ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಾನಿ ವರ್ಸಸ್ ಅದಾನಿ; ಏನಾಗುತ್ತಿದೆ ಇಬ್ಬರ ಮಧ್ಯೆ?

|
Google Oneindia Kannada News

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವಾಗೆಲ್ಲಾ ಕೆಲ ವಿಪಕ್ಷದವರ ಬಾಯಲ್ಲಿ ಸಾಮಾನ್ಯವಾಗಿ ಕೇಳಿಬರುವ ಹೆಸರುಗಳೆಂದರೆ ಅದು ಅಂಬಾನಿ ಮತ್ತು ಅದಾನಿ. ಅದರಲ್ಲೂ ರಾಹುಲ್ ಗಾಂಧಿ ಭಾಷಣಗಳಲ್ಲಿ ಇವರಿಬ್ಬರ ಹೆಸರೆತ್ತಿ ನರೇಂದ್ರ ಮೋದಿಯನ್ನು ಝಾಡಿಸದೇ ಇದ್ದೇ ಇರುತ್ತದೆ.

ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಇಬ್ಬರೂ ಕೂಡ ನರೇಂದ್ರ ಮೋದಿಗೆ ಆಪ್ತರೇ. ವಿರೋಧ ಪಕ್ಷದವರು ಮಾಡುವ ಆರೋಪದ ಪ್ರಕಾರ ಪ್ರಧಾನಿಗಳು ಈ ಇಬ್ಬರು ಉದ್ಯಮಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನೀತಿ ತರುತ್ತಾರೆ. ಅದು ಎಷ್ಟು ನಿಜವೋ ಗೊತ್ತಿಲ್ಲ, ಆದರೆ, ಇಬ್ಬರೂ ಕೂಡ ಇತ್ತೀಚೆಗೆ ಬಹಳ ಗಣನೀಯವಾಗಿ ವೃದ್ಧಿ ಕಂಡಿರುವುದಂತೂ ಹೌದು.

5G : ಸ್ಪೆಕ್ಟ್ರಂ ಎಂದರೇನು? 5ಜಿ ವಿಶೇಷತೆ ಏನು?5G : ಸ್ಪೆಕ್ಟ್ರಂ ಎಂದರೇನು? 5ಜಿ ವಿಶೇಷತೆ ಏನು?

ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಇಬ್ಬರು ಭಾರತದ ಅತಿ ದೊಡ್ಡ ಶ್ರೀಮಂತರು. ಇಬ್ಬರೂ ಕೂಡ ಗುಜರಾತಿಗಳೇ. ಇತ್ತೀಚಿನ ಕೆಲ ವರ್ಷಗಳಲ್ಲಿ ಅತಿವೇಗವಾಗಿ ಬೆಳೆಯುತ್ತಾ ಬಂದಿರುವ ಗೌತಮ್ ಅದಾನಿ ಇದೀಗ ಮುಕೇಶ್ ಅಂಬಾನಿಗಿಂತಲೂ ಶ್ರೀಮಂತರು. ಬಿಲ್ ಗೇಟ್ಸ್ ಅವರನ್ನೂ ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿ ದೊಡ್ಡ ಶ್ರೀಮಂತ ಎನಿಸಿದ್ದಾರೆ.

ಮುಕೇಶ್ ಅಂಬಾನಿ ತಮ್ಮ ತಂದೆ ಧೀರೂಭಾಯ್ ಅಂಬಾನಿಯಿಂದ ಬಳವಳಿಯಾಗಿ ಬಂದ ಉದ್ಯಮವನ್ನು ಹೊಂದಿದ್ದರಾದರೂ ತಾವೇ ಸ್ವಂತ ಪರಿಶ್ರಮದಿಂದ ಇಂದು ದೊಡ್ಡ ಉದ್ಯಮಗಳನ್ನು ಕಟ್ಟಿದ್ದಾರೆ. ಅಪ್ಪನ ಹಾದಿಗಿಂತ ವಿಭಿನ್ನವಾಗಿ ತೆರಳಿ ಸೈ ಎನಿಸಿದ್ಧಾರೆ. ಈಗಿನ ಅಗತ್ಯಕ್ಕೆ ತಕ್ಕಂತೆ ವ್ಯವಹಾರ ರೂಪಿಸಿದ್ದಾರೆ.

ಅಕ್ಟೋಬರ್‌ನಿಂದಲೇ ಭಾರತದಲ್ಲಿ 5ಜಿ; ಇಲ್ಲಿದೆ ಬಿಡ್ಡಿಂಗ್ ವಿವರಅಕ್ಟೋಬರ್‌ನಿಂದಲೇ ಭಾರತದಲ್ಲಿ 5ಜಿ; ಇಲ್ಲಿದೆ ಬಿಡ್ಡಿಂಗ್ ವಿವರ

ಅವರಿಬ್ಬರ ವ್ಯವಹಾರದ ವ್ಯಾಪಕತೆ ಹೆಚ್ಚುತ್ತಾ ಹೋಗಿ, ಇಬ್ಬರೂ ಮುಖಾಮುಖಿಯಾಗುವ ಮಟ್ಟಕ್ಕೆ ಬಂದಿದೆ. 5ಜಿ ಹರಾಜಿನಲ್ಲಿ ಗೌತಮ್ ಅದಾನಿ ಪಾಲ್ಗೊಂಡಿರುವುದು ಅಂಬಾನಿ ಕಂಪನಿಗಳಲ್ಲಿ ಸಂಚಲನವನ್ನೇ ಸೃಷ್ಟಿಸಿದೆ ಎಂಬಂತಹ ಸುದ್ದಿ ಇದೆ.

ಅಂಬಾನಿ ಸಾಮ್ರಾಜ್ಯ

ಅಂಬಾನಿ ಸಾಮ್ರಾಜ್ಯ

ಅಪ್ಪನ ಪಾಲಿಸ್ಟರ್ ಬಟ್ಟೆ ಉದ್ಯಮಕ್ಕೆಸರಕಾರದಿಂದ ದೊಡ್ಡ ಗುತ್ತಿಗೆ ಸಿಕ್ಕ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಎಂಬಿಎ ವ್ಯಾಸಂಗ ಅರ್ಧಕ್ಕೆ ಬಿಟ್ಟು ಭಾರತಕ್ಕೆ ಬಂದ ಮುಕೇಶ್ ಅಂಬಾನಿ ಈಗ ಬಹಳ ಎತ್ತರಕ್ಕೆ ಉದ್ಯಮ ಸಾಮ್ರಾಜ್ಯ ವಿಸ್ತರಿಸಿದ್ದಾರೆ.

ಅದರಲ್ಲೂ ಟೆಲಿಕಾಂ ಕ್ಷೇತ್ರದಲ್ಲಿ ಮುಕೇಶ್ ಅಂಬಾನಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಟೆಲಿಕಾಂ ದೊರೆಗಳಾಗಿದ್ದ ಏರ್‌ಟೆಲ್ ಮತ್ತ ವೊಡಾಫೋನ್ ಸಂಸ್ಥೆಗಳು ಜಿಯೋ ಪೈಪೋಟಿಯಿಂದ ನಲುಗಿ ಹೋಗಿವೆ.

ಟೆಲಿಕಾಂ ಮಾತ್ರವಲ್ಲ, ರೀಟೇಲ್ ವ್ಯವಹಾರಕ್ಕೆ ಧುಮುಕಿರುವ ಅಂಬಾನಿ ಅಮೇಜಾನ್‌ನಂಥ ವಿಶ್ವ ದೈತ್ಯ ಕಂಪನಿಗೆ ತಮ್ಮ ಶಕ್ತಿಯ ರುಚಿ ತೋರಿಸಿದ್ದಾಗಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ದೊಡ್ಡ ಶಕ್ತಿಯಾಗಿ ಬೆಳೆದಿದೆ.

5ಜಿ ಹರಾಜಿನಲ್ಲಿ ಬಿಕರಿಯಾದ ಸ್ಪೆಕ್ಟ್ರಂಗಳಲ್ಲಿ ಶೇ. 60 ಪಾಲನ್ನು ರಿಲಾಯನ್ಸ್ ಜಿಯೋ ಖರೀದಿದೆ. ದೇಶಾದ್ಯಂತ ಉತ್ತಮ ಫೈಬರ್ ಜಾಲ ಹೊಂದಿರುವ ಜಿಯೋ ಬಹಳ ಬೇಗ 5ಜಿ ಸೇವೆ ಒದಗಿಸುವ ಸ್ಥಿತಿಯಲ್ಲಿದೆ.

ಅದಾನಿ ಸಾಮ್ರಾಜ್ಯ

ಅದಾನಿ ಸಾಮ್ರಾಜ್ಯ

ಗೌತಮ್ ಅದಾನಿ ಕೂಡ ಬಹಳ ಕ್ಷಿಪ್ರವಾಗಿ ಮೇಲೆ ಬಂದ ಉದ್ಯಮಿ. ಅಂಬಾನಿ ಅಪ್ಪನಿಂದ ಬಳುವಳಿಯಾಗಿ ಬಂದ ಉದ್ಯಮದ ಮೂಲಕ ಬೆಳೆದರೆ, ಅದಾನಿ ಬಹುತೇಕ ಸ್ವಂತ ಬಲದಿಂದ ಬಂದವರು. ಅಪ್ಪನ ಜವಳಿ ಉದ್ಯಮಕ್ಕೆ ಬರದೇ ತಮ್ಮದೇ ಹಾದಿಯಲ್ಲಿ ನಡೆದವರು. ಇದೀಗ ಇವರು ಹಲವು ಬಂದರು, ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಾರೆ.

ವಿದ್ಯುತ್ ಉತ್ಪಾದನೆ ಕ್ಷೇತ್ರಕ್ಕೆ ಧುಮುಕಿದ್ದಾರೆ. ಸಿಮೆಂಟ್ ಉದ್ಯಮಕ್ಕೂ ಕಾಲಿಟ್ಟಿದ್ದಾರೆ. ೫ಜಿ ಕ್ಷೇತ್ರಕ್ಕೂ ಅಡಿ ಇಟ್ಟಿದ್ದಾರೆ.

ಅದಾನಿಗೆ ಹೆದರಿದರಾ ಅಂಬಾನಿ?

ಅದಾನಿಗೆ ಹೆದರಿದರಾ ಅಂಬಾನಿ?

ಇತ್ತೀಚೆಗೆ ನಡೆದ 5ಜಿ ಹರಾಜಿನಲ್ಲಿ ಗೌತಮ್ ಅದಾನಿ ಪಾಲ್ಗೊಳ್ಳಲು ಬಿಡ್ ಸಲ್ಲಿಸಿದಾಗ ಹಲವರು ಅಚ್ಚರಿಯ ಹುಬ್ಬೇರಿಸಿದ್ದರು. ಇದು ಅಂಬಾನಿ ಭದ್ರಕೋಟೆಗೆ ಅದಾನಿ ಲಗ್ಗೆ ಇಡುತ್ತಿದ್ದಾರೆ ಎಂದೇ ಹಲವರು ವಿಶ್ಲೇಷಿಸಿದರು.

ಕುತೂಹಲವೆಂದರೆ ಈ ಬೆಳವಣಿಗೆ ಸ್ವತಃ ಮುಕೇಶ್ ಅಂಬಾನಿಯವರನ್ನೇ ಬೆಚ್ಚಿಬೀಳಿಸಿತ್ತು ಎನ್ನುತ್ತವೆ ಮೂಲಗಳು. ಮುಕೇಶ್ ಅಂಬಾನಿ ತಮ್ಮ 5ಜಿ ಸಾಮ್ರಾಜ್ಯವನ್ನು ಭದ್ರ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿದೇಶದ ಟೆಲಿಕಾಂ ಕಂಪನಿಯೊಂದನ್ನು ಖರೀದಿಸುವ ಸನ್ನಾಹದಲ್ಲಿದ್ದರು. ಆಗ ಅದಾನಿ ೫ಜಿ ಹರಾಜಿನಲ್ಲಿ ಪಾಲ್ಗೊಳ್ಳುತ್ತಿರುವ ಸುದ್ದಿ ರಾಚಿ ಬಂದಿತು. ಕೂಡಲೇ ಅವರು ಆಪ್ತರ ಸಭೆ ಕರೆದು ಸಮಾಲೋಚನೆ ಮಾಡಿದರೆನ್ನಲಾಗಿದೆ.

ಗೌತಮ್ ಅದಾನಿ ಒಂದು ವೇಳೆ ಟೆಲಿಕಾಂ ಕ್ಷೇತ್ರಕ್ಕೆ ಅಡಿ ಇಟ್ಟರೆ ಏನು ಮಾಡಬಹುದು ಎಂಬ ಪ್ರಶ್ನೆಯ ಸುತ್ತಲೇ ಸಮಾಲೋಚನೆ ನಡೆದಿತ್ತು. ಭಾರತೀಯ ಮಾರುಕಟ್ಟೆ ಜೊತೆಗೆ ವಿದೇಶಗಳಲ್ಲೂ ಜಿಯೋ ಅನ್ನು ವಿಸ್ತರಿಸುವುದಕ್ಕೆ ಆದ್ಯತೆ ಕೊಡುವುದು ಉತ್ತಮ ಎಂದು ಕೆಲವರು ಸಲಹೆ ನೀಡುತ್ತಾರೆ. ಇನ್ನೂ ಕೆಲವರು ಗೌತಮ್ ಅದಾನಿಯ ಸಂಭಾವ್ಯ ಸ್ಪರ್ಧೆಯನ್ನು ಎದುರಿಸಲು ಸಜ್ಜಾಗುವುದು ಒಳ್ಳೆಯದು ಎಂದು ಹೇಳುತ್ತಾರೆ.

ಒಂದು ವೇಳೆ ಗೌತಮ್ ಅದಾನಿ ಟೆಲಿಕಾಂ ಕ್ಷೇತ್ರಕ್ಕೆ ಅಡಿ ಇಟ್ಟರೆ ಆ ಸ್ಪರ್ಧೆಯನ್ನು ಎದುರಿಸಲು ಸಾಕಷ್ಟು ಬಂಡವಾಳ ಬೇಕಾಗುತ್ತದೆ. ಈಗ ವಿದೇಶದ ಟೆಲಿಕಾಂ ಕಂಪನಿಯನ್ನು ಖರೀದಿಸಲು ಹಣ ವ್ಯಯಿಸಿದರೆ ಅದಾನಿಯನ್ನು ಎದಿರುಗೊಳ್ಳಲು ಸೂಕ್ತ ಬಂಡವಾಳ ಇಲ್ಲದಂತಾಗುತ್ತದೆ ಎಂದು ಕೆಲವರು ಎಚ್ಚರಿಸುತ್ತಾರೆ. ಮುಕೇಶ್ ಅಂಬಾನಿಗೂ ಇದು ಸರಿ ಎನಿಸಿ ತಮ್ಮ ವಿದೇಶೀ ಟೆಲಿಕಾಂ ವಿಸ್ತರಣೆ ಆಲೋಚನೆಯನ್ನು ಅಲ್ಲಿಗೇ ಬಿಟ್ಟರು ಎಂದು ಹೇಳಲಾಗುತ್ತಿದೆ.

ಅದಾನಿ ಬಿಡ್ ಮಾಡಿದ್ದೆಷ್ಟು?

ಅದಾನಿ ಬಿಡ್ ಮಾಡಿದ್ದೆಷ್ಟು?

ಈಗ ನಡೆದ 5ಜಿ ಹರಾಜಿನಲ್ಲಿ ರಿಲಾಯನ್ಸ್ ಜಿಯೋ ಅತಿ ಹೆಚ್ಚು ಸ್ಪೆಕ್ಟ್ರಂ ಖರೀದಿಸಿದೆ. ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಂತರದ ಸ್ಥಾನದಲ್ಲಿವೆ. ಗೌತಮ್ ಅದಾನಿ 26 ಗಿಗಾಹರ್ಟ್ಜ್ ಶ್ರೇಣಿಯಲ್ಲಿ 100 ಕೋಟಿ ರೂ ನಷ್ಟು ಕೆಲ ಸ್ಪೆಕ್ಟ್ರಂ ಅನ್ನು ಖರೀದಿಸಿದ್ದಾರೆ. ಆದರೆ ಇದು ಸಾರ್ವಜನಿಕರಿಗೆ ಟೆಲಿಕಾಂ ಸೇವೆ ನೀಡಲು ಬರುವುದಿಲ್ಲ. ಬದಲಾಗಿ ಖಾಸಗಿ ನೆಟ್ವರ್ಕ್‌ಗೆ ಬಳಕೆ ಮಾಡಬಹುದು. ಗೌತಮ್ ಅದಾನಿ ಅವರು ವಿಮಾನ ನಿಲ್ದಾಣ, ಬಂದರು ಇತ್ಯಾದಿ ನಿರ್ವಹಣೆ ಮಾಡುವುದರಿಂದ ಅಲ್ಲಿ 5ಜಿ ಕನೆಕ್ಟಿವಿಟಿಗೆ ಇದನ್ನು ಉಪಯೋಗಿಸಬಹುದು.

ತಾನು ಟೆಲಿಕಾಂ ಸೇವೆಗೆ ಕಾಲಿಡುವುದಿಲ್ಲ ಎಂದು ಗೌತಮ್ ಅದಾನಿ ಹೇಳಿದ್ದಾರಾದರೂ ಮುಂದಿನ ಕಾಲಘಟ್ಟದಲ್ಲಿ ಅವರು ಪಾದ ಬೆಳೆಸಿದರೂ ಬೆಳೆಸಬಹುದು. ಉದ್ಯಮದಲ್ಲಿ ಯಾವುದನ್ನೂ ತಳ್ಳಿಹಾಕಲು ಸಾಧ್ಯವಿಲ್ಲ.

ಅದಾನಿ ವರ್ಸಸ್ ಅಂಬಾನಿ

ಅದಾನಿ ವರ್ಸಸ್ ಅಂಬಾನಿ

ಗೌತಮ್ ಅಂಬಾನಿ ಮತ್ತು ಮುಕೇಶ್ ಅಂಬಾನಿ ಇಬ್ಬರೂ ಸಾಮಾನ್ಯವಾಗಿ ಬೇರೆ ಬೇರೆ ಉದ್ಯಮಗಳಲ್ಲಿ ಬೆಳೆಯುತ್ತಾ ಬಂದವರು. ಅವರಿದ್ದ ಉದ್ಯಮಕ್ಕೆ ಇವರು ಕಾಲಿಡುವುದಿಲ್ಲ, ಇವರಿದ್ದ ಉದ್ಯಮಕ್ಕೆ ಅವರು ಎಂಟ್ರಿ ಕೊಡುವುದಿಲ್ಲ. ಇದು ಒಂದು ರೀತಿ ಅಘೋಷಿತ ನಿಯಮದಂತೆ ಸಾಗಿತ್ತು. ಆದರೆ, ಅಂಬಾನಿ ಮತ್ತು ಅದಾನಿ ಅವರ ಉದ್ಯಮ ಸಾಮ್ರಾಜ್ಯ ವಿಸ್ತರಣೆ ಆದ ಹೋದಂತೆ ಇಬ್ಬರೂ ಇಬ್ಬರ ನಡುವಿನ ವ್ಯಾವಹಾರಿಕ ಅಂತರ ಕುಗ್ಗಿದ್ದು ಮಾತ್ರವಲ್ಲ, ಇಬ್ಬರೂ ಪ್ರತಿಸ್ಪರ್ಧಿಗಳಾಗುವ ಮಟ್ಟಕ್ಕೂ ಹೋಗಿದೆ.

ಮುಕೇಶ್ ಅಂಬಾನಿಯವರ ಪ್ರಮುಖ ಉದ್ಯಮಗಳಲ್ಲಿ ತೈಲ ಸಂಸ್ಕರಣೆಯೂ ಒಂದು. ಈಗ ಗೌತಮ್ ಅದಾನಿ ಸೌದಿಯ ತೈಲ ಉತ್ಪಾದಕ ಅರಾಮ್ಕೋ ಕಂಪನಿ ಜೊತೆ ಒಪ್ಪಂದಕ್ಕೆ ಮುಂದಾಗಿದೆ. ಹಾಗೆಯೇ, ಪರಿಸರಪೂರಕ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಅಂಬಾನಿ ಮತ್ತು ಅದಾನಿಯವರ ಕಂಪನಿಗಳು ಹೂಡಿಕೆ ಮಾಡಿವೆ.

ಕ್ರೀಡೆ, ರೀಟೇಲ್, ಪೆಟ್ರೋಕೆಮಿಕಲ್ ಮತ್ತು ಮಾಧ್ಯಮಗಳಲ್ಲಿ ಹೂಡಿಕೆ ಮಾಡಲು ಅದಾನಿ ಮುಂದಾಗಿದ್ದಾರೆ. ಈ ಕ್ಷೇತ್ರಗಳಲ್ಲಿ ಅಂಬಾನಿ ಅದಾಗಲೇ ಕಾಲೂರಿದ್ದಾಗಿದೆ. ಮುಂದಿನ ದಿನಗಳಲ್ಲಿ ನೇರ ಪೈಪೋಟಿಗೆ ಇಳಿದರೆ ಅಚ್ಚರಿ ಇಲ್ಲ. ಇಬ್ಬರೂ ಕೂಡ ವ್ಯವಹಾರ ಚತುರರು, ಶತಾಯಗತಾಯ ಗೆಲ್ಲುವ ಛಲ ಇರುವುವರು. ಇಬ್ಬರೂ ಮುಖಾಮುಖಿಯಾದರೆ ಏನಾದೀತು?

(ಒನ್ಇಂಡಿಯಾ ಸುದ್ದಿ)

English summary
Mukesh Ambani and Gautam Adani are expanding their business extensively. This may see overlap of their business and lead to fierce fight says some experts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X