• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಡೀ ಭಾರತವನ್ನೇ ನಡುಗಿಸಿದ ಆ ಘೋರ ದುರಂತಕ್ಕೆ ಇಂದಿಗೆ ನೂರು ವರ್ಷ

|

ಅದು ಭಾರತದ ಇತಿಹಾಸದ ಪುಟಗಳಲ್ಲಿ ದಾಖಲಾದ ಅತ್ಯಂತ ಭೀಕರ ಘಟನೆ. ಮನುಷ್ಯನೊಬ್ಬ ಇಷ್ಟು ಕ್ರೂರಿಯಾಗಬಲ್ಲನೇ ಎಂಬುದಕ್ಕೆ ಇಂದಿಗೂ ಕಣ್ಣ ಮುಂದೆ ಕಟ್ಟಿದಂತೆ ಇರುವ ದಾಖಲೆ ಇದು. ಇಂದಿನ ಪೀಳಿಗೆ ಈ ಘೋರ ದುರಂತವನ್ನು ನೋಡಿಲ್ಲ. ಆದರೆ, ಅದರ ಕುರಿತು ಕೇಳಿದಾಗ ಒಂದು ಕ್ಷಣ ಮೈ ನಡುಗುವುದು ಸಹಜ.

ಈ ಘಟನೆ ನಡೆದ ಸಂದರ್ಭದಲ್ಲಿ ಇದ್ದವರು ಈಗಲೂ ಬದುಕಿರುವುದು ಬಹಳ ವಿರಳ. ಭಾರತ ಚರಿತ್ರೆಯಲ್ಲಿನ ಅತ್ಯಂತ ಕರಾಳ ಘಟನೆ ನಡೆದು ಇಂದಿಗೆ ಸರಿಯಾಗಿ ನೂರು ವರ್ಷ. ಜಲಿಯನ್ ವಾಲಾಬಾಗ್ ದುರಂತ ಎನ್ನುವ ಪದವನ್ನು ನೋಡಿದಾಗ, ಕೇಳಿದಾಗ ಒಮ್ಮೆ ನೋವು, ದುಃಖ ತಣ್ಣನೆ ಆವರಿಸುತ್ತದೆ. ಅದಕ್ಕೆ ಈಗಲೂ ಪ್ರತೀಕಾರ ತೀರಿಸಿಕೊಳ್ಳಬೇಕೆಂಬ ಆಕ್ರೋಶವೂ ಸೆಟೆದುಕೊಳ್ಳುತ್ತದೆ. ನೂರು ವರ್ಷ ಕಳೆದರೂ ಅಲ್ಲಿ ಹರಿದ ನೆತ್ತರ ಕೋಡಿ ಇನ್ನೂ ಹಸಿಯಾಗಿರುವಂತೆ ಭಾಸವಾಗುತ್ತಿದೆ.

100 ವರ್ಷದ ಹಿಂದೆ ಮಾಡಿದ ಮಹಾ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ ಬ್ರಿಟನ್

ಬ್ರಿಟಿಷರ ವಿರುದ್ಧ ಈಗಲೂ ನಮ್ಮನ್ನು ಕೆರಳಿಸುವಂತಹ ಅಮಾನವೀಯ ಹತ್ಯಾಕಾಂಡವನ್ನು ಸ್ವತಃ ಕಂಡು ಬದುಕುಳಿದವರು ಈಗಲೂ ಇದ್ದಾರೆ. ಅವರಿಗೆ ಆ ಗುಂಡಿನ ಸದ್ದು, ಸಾವಿನ ಭಯದಲ್ಲಿರುವ ಜನರ ಚೀರಾಟ, ಗುಂಡೇಟಿನಿಂದ ಸಾಯುವಾಗ ಹೊರಡಿಸುತ್ತಿದ್ದ ಹೃದಯ ಹಿಂಡುವಂತಹ ಆಕ್ರಂದನ ಇದೆಲ್ಲವೂ ಆ ವ್ಯಕ್ತಿಯ ಕಿವಿಯಲ್ಲಿ ಇಂದಿಗೂ ಗುಂಯ್ ಗುಟ್ಟುತ್ತಿವೆ.

ಆ ವ್ಯಕ್ತಿ ಮೂಲತಃ ಬೆಂಗಳೂರಿನವರು. 120 ವರ್ಷ ದಾಟಿರುವ ಅವರು ಈಗಲೂ ಬೆಂಗಳೂರಿನಲ್ಲಿಯೇ ವಾಸಿಸುತ್ತಿದ್ದಾರೆ ಎನ್ನುವುದು ವಿಶೇಷ. ನಾಲ್ಕೂ ವೇದಗಳ ಬಗ್ಗೆ ಅಮೋಘ ಪಾಂಡಿತ್ಯ ಹೊಂದಿರುವ ಪಂಡಿತ್ ಸುಧಾಕರ ಚತುರ್ವೇದಿ 'ಜಲಿಯನ್ ವಾಲಾಬಾಗ್' ಎಂಬ ಮರೆಯಲು ಸಾಧ್ಯವಾಗದ ಕಹಿ ನೆನಪಿನ ಘಟನೆಗೆ ಜೀವಂತ ಸಾಕ್ಷಿ.

ಹತ್ತು ನಿಮಿಷದಲ್ಲಿ 1,650 ಬುಲೆಟ್‌

ಹತ್ತು ನಿಮಿಷದಲ್ಲಿ 1,650 ಬುಲೆಟ್‌

1919ರ ಏಪ್ರಿಲ್ 13. ಪಂಜಾಬಿನ ಅಮೃತಸರದ ಜಲಿಯನ್ ವಾಲಾಬಾಗ್ ಎಂಬ ಉದ್ಯಾನದ ಸ್ಥಳದಲ್ಲಿ ಬ್ರಿಟಿಷರ ವಿರುದ್ಧ ಶಾಂತಿಯುತ ಪ್ರತಿಭಟನೆಗೆಂದು ಪುರುಷರು, ಮಹಿಳೆಯರು, ಮಕ್ಕಳು, ವೃದ್ಧರು ಎಲ್ಲರೂ ಶಸ್ತ್ರಾಸ್ತ್ರ ಇಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.

ಆದರೆ, ಕ್ರೂರಿ ಕರ್ನಲ್ ರಿಜಿನಾಲ್ಡ್ ಡಯರ್ ಪಾಲಿಗೆ ಅದು ಶಾಂತಿಯುತ ಪ್ರತಿಭಟನೆಯಾಗಿ ಕಂಡಿರಲಿಲ್ಲ. ಬದಲಾಗಿ ಭಾರತೀಯರಿಗೆ ಮತ್ತು ಬ್ರಿಟಿಷ್ ತನ್ನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲು ಸಿಕ್ಕ ಅವಕಾಶವಾಗಿತ್ತು. ಸಂಜೆ 4.30ರ ಸುಮಾರಿಗೆ ಸುಮಾರು 90 ಸೈನಿಕರೊಂದಿಗೆ ಉದ್ಯಾನದ ದ್ವಾರದಲ್ಲಿ ಅಡ್ಡಗಟ್ಟಿದ ಡಯರ್ ಗುಂಡು ಹಾರಿಸಲು ಆದೇಶಿಸಿದ. ಹತ್ತು ನಿಮಿಷ ಅಲ್ಲಿ ಸತತವಾಗಿ ಗುಂಡಿನ ಮಳೆಗರೆಯಲಾಯಿತು.

150 ಅಡಿಗೂ ಕಡಿಮೆ ಅಂತರದಲ್ಲಿ ನಿಂತಿದ್ದ ಡಯರ್‌ನ ಸೇನೆ ಪಾಯಿಂಟ್ 303 ರೈಫಲ್‌ಗಳಿಂದ ಹಾರಿಸಿದ್ದು 1,650 ಬುಲೆಟ್‌ಗಳನ್ನು. ಬ್ರಿಟಿಷ್ ಸರ್ಕಾರ ಅಂದು ಕೊಟ್ಟ ಲೆಕ್ಕದ ಪ್ರಕಾರ ಸತ್ತವರ ಸಂಖ್ಯೆ 379. ಆದರೆ, ಅಂದಾಜಿನ ಪ್ರಕಾರ ಸಾವಿರಕ್ಕೂ ಮಂದಿ ಅಂದು ಬಲಿಯಾಗಿದ್ದರು. ಸುಮಾರು 1500 ಜನರು ಗಾಯಗೊಂಡಿದ್ದರು.

ಕ್ಷಮೆ ಕೋರದ ಬ್ರಿಟನ್

ಕ್ಷಮೆ ಕೋರದ ಬ್ರಿಟನ್

ಈ ಘಟನೆ ನಡೆದು 28 ವರ್ಷಗಳ ಬಳಿಕ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಬ್ರಿಟಿಷರು ವಸಾಹತುಗಳನ್ನು ಮುಚ್ಚಿ ತಮ್ಮ ದೇಶಕ್ಕೆ ಮರಳಿದರು. ಆದರೆ, ಡಯರ್ ಎಂಬ ಕೊಲೆಗಡುಕ ಹೇಯ ಕೃತ್ಯ ಎಸಗಿ ನೂರು ವರ್ಷ ಉರುಳಿದರೂ ಬ್ರಿಟನ್ ಸರ್ಕಾರ ಇದುವರೆಗೂ ಭಾರತದ ಕ್ಷಮೆ ಕೋರಿಲ್ಲ.

ಬ್ರಿಟನ್‌ನ ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರಾನ್ 2013ರಲ್ಲಿ 'ಬ್ರಿಟನ್ ಸರ್ಕಾರದ ಇತಿಹಾಸದಲ್ಲಿ ಇದು ಅತ್ಯಂತ ನಾಚಿಕೆಗೇಡಿನ ಘಟನೆ' ಎಂದಿದ್ದರು. ಆದರೆ, ಅವರು ಅದಕ್ಕೆ ಔಪಚಾರಿಕ ಕ್ಷಮೆ ಕೋರಿರಲಿಲ್ಲ. ಬುಧವಾರ ಕೂಡ ಈ ಬಗ್ಗೆ ಮಾತನಾಡಿದ್ದ ಹಾಲಿ ಪ್ರಧಾನಿ ತೆರೆಸಾ ಮೇ, ಈ ಘಟನೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರೇ ವಿನಾ ಭಾರತೀಯರ ಕ್ಷಮೆ ಕೋರಿಲ್ಲ.

'ಜಲಿಯನವಾಲಾ ಬಾಗ್ ಹತ್ಯಾಕಾಂಡ ನಮ್ಗೆ ನಾಚಿಗ್ಗೇಡು'

ಪ್ರತ್ಯಕ್ಷ ಸಾಕ್ಷಿ ಇವರು

ಪ್ರತ್ಯಕ್ಷ ಸಾಕ್ಷಿ ಇವರು

ಪಂಡಿತ್ ಸುಧಾಕರ್ ಚತುರ್ವೇದಿ ಅವರಿಗೆ ಸುಮಾರು 122 ವರ್ಷ. ಅವರು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿದವರು. 11ನೆಯ ವಯಸ್ಸಿನಲ್ಲಿಯೇ ಅವರು ಉತ್ತರ ಭಾರತದ ಖ್ಯಾತ ಕಾಂಗಡಿ ಗುರುಕುಲದಲ್ಲಿ ಸೇರಿಕೊಂಡು ನಾಲ್ಕೂ ವೇದಗಳನ್ನು ಅಧ್ಯಯನ ಮಾಡಿದರು. ವೇದಗಳ ಕುರಿತು ಅಪಾರ ಜ್ಞಾನ ಹೊಂದಿರುವ ಅವರ ಲೇಖನಗಳು ಪುಸ್ತಕಗಳಾಗಿ ಪ್ರಕಟವಾಗಿವೆ.

ಚರಂಡಿಯಲ್ಲಿ ಅಡಗಿ ಕುಳಿತಿದ್ದರು

ಚರಂಡಿಯಲ್ಲಿ ಅಡಗಿ ಕುಳಿತಿದ್ದರು

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಂದರ್ಭದಲ್ಲಿ ಯುವಕರಾಗಿದ್ದ ಸುಧಾಕರ್ ಚತುರ್ವೇದಿ ಸ್ವಾತಂತ್ರ್ಯ ಸಂಗ್ರಾಮದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ಭಯಾನಕ ಘಟನೆಯನ್ನು ಸಮೀಪದಿಂದ ಕಂಡವರು ಅವರು. ಜಲಿಯನ್ ವಾಲಾಬಾಗ್ ದೊಡ್ಡ ಉದ್ಯಾನ. ಅದರ ಸುತ್ತಲೂ 3-4 ಅಂತಸ್ತಿನ ಗೋಡೆಯಿತ್ತು. ಅದಕ್ಕೆ ಇದ್ದದ್ದು ಒಂದೇ ಒಂದು ಬಾಗಿಲು. ಇದ್ದಕ್ಕಿದ್ದಂತೆ ಉದ್ಯಾನದ ಒಳಗೆ ಗುಂಡಿನ ದಾಳಿ ನಡೆಯಿತು. ಸಮೀಪದಲ್ಲಿದ್ದ ಸುಧಾಕರ್ ಚತುರ್ವೇದಿ ಅವರು ಒಂದು ಚರಂಡಿಯಲ್ಲಿ ಅಡಗಿಕೊಂಡಿದ್ದರಂತೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ 'ವಿಧುರಾಶ್ವತ್ಥ' ಹೋರಾಟದ ನೆನಪು

ಸಾವಿರಾರು ಮಂದಿಯ ಅಂತ್ಯಸಂಸ್ಕಾರ

ಸಾವಿರಾರು ಮಂದಿಯ ಅಂತ್ಯಸಂಸ್ಕಾರ

ಹತ್ಯಾಕಾಂಡದಲ್ಲಿ ಸಾವಿರಾರು ಮಂದಿ ಸತ್ತಿದ್ದರು. ಆದರೆ, ಬ್ರಿಟಿಷ್ ಸರ್ಕಾರ ಕೊಟ್ಟಿದ್ದು ಅದರ ಅರ್ಧಕ್ಕಿಂತಲೂ ಕಡಿಮೆ. ವೇದಗಳನ್ನು ಅಧ್ಯಯನ ಮಾಡಿ ಮಂತ್ರಗಳನ್ನು ಕಲಿತಿದ್ದರಿಂದ ಈ ಹತ್ಯಾಕಾಂಡದಲ್ಲಿ ಬಲಿಯಾದ ಎಲ್ಲರ ಅಂತ್ಯ ಸಂಸ್ಕಾರವನ್ನು ನಡೆಸುವಂತೆ ಸ್ವತಃ ಗಾಂಧೀಜಿ ಅವರೇ ಚತುರ್ವೇದಿ ಅವರಿಗೆ ಸೂಚಿಸಿದ್ದರು. ನದಿ ತೀರದಲ್ಲಿ ಸಾವಿರಾರು ಮಂದಿಯ ಅಂತ್ಯ ಸಂಸ್ಕಾರ ಮಾಡಿದ್ದಾಗಿ ಅವರು ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು.

English summary
India is witnessing the 100 years of Jallianwala Bagh massacre on April 13. Colonel Reginald Dyer massacred more than 1,000 peaceful and unarmed people on this day of 1919 at Jallianwala Bagh in Amritsar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X