Tagaru Palya: ‘ಟಗರು ಪಲ್ಯ’ ಟ್ರ್ಯಾಕ್: ನಾಗಭೂಷಣ್ ಹವಾ ಹೇಗಿದೆ?
ಕನ್ನಡದಲ್ಲಿ ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು, ಕನ್ನಡ ಸಿನಿಮಾ ಪ್ರೇಕ್ಷಕರಿಂದ ಬೆನ್ನು ತಟ್ಟಿಸಿಕೊಂಡಿದ್ದ ನಟ ನಾಗಭೂಷಣ್ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇಕ್ಕಟ್, ಬಡವ ರಾಸ್ಕಲ್ ಸಿನಿಮಾ ಮೂಲಕ ನಾಗಭೂಷಣ್ ಕನ್ನಡಿಗರಿಗೆ ಹತ್ತಿರವಾಗಿದ್ದರು. ಇದೀಗ ಹುಟ್ಟುಹಬ್ಬದ ಸಂಭ್ರಮದ ನಡುವೆ, ನಾಗಭೂಷಣ್‌ಗೆ ಸಿನಿಮಾ ತಂಡ ಸರ್ಪ್ರೈಸ್ ನೀಡಿದೆ.
ಅಂದಹಾಗೆ ಡಾಲಿ ಧನಂಜಯ್ ತಮ್ಮದೆ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ 3ನೇ ಸಿನಿಮಾ 'ಟಗರು ಪಲ್ಯ'. ಹೀಗೆ ಫಸ್ಟ್ ಲುಕ್‌ನಿಂದಲೇ ಹವಾ ಎಬ್ಬಿಸಿರುವ 'ಟಗರು ಪಲ್ಯ' ಸಿನಿಮಾ ಈಗಾಗಲೇ ಕನ್ನಡಿಗರ ಕುತೂಹಲ ಕೆರಳಿಸಿದೆ. ಡಾಲಿ ಅಭಿನಯದ ಹೆಡ್ & ಬುಷ್ ಚಿತ್ರದ ರಿಲೀಸ್‌ಗೆ ಮೊದಲು ಟಗರು ಪಲ್ಯ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಇದೀಗ ಶೂಟ್ ಮುಗಿಸಿ, ಬಿಡುಗಡೆಗೂ ಸಜ್ಜಾಗುತ್ತಿದೆ. ಇದೇ ಹೊತ್ತಲ್ಲಿ ನಾಗಭೂಷಣ್ ಅವರ ಹುಟ್ಟುಹಬ್ಬ ಕೂಡ ಎದುರಾಗಿದ್ದು, ಸರ್ಪ್ರೈಸ್ ಎಂಬಂತೆ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ.

ಡಾಲಿ ಧನಂಜಯ್ ಬರೆದ ಸಾಹಿತ್ಯ!
ಹೌದು, ಮೊದಲೇ ಹೇಳಿದಂತೆ ಇಕ್ಕಟ್, ಬಡವ ರಾಸ್ಕಲ್ ಖ್ಯಾತಿಯ ಪ್ರತಿಭಾನ್ವಿತ ಕಲಾವಿದ ನಾಗಭೂಷಣ್‌ಗೆ ಇಂದು ಜನ್ಮದಿನದ ಸಂಭ್ರಮ. ಭೂಷಣ್ ಹುಟ್ಟುಹಬ್ಬದ ಸ್ಪೆಷಲ್ ಎಂಬಂತೆ ಟಗರು ಪಲ್ಯ ಬಳಗದಿಂದ ವಿಶೇಷ ಗಿಫ್ಟ್ ಸಿಕ್ಕಿದೆ. ಟೈಟಲ್ ಟ್ರ್ಯಾಕ್ ಈಗ ಸಿನಿಮಾದ ನಾಯಕ ನಾಗಭೂಷಣ್ ಬರ್ತ್ ಡೇ ಅಂಗವಾಗಿ ಬಿಡುಗಡೆ ಆಗಿದೆ. ಇದರಲ್ಲಿ ಇನ್ನೂ ಒಂದು ಸ್ಪೆಷಲ್ ಏನಂದ್ರೆ, ಟೈಟಲ್ ಟ್ರ್ಯಾಕ್‌ನಲ್ಲಿ ಧನಂಜಯ್ ಕ್ಯಾಚಿ & ಮ್ಯಾಚಿ ಪದಗಳನ್ನು ಗುಡ್ಡೆ ಹಾಕಿ ಸಾಹಿತ್ಯ ರಚಿಸಿದ್ದಾರೆ. ಹಾಗೇ ವಾಸುಕಿ ವೈಭವ್ ಮ್ಯೂಸಿಕ್ ನೀಡಿದ್ದು, ವಿಜಯ್ ಪ್ರಕಾಶ್ ಅವರು ಹಾಡಿಗೆ ಧ್ವನಿಯಾಗಿದ್ದಾರೆ.
ಏನಿದು 'ಟಗರು ಪಲ್ಯ' ಕಥೆ?
'ಟಗರು ಪಲ್ಯ' ಸಿನಿಮಾಗೆ ಯುವ ನಿರ್ದೇಶಕ ಉಮೇಶ್ ಕೃಪಾ ಡೈರೆಕ್ಷನ್ ಇದೆ. ಉಮೇಶ್‌ಗೆ ಇದು ಮೊದಲನೇ ಚಿತ್ರ. ಹಾಗೇ ಟಗರು ಪಲ್ಯ ಚಿತ್ರದ ಮೂಲಕ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಈ ಚಿತ್ರದಲ್ಲಿ ನಾಗಭೂಷಣ್ ನಾಯಕನಾಗಿ ನಟಿಸಿದ್ದಾರೆ. ಕಬ್ಬಿನ ಕಣಜ ಮಂಡ್ಯ ಜಿಲ್ಲೆಯ ಹಳ್ಳಿ ಭಾಗದಲ್ಲಿ ನಡೆಯುವ ಆಚರಣೆ ಸುತ್ತಾ ಈ ಸಿನಿಮಾ ಕಥೆ ಕೆತ್ತಿದ್ದಾರೆ ನಿರ್ದೇಶಕ ಉಮೇಶ್ ಕೃಪಾ. ಹೀಗಾಗಿ 'ಟಗರು ಪಲ್ಯ' ಸಿನಿಮಾ ತನ್ನ ಫಸ್ಟ್ ಲುಕ್‌ನಿಂದಲೇ ಕನ್ನಡಿಗರ ಗಮನ ಸೆಳೆದಿತ್ತು.

'ಟಗರು ಪಲ್ಯ' ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದ್ದು ಕೂತೂಹಲ ದುಪ್ಪಟ್ಟಾಗಿದೆ. ಹಿರಿಯ ಕಲಾವಿದರಾದ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಟಗರು ಪಲ್ಯ ಚಿತ್ರಕ್ಕೆ ಸಾಥ್ ಕೊಟ್ಟಿದೆ. ಹಾಗೇ ವಾಸುಕಿ ವೈಭವ್ ಸಂಗೀತವಿದೆ ಇನ್ನು ಎಸ್.ಕೆ.ರಾವ್ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಈಗ ಟೈಟಲ್ ಟ್ರ್ಯಾಕ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಟಗರು ಪಲ್ಯ ತಂಡ ಇದೇ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಮಾಡಲು ಸಕಲ ಸಿದ್ಧತೆ ನಡೆಸುತ್ತಿದೆ. ಹೀಗೆ ಕನ್ನಡ ನಾಡಿನ ಹಬ್ಬಕ್ಕೆ ವಿಷೇಶ ಕಥಾಹಂದರದ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಒಟ್ನಲ್ಲಿ ಡಾಲಿ ಧನಂಜಯ್ ನಟರಾಗಿ ನಟಿಸುವ ಜೊತೆಗೆ ತಮ್ಮ ನಿರ್ಮಾಣ ಕಾರ್ಯಕ್ಕೂ ಒತ್ತು ನೀಡಿದ್ದಾರೆ. ಈಗಾಗಲೇ ನಿರ್ಮಾಣದ ಮೂಲಕ ಸಕ್ಸಸ್ ಕಂಡಿರುವ ನಟ ಡಾಲಿಗೆ, ಟಗರು ಪಲ್ಯ ಚಿತ್ರ ಕೂಡ ಸಕ್ಸಸ್ ಕೊಡುವ ನಿರೀಕ್ಷೆ ಇದೆ. ಈ ನಡುವೆ ಡಾಲಿ ಸಾಹಿತ್ಯದ ಸಾಂಗ್ಸ್ ಅಭಿಮಾನಿಗಳಿಗೆ ಹೆಚ್ಚು ಖುಷಿ ನೀಡುವುದು ಪಕ್ಕಾ. ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಡಾಲಿ ಇನ್ನು ಮುಂದೆ ಸಾಹಿತಿಯಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ಮಿಂಚು ಹರಿಸಲು ಸಜ್ಜಾಗಿದ್ದಾರೆ. ಇದಕ್ಕೆ ಅವರದ್ದೇ ಸಂಸ್ಥೆ ನಿರ್ಮಿಸಿರುವ ಟಗರು ಪಲ್ಯ ಚಿತ್ರ ಹೊಸ ವೇದಿಕೆ ಕೊಟ್ಟಂತಾಗಿದೆ.












Click it and Unblock the Notifications