'ಟಾಕ್ಸಿಕ್' ಚಿತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ ಪಾತ್ರದ ಹೆಸರು, ಫಸ್ಟ್ ಲುಕ್ ರಿವೀಲ್
ಸ್ಯಾಂಡಲ್‌ವುಡ್ ನಟ, ರಾಕಿಂಗ್ ಸ್ಟಾರ್ ಯಶ್ ಅವರ ಬಹು ನಿರೀಕ್ಷಿತ "ಟಾಕ್ಸಿಕ್-ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್" ಚಿತ್ರತಂಡವು ಬಿಗ್ ಅಪ್‌ಡೇಟ್ ನೀಡಿದೆ. ಈ ಸಿನಿಮಾದಲ್ಲಿ ಬಹುಭಾಷಾ ನಟಿಯರು ಯಶ್ ಜೊತೆಗೆ ತೆರೆ ಹಂಚಿಕೊಂಡಿರುವುದು ಗೊತ್ತೇ ಇದೆ. ಇದರಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಸಹ ಒಬ್ಬರು. ಆದರೆ ಅಂತಿಮವಾಗಿ ಯಶ್‌ಗೆ ನಾಯಕಿ ಯಾರು ಎಂಬ ಉತ್ತರ ಸಿಕ್ಕಿಲ್ಲ. ಆದರೆ ಕಿಯಾರ ಅವರ ಪಾತ್ರದ ಹೆಸರು ಹಾಗೂ ಫಸ್ಟ್ ಲುಕ್ ಅನ್ನು ಚಿತ್ರತಂಡ ಕೊನೆಗೂ ರಿವೀಲ್ ಮಾಡಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಕಿಯಾರಾ "ನಾದಿಯಾ" ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಕಿಯಾರಾ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಅಡ್ವಾಣಿಯ ಪಾತ್ರವು ಸರ್ಕಸ್ ಹಿನ್ನೆಲೆಯಲ್ಲಿದ್ದು, ಈ ಪಾತ್ರವು ವಿಶಿಷ್ಟ ಸಿನಿಮಾ ಜಗತ್ತಿಗೆ ಪ್ರವೇಶಿಸುತ್ತಿದ್ದಂತೆ ಅಡ್ವಾಣಿಯವರ ವಿಭಿನ್ನ ಆಯಾಮವನ್ನು ಪ್ರದರ್ಶಿಸಲು ಸಜ್ಜಾದಂತೆ ಕಾಣುತ್ತಿದೆ.

ಹೊಸ ಟಾಕ್ಸಿಕ್ ಪೋಸ್ಟರ್‌ನಲ್ಲಿ ನಾದಿಯಾ ಪಾತ್ರಧಾರಿ ಕಿಯಾರಾ ಭವ್ಯ ಸರ್ಕಸ್ ವೇದಿಕೆಯ ಮಧ್ಯದಲ್ಲಿ ಬರಿಗಾಲಿನಲ್ಲಿ ನಿಂತಿರುವುದನ್ನು ತೋರಿಸಲಾಗಿದೆ. ಕಾರ್ಸೆಟ್ ಶೈಲಿಯ ರವಿಕೆ ಹಾಗೂ ಸೊಗಸಾದ ಕಪ್ಪು ಗೌನ್‌ನಲ್ಲಿ, ಅವರ ನೋಟವು ಕ್ಲಾಸಿಕ್ ಗ್ಲಾಮರ್‌ನಿಂದ ಕೂಡಿದೆ. ಪೋಸ್ಟರ್ ಹಂಚಿಕೊಂಡಿರುವ ಯಶ್, "ಕಿಯಾರಾ ಅಡ್ವಾಣಿಯನ್ನು ಟಾಕ್ಸಿಕ್‌ನಲ್ಲಿ ನಾದಿಯಾ ಆಗಿ ಪರಿಚಯಿಸಲಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.
ನಿರ್ದೇಶಕಿ ಹೇಳಿದ್ದೇನು?
ಟಾಕ್ಸಿಕ್ ಸಿನಿಮಾದ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಕಿಯಾರಾ ಅವರ ಪಾತ್ರವನ್ನು ವಿವರಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ. "ಕೆಲವು ಅಭಿನಯಗಳು ಕೇವಲ ಒಂದು ಚಿತ್ರಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ, ಅವು ಒಬ್ಬ ಕಲಾವಿದರನ್ನು ಮರು ವ್ಯಾಖ್ಯಾನಿಸುತ್ತವೆ. ಈ ಚಿತ್ರದಲ್ಲಿ ಕಿಯಾರಾ ಪರದೆಯ ಮೇಲೆ ಸೃಷ್ಟಿಸಿದ್ದು, ಪರಿವರ್ತನೆಗೆ ಕಡಿಮೆಯಾದದ್ದಲ್ಲ. ಒಬ್ಬ ನಿರ್ದೇಶಕಿಯಾಗಿ, ನಾನು ಅವರ ಬಗ್ಗೆ ಮತ್ತು ಅವರ ಅಭಿನಯಕ್ಕಾಗಿ ಮತ್ತು ನಮ್ಮ ಪ್ರಯಾಣದಲ್ಲಿ ಅವರು ತಂದ ನಂಬಿಕೆ ಮತ್ತು ಹೃದಯಕ್ಕಾಗಿ ತುಂಬಾ ಹೆಮ್ಮೆಪಡುತ್ತೇನೆ ಎಂದಿದ್ದಾರೆ.
ಈ ಸಿನಿಮಾದಲ್ಲಿ ಕಿಯಾರಾ ಮಾತ್ರವಲ್ಲ, ನಟಿ ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ, ಕನ್ನಡದ ರುಕ್ಮಿಣಿ ವಸಂತ್, ಟೋವಿನೋ ಥಾಮಸ್, ಅಕ್ಷಯ್ ಒಬೆರಾಯ್ ಮತ್ತು ಸುದೇವ್ ನಾಯರ್ ಸೇರಿ ಪ್ರಮುಖರು ನಟಿಸಿದ್ದಾರೆ. ಈ ಸಿನಿಮಾಗೆ ಯಶ್ ಮತ್ತು ಗೀತು ಮೋಹನ್ ದಾಸ್ ಕಥೆ ಬರೆದಿದ್ದು, 2026ರ ಮಾರ್ಚ್ 29ರಂದು ಬಿಡುಗಡೆಯಾಗಲಿದೆ.
ರಾಷ್ಟ್ರೀಯ ಪ್ರಶಸ್ತಿ ವಿಜೇತ ರಾಜೀವ್ ರವಿ ಈ ಸಿನಿಮಾದ ಛಾಯಾಗ್ರಾಹಕರಾಗಿ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ಸಂಯೋಜನೆ, ಹಾಲಿವುಡ್ ಸ್ಟಂಟ್ ನಿರ್ದೇಶಕ ಜೆಜೆ ಪೆರ್ರಿ (ಜಾನ್ ವಿಕ್) ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತ ಜೋಡಿ ಅನ್ಬರಿವ್ ಅವರು ಸಾಹಸ ಸನ್ನಿವೇಶಗಳು ಈ ಸಿನಿಮಾದಲ್ಲಿ ಇರಲಿದ್ದು, ಈ ಎಲ್ಲ ಕಾರಣಗಳಿಂದಾಗಿ ನಿರೀಕ್ಷೆ ಹೆಚ್ಚಾಗಿದೆ. ಕೆಜಿಎಫ್-2 ಬಳಿಕ ಹಲವು ವರ್ಷಗಳ ನಂತರ ಯಶ್ ಅವರ ಸಿನಿಮಾ ತೆರೆಗೆ ಬರುತ್ತಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ.












Click it and Unblock the Notifications