Yash Toxic Song: ಮನಮೋಹಕ.. ತುಸು ಮಾದಕ.. ತಾರಾ ಸುತಾರಿಯಾ ಜೊತೆ ರಾಕಿಂಗ್ ಸ್ಟಾರ್ ಯಶ್ ರೊಮ್ಯಾನ್ಸ್
Yash Toxic Song: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಪ್ರತಿಯೊಂದು ಸಣ್ಣ ಅಪ್‌ಡೇಟ್ ಕೂಡ ಪ್ರೇಕ್ಷಕರಲ್ಲಿ ಮತ್ತು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸುತ್ತಿದೆ. ಇದೀಗ ಚಿತ್ರದ ಎರಡನೇ ಹಾಡು ಬಿಡುಗಡೆ ಆಗಿದೆ. ಇದರಲ್ಲಿನ ದೃಶ್ಯಗಳು ದೊಟ್ಟ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕ್ಯೂರ್ಯಾಸಿಟಿ ಹೆಚ್ಚಾಗುವಂತೆ ಮಾಡಿವೆ.
ಇತ್ತೀಚೆಗಷ್ಟೇ ಬಿಡುಗಡೆಯಾದ 'ತಬಾಹಿ' ಹಾಡಿನ ಯಶಸ್ಸಿನ ಬೆನ್ನಲ್ಲೇ ಇದೀಗ ಮನಮೋಹಕ.. ತುಸು ಮಾದಕ ಎಂಬ ಸಖತ್ ರೊಮ್ಯಾಂಟಿಕ್ ಹಾಗೂ ಎಮೋಷನಲ್ ಸಾಂಗ್ ಬಿಡುಗಡೆಯಾಗಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ವಿಡಿಯೋವನ್ನು ಕೆವಿಎಲ್ ಪ್ರೊಡಕ್ಷನ್ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಹೊಸ ಝಲಕ್ ಕೊಟ್ಟಿದೆ.

ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಏರಿಸಿದ ಯಶ್-ತಾರಾ ಕೆಮಿಸ್ಟ್ರಿ..
ಮಂಗಳವಾರ ಯೂಟ್ಯೂಬ್ ಹಾಗೂ ವಿವಿಧ ಮ್ಯೂಸಿಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾದ ಈ ಮನಮೋಹಕ.. ತುಸು ಮಾದಕ.. ಎಂಬ ಹಾಡು ಭಾರೀ ವೈರಲ್ ಆಗಿದೆ. ಇದಕ್ಕೂ ಮುಂಚೆ ಬಂದ 'ತಬಾಹಿ' ಹಾಡಿನಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಜೋಡಿಯ ಬೋಲ್ಡ್ ಹಾಗೂ ಹಾಟ್ ರೊಮ್ಯಾನ್ಸ್ ಪ್ರೇಕ್ಷಕರ ನಿದ್ದೆಗೆಡಿಸಿತ್ತು. ಆದರೆ ಈ ಎರಡನೇ ಹಾಡಿನಲ್ಲಿ ಯಶ್ ಹಾಗೂ ತಾರಾ ಸುತಾರಿಯಾ ಅವರ ನಡುವಿನ ಸ್ಕ್ರೀನ್ ಕೆಮಿಸ್ಟ್ರಿ ಮತ್ತೊಂದು ಹಂತಕ್ಕೆ ಹೋಗಿದೆ.
ಅದರಲ್ಲೂ ವಿಶೇಷವಾಗಿ ಈ ಹಾಡಿನಲ್ಲಿ ಬರುವ ಬಾತ್‌ರೂಂನಲ್ಲಿ ತಾರಾ ಸುತಾರಿಯಾ ಹಾಗೂ ಯಶ್ ನಡುವಿನ ಬೋಲ್ಡ್ ಮತ್ತು ರೊಮ್ಯಾಂಟಿಕ್ ದೃಶ್ಯಗಳು ಈಗ ಇಂಟರ್‌ನೆಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿವೆ. ಯಶ್ ಅವರ ರಗಡ್ ಅವತಾರಕ್ಕೆ ತಾರಾ ಅವರ ಗ್ಲಾಮರಸ್ ಹಾಗೂ ಭಾವನಾತ್ಮಕ ಅಭಿನಯ ಸೂಕ್ತ ಜೋಡಿಯಾಗಿದೆ ಎಂದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಾಡಿನ ದೃಶ್ಯಗಳನ್ನು ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದು, ಇವು ಇದೀಗ ಗೂಗಲ್‌ನಲ್ಲೂ ಕೂಡ ಟ್ರೆಂಡಿಂಗ್‌ನಲ್ಲಿವೆ.
ಕಿಯಾರಾ ಅಡ್ವಾಣಿ, ನಯನತಾರಾ..
'ಮನಮೋಹಕ' ಕೇವಲ ಒಂದು ಗ್ಲಾಮರಸ್ ಹಾಡಾಗಿ ಮಾತ್ರವಲ್ಲದೆ, ಕಥೆಯ ಭಾಗವಾಗಿಯೂ ಗಮನ ಸೆಳೆಯುತ್ತದೆ. ಈ ಹಾಡಿನಲ್ಲಿ ಕೇವಲ ತಾರಾ ಸುತಾರಿಯಾ ಅಷ್ಟೇ ಅಲ್ಲದೆ, ಚಿತ್ರದ ಮತ್ತಿಬ್ಬರು ಪ್ರಮುಖ ನಾಯಕಿಯರಾದ ಕಿಯಾರಾ ಅಡ್ವಾಣಿ ಮತ್ತು ನಯನತಾರಾ ಗ್ಲಿಂಪ್ಸ್ ಅವತಾದಲ್ಲಿ ಕಾಣಿಸಿಕೊಳ್ಳುವುದು ಈ ಹಾಡಿನ ಕುತೂಹಲವನ್ನು ಹೆಚ್ಚಿಸಿದೆ.
ಚಿತ್ರದ ಮೊದಲ ಗೀತೆಗೆ ಖ್ಯಾತ ನಿರ್ದೇಶಕ ಹಾಗೂ ಗೀತಾರಚನೆಕಾರ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದರು. ಆದರೆ ಈ 'ಮನಮೋಹಕ' ಪ್ರಣಯ ಗೀತೆಗೆ ಉದಯೋನ್ಮುಖ ಸಾಹಿತಿ ಪ್ರಮೋದ್ ಮರವಂತೆ ಅರ್ಥಪೂರ್ಣ ಹಾಗೂ ಮೋಡಿ ಮಾಡುವಂತಹ ಸಾಲುಗಳನ್ನು ಹೆಣೆದಿದ್ದಾರೆ. ಇನ್ನೂ ಈ ಗೀತೆಗೆ ತಮ್ಮ ಗಂಭೀರ ಹಾಗೂ ಭಾವುಕ ಕಂಠದ ಮೂಲಕ ಜೀವ ತುಂಬಿದವರು ಗಾಯಕ ಸಿದ್ದಾರ್ಥ್ ಬಸ್ರೂರ್. ಅವರ ಗಾಯನ ಪ್ರೇಮಿಗಳ ಹೃದಯ ತಟ್ಟುವಂತಿದೆ.
ಬಾಕ್ಸ್ ಆಫೀಸ್ ಧಮಾಕಾಗೆ ಸಜ್ಜಾದ 'ಟಾಕ್ಸಿಕ್'
'ಕೆಜಿಎಫ್' ಜಾಗತಿಕ ಯಶಸ್ಸಿನ ನಂತರ ಯಶ್ ನಟಿಸುತ್ತಿರುವ ಚಿತ್ರವಾದ್ದರಿಂದ 'ಟಾಕ್ಸಿಕ್' ಮೇಲೆ ವಿಶ್ವಾದ್ಯಂತ ಭಾರತೀಯ ಚಿತ್ರರಂಗದ ಕಣ್ಣಿದೆ. ಡ್ರಗ್ ಮಾಫಿಯಾ ಹಾಗೂ ಡಾರ್ಕ್ ಶೇಡ್ ಹಿನ್ನೆಲೆಯಲ್ಲಿ ಮೂಡಿಬರುತ್ತಿದೆ ಎನ್ನಲಾದ ಈ ಚಿತ್ರದಲ್ಲಿ ಯಶ್ ಹಿಂದೆಂದೂ ಕಾಣಿಸಿಕೊಂಡಿರದ ಭಿನ್ನ ಹಾಗೂ ಖಡಕ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮೊದಲ ಹಾಡು 'ತಬಾಹಿ'ಯಿಂದ ಶುರುವಾದ ಟಾಕ್ಸಿಕ್ ಹವಾ ಈಗ 'ಮನಮೋಹಕ' ಹಾಡಿನ ಮೂಲಕ ಮತ್ತಷ್ಟು ಜೋರಾಗಿದೆ. ಬಾತ್‌ರೂಂ ರೊಮ್ಯಾನ್ಸ್ ದೃಶ್ಯಗಳು ಮತ್ತು ಸಂಗೀತ ಪ್ರಿಯರ ಮನಗೆದ್ದಿರುವ ಈ ಸಾಂಗ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಮುನ್ನುಗ್ಗುತ್ತಿದೆ. ಈ ಹಾಡಿನ ಮೂಲಕ ಗೀತು ಮೋಹನ್ದಾಸ್ ತಮ್ಮ ವಿಶಿಷ್ಟ ಮೇಕಿಂಗ್ ಶೈಲಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದ್ದಾರೆ.


Click it and Unblock the Notifications
