Actress Ramya: ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ: ನಟಿ ರಮ್ಯಾ ಹೀಗಂದಿದ್ದೇಕೆ?
ಸ್ಯಾಂಡಲ್‌ವುಡ್‌ನಲ್ಲಿ ಒಗ್ಗಟ್ಟಿನ ಎನ್ನುವ ಮಾತುಗಳು ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಒಗ್ಗಟ್ಟು ಎನ್ನುವುದು ಮೇಲ್ನೋಟಕ್ಕೆ ಮಾತ್ರ ಇದ್ದು, ನಿಜವಾಗಿ ಅಂತಹ ವಾತಾವರಣವಿಲ್ಲ ಎಂದು ಹೇಳುತ್ತಾರೆ. ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದ ನಟ ಕಿಚ್ಚ ಸುದೀಪ್ ಅವರು ನಾವೆಲ್ಲ ಒಗ್ಗಟ್ಟಿನಿಂದ ಇರೋದಕ್ಕೆ ಪ್ರತಿಕ್ರಿಯೆ ಕೊಡಲಿಲ್ಲ ಎಂದಿದ್ದರು. ಆದರೆ ನಟಿ ಮೋಹಕತಾರೆ ರಮ್ಯಾ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ.
ಸಿನಿಮಾ ನಟಿಯರಿಗಾಗಿ ಆಯೋಜಿಸುತ್ತಿರುವ ಕ್ವೀನ್ಸ್ ಪ್ರೀಮಿಯರ್ ಲೀಗ್ ಲಾಂಚ್ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. 'ಚಿತ್ರರಂಗದಲ್ಲಿ ಹೆಣ್ಣುಮಕ್ಕಳನ್ನು ಅಷ್ಟೊಂದು ಗುರುತಿಸುವುದಿಲ್ಲ. ಹೆಣ್ಣುಮಕ್ಕಳಿಗೆ ಸಪೋರ್ಟ್ ತುಂಬಾ ಮುಖ್ಯ ಎಂದಿದ್ದಾರೆ. ಈಗ ಕನ್ನಡ ಇಂಡಸ್ಟ್ರಿಯಲ್ಲಿ ನೋಡಿದರೆ ಆ ಯೂನಿಟಿ ನನಗೆ ಕಾಣಿಸುತ್ತಿಲ್ಲ. ಹಾಗಾಗಿ ಇಂತಹ ಕ್ರೀಡೆಗಳು ನಡೆಯುವುದರಿಂದ ನಾವೆಲ್ಲ ಒಟ್ಟಿಗೆ ಸೇರಬಹುದು' ಎಂದು ರಮ್ಯಾ ಅಭಿಪ್ರಾಯಪಟ್ಟಿದ್ದಾರೆ.

'ಒಂದು ಸಿನಿಮಾ ರಿಲೀಸ್ ಆದಾಗಲೂ ಹೆಚ್ಚಾಗಿ ಪ್ರಚಾರ ಮಾಡಲು ಯಾರೂ ಹೋಗುವುದಿಲ್ಲ. ಇಂಡಸ್ಟ್ರಿಯಲ್ಲಿ ನಾಯಕತ್ವ ಅನ್ನುವುದು ತುಂಬಾನೇ ಮುಖ್ಯ. ನಾವೆಲ್ಲರೂ ಒಂದೇ ಎನ್ನುವ ಮನೋಭಾವ ಬಂದರೆ ಚೆನ್ನಾಗಿರುತ್ತೆ. ಇಂಡಸ್ಟ್ರಿಯಲ್ಲಿ ಆ ಒಗ್ಗಟ್ಟು ಯಾಕೆ ಇಲ್ಲ ಅನ್ನೋದು ನನಗೂ ಗೊತ್ತಿಲ್ಲ. ಆದರೆ ಒಗ್ಗಟ್ಟು ನನಗೆ ಕಾಣಿಸುತ್ತಿಲ್ಲ' ಎಂದು ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.
'ಒಗ್ಗಟ್ಟಿನ ವಿಚಾರಕ್ಕೆ ಬಂದರೆ ವೈಯಕ್ತಿಕವಾಗಿ ನಾನು ಮುಖ್ಯವಾಗಿ ಹೊಸ ಪ್ರತಿಭೆಗಳ ಪರ ನಿಲ್ಲುತ್ತೇನೆ. ಸಿನಿಮಾ ಪ್ರಮೋಷನ್, ಸಾಂಗ್ ರಿಲೀಸ್, ಟ್ರೇಲರ್ ರಿಲೀಸ್ ಮಾಡಿ ಅಂತಾರೆ. ಆಗ ನಾನು ಕೂಡ ಅದನ್ನು ಶೇರ್ ಮಾಡುತ್ತೇನೆ. ಕಾರ್ಯಕ್ರಮಗಳಿಗೆ ಕರೆದರೂ ನಾನು ಖಂಡಿತವಾಗಿ ಹೋಗಿ ಸಪೋರ್ಟ್ ಮಾಡ್ತೀನಿ. ನಮ್ಮ ಇಂಡಸ್ಟ್ರಿಯಲ್ಲಿ ಕೊನೆಯ ಹಿಟ್ ನೋಡಿ ತುಂಬಾ ದಿನಗಳಾಗಿವೆ. ಹಾಗಿದ್ದರೂ ತುಂಬಾ ಜನ ಇಂಡಸ್ಟ್ರಿಗೆ ಬರ್ತಿದ್ದಾರೆ. ಒಳ್ಳೆಯ ಸಿನಿಮಾಗಳ ಮಾಡಬೇಕು ಅಂತ ಪ್ರಯತ್ನ ಪಡುತ್ತಿದ್ದಾರೆ. ಅಂತವರಿಗೆ ನಾವು ಸಪೋರ್ಟ್ ಮಾಡಲೇಬೇಕು. ಇವತ್ತು ನಾನು ಇಲ್ಲಿರಲು ನೀವೆಲ್ಲರೂ ಕಾರಣ. ಹಾಗಾಗಿ ನನಗೆ ಅವಕಾಶ ಸಿಕ್ಕಿದಾಗ ನಾನು ಕೂಡ ಸಪೋರ್ಟ್ ಮಾಡುತ್ತೇನೆ' ಎಂದಿದ್ದಾರೆ.
ಆರ್‌ಸಿಬಿಗೆ ಅಂಬಾಸಿಡರ್ ಆಗಿದ್ದೆ
'ನಾನು ಶಾಲೆಯಲ್ಲಿ ಓದುತ್ತಿದ್ದಾಗ ಬಾಸ್ಕೆಟ್ ಬಾಲ್ ಆಡುತ್ತಿದ್ದೆ. ನಾನು ಬ್ಯಾಸ್ಕೆಟ್ ಬಾಲ್ ಟೀಂ ಕ್ಯಾಪ್ಟನ್ ಆಗಿದ್ದೆ. ನಾನು ಕುಳ್ಳಗಿದ್ದೇನೆ, ಹೇಗೆ ಆಡಿದ್ರು? ಅಂತ ನಿಮಗೆ ಅನಿಸಬಹುದು. ನಾನು ಜಿಲ್ಲಾಮಟ್ಟದಲ್ಲಿ ಹಲವು ಪಂದ್ಯಗಳನ್ನು ಗೆದ್ದಿದ್ದೆವು. ಆ ಮೇಲೆ ಐದು ವರ್ಷ ಆರ್‌ಸಿಬಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದೆ. ನನಗೆ ಟೆನ್ನಿಸ್, ಫುಟ್‌ಬಾಲ್ ಅಂದ್ರೆ ಬಹಳ ಇಷ್ಟ ಎಂದು ರಮ್ಯಾ ತಮ್ಮ ಕ್ರೀಡಾಸಕ್ತಿಯನ್ನ ಬಿಚ್ಚಿಟ್ಟಿದ್ದಾರೆ. ಸಿನಿಮಾದವರು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಕ್ರೀಡೆ ನಮ್ಮನ್ನು ಒಗ್ಗೂಡಿಸುತ್ತದೆ. ಎಲ್ಲರೂ ಎಲ್ಲ ದಿನವೂ ಶೂಟಿಂಗ್‌ನಲ್ಲಿ ಇರೋದಿಲ್ಲ. ಬಿಡುವಿದ್ದಾಗ ಆಟವಾಡಬಹುದು' ಎಂದಿದ್ದಾರೆ.












Click it and Unblock the Notifications