

  ಒಂದು ವೇಳೆ ಅವರು ವಿಫಲರಾದರೆ ಪ್ರತಿಪಕ್ಷ ವಿಫಲವಾದಂತಲ್ಲ, ಸದೃಢ ಪ್ರಜಾಪ್ರಭುತ್ವ ರಾಷ್ಟ್ರವನ್ನು ಕಟ್ಟುವ ನಮ್ಮ ಪ್ರಯತ್ನ ವಿಫಲವಾದಂತೆ. ಯಾಕೆಂದರೆ, ಅವರು ಸಮರ್ಪಕವಾಗಿ ನಮ್ಮ ತಪ್ಪುಗಳನ್ನು ಹೇಳಲಿಲ್ಲ ಎಂಬ ಕಾರಣಕ್ಕಾಗಿ ನಾವು ನಮ್ಮಿಚ್ಛೆಯಂತೆ ನಡೆದುಕೊಳ್ಳಬಹುದು ಎಂಬ ಬಾವನೆ ಬಂದು ಬಿಡುತ್ತದೆ.

  ಹಾಗೇನಾದರೂ ಆದರೆ ಆಳುವವರಲ್ಲಿ ಸರ್ವಾಧಿಕಾರಿ ಧೋರಣೆ ಮೊಳೆಯಬಹುದು. ಹಾಗಾಗದೆ ಇರಲಿ ಎಂಬ ಕಾರಣಕ್ಕಾಗಿ ಸೋನಿಯಾ ಗಾಂಧಿ ಅವರಿಗೆ ಸರ್ಕಾರದ ವೈಫಲ್ಯಗಳ ಬಗ್ಗೆ, ಲೋಪ-ದೋಷಗಳ ಮಾಹಿತಿ ನೀಡುತ್ತಿದ್ದೇನೆ. ಇದರಲ್ಲಿ ಏನಾದರೂ ತಪ್ಪಿದೆ ಅನ್ನಿಸುತ್ತದೆಯಾ? ಅಂತ ವಾಜಪೇಯಿ ಪ್ರಶ್ನಿಸುತ್ತಾರೆ.

  ವಾಜಪೇಯಿ ಅವರ ಮಾತನ್ನು ಕೇಳಿದ ಆ ಮಂತ್ರಿ ಮೂಕರಾಗಿ ನಿಲ್ಲುತ್ತಾರೆ. ಅಂದ ಹಾಗೆ ಇವತ್ತಿನ ಕಾಲಘಟ್ಟದಲ್ಲಿ ಅಧಿಕಾರಸ್ಥರು ತಮ್ಮ ಎದುರಾಳಿಗಳನ್ನು ಬಡಿದು ಹಾಕುವುದೇ ತಮ್ಮ ಕರ್ತವ್ಯ ಎಂದು ಬಾವಿಸಿರುವ ಹಲವು ಉದಾಹರಣೆಗಳು ಕಾಣುತ್ತಿವೆ.

  ಅದು ಕೇಂದ್ರದಲ್ಲೇ ಇರಲಿ, ರಾಜ್ಯಗಳಲ್ಲೇ ಇರಲಿ, ಇಂತಹ ಸಂದರ್ಭದಲ್ಲಿ ಉತ್ತಮ ಪ್ರಜಾಪ್ರಭುತ್ವದ ನಿರ್ಮಾಣಕ್ಕಾಗಿ ನಾವು ಮಾಡಬೇಕಾದ ನಿಜವಾದ ಕೆಲಸವೇನು? ಅನ್ನುವುದಕ್ಕೆ ವಾಜಪೇಯಿ ಅವರ ಈ ನಡವಳಿಕೆ ಮಾದರಿ. ಅಧಿಕಾರಸ್ಥರಿಗೆ ಇದು ಅರ್ಥವಾಗಲಿ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Atal Bihari Vajpayee had done unthinkable in parliament. He had prepared notes for Sonia Gandhi, to help her to showcase the failures of ruling party, lead by himself. R T Vittal Murthy writes.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more