Sudeep: ಮ್ಯಾಕ್ಸ್ vs ಯುಐ; ಉಪೇಂದ್ರ ಬಗ್ಗೆ ಸುದೀಪ್ ಹೇಳಿದ್ದೇನು?
ಸ್ಯಾಂಡಲ್‌ವುಡ್ ಎರಡು ಬಹುನಿರೀಕ್ಷಿತ ಸಿನಿಮಾಗಳು ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಗೆ ಸಜ್ಜಾಗಿದ್ದು ಸಿನಿ ರಸಿಕರನ್ನು ಕಾಯುವಂತೆ ಮಾಡಿದೆ. ಉಪೇಂದ್ರ ನಿರ್ದೇಶನದ ಯುಐ ಸಿನಿಮಾ ಹಲವು ಕಾರಣಗಳಿಂದ ಭಾರಿ ಕುತೂಹಲ ಕೆರಳಿಸಿದೆ. ಮುಖ್ಯವಾಗಿ ಇದು ಉಪೇಂದ್ರ ನಿರ್ದೇಶನದ ಸಿನಿಮಾ ಎನ್ನುವುದೇ ನಿರೀಕ್ಷೆ ಹೆಚ್ಚಲು ಕಾರಣವಾಗಿದೆ. ಮತ್ತೊಂದು ಕಡೆ ಸುದೀಪ್ ಅಭಿನಯದ ಮ್ಯಾಕ್ಸ್ ಕೂಡ ಇದೇ ತಿಂಗಳು ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ.
ಯುಐ ಸಿನಿಮಾ ಡಿಸೆಂಬರ್ 20ರಂದು ಬಿಡುಗಡೆಯಾಗಲಿದೆ. ಯುಐ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಲು ನಿರ್ಮಾಪಕರು ಯೋಜಿಸುತ್ತಿದ್ದಾರೆ.

ಮತ್ತೊಂದು ಕಡೆ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮ್ಯಾಕ್ಸ್ ಡಿಸೆಂಬರ್ 25ರಂದು ತೆರೆಗೆ ಬರಲಿದೆ. ಆಗಸ್ಟ್ ತಿಂಗಳಿನಲ್ಲೇ ಬಿಡುಗಡೆಯಾಗುತ್ತದೆ ಎಂದು ನಿರೀಕ್ಷೆ ಮಾಡಿದ್ದ ಸಿನಿಮಾ ಹಲವು ಕಾರಣಗಳಿಂದ ತಡವಾಗಿದ್ದು ಅಂತಿಮವಾಗಿ ಡಿಸೆಂಬರ್ 25ರಂದು ತೆರೆಗೆ ತರಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಮ್ಯಾಕ್ಸ್ ಕೂಡ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಗೆ ಬರಲಿದೆ.
ಉಪೇಂದ್ರ ಬಗ್ಗೆ ಸುದೀಪ್ ಹೇಳಿದ್ದೇನು?
ಸುದೀಪ್, ಮ್ಯಾಕ್ಸ್ ನಿರ್ದೇಶಕ ವಿಜಯ್ ಕಾರ್ತಿಕೇಯ ಮತ್ತು ನಿರ್ಮಾಪಕ ಕಲೈಪುಲಿ ಎಸ್ ಧನು ಮಾಧ್ಯಮಗೋಷ್ಠಿ ನಡೆಸಿದರು. ಸಿನಿಮಾ ಬಿಡುಗಡೆ ಕುರಿತಂತೆ ಸುದೀಪ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಈ ನಡುವೆ ಯುಐ ರಿಲೀಸ್ ಆದ ಒಂದೇ ವಾರಕ್ಕೆ ಮ್ಯಾಕ್ಸ್ ರಿಲೀಸ್ ಮಾಡುವುದರಿಂದ ಎರಡೂ ಸಿನಿಮಾಗಳಿಗೆ ತೊಂದರೆಯಾಗುತ್ತದೆಯಾ ಎಂದು ಕೇಳಿದ್ದಕ್ಕೆ ಉತ್ತರ ಕೊಟ್ಟ ಅವರು, ಎರಡೂ ಸಿನಿಮಾ ಗೆಲ್ಲಲಿ ಎಂದರು.
ಉಪೇಂದ್ರ ನಿಮ್ಮ ನಡುವೆ ಬಾಕ್ಸ್ ಆಫೀಸ್ ಪೈಪೋಟಿ ನಡೆಯುತ್ತದೆ ಎಂದಿದ್ದಕ್ಕೆ ಉತ್ತರ ನೀಡಿದ ಅವರು, ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ ಮತ್ತೆ ನಿರ್ದೇಶನ ಮಾಡಿ ಎಂದು ನಾನೇ ಹಲವು ಬಾರಿ ಒತ್ತಾಯಿಸಿದ್ದೇನೆ. ಅವರ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಬೇಕು ಎಂದು ಹಾರೈಸುತ್ತೇನೆ. ನಮ್ಮಿಂದ ತೊಂದರೆಯಾಗಿದೆ ಎಂದು ಅವರು ಹೇಳಿಲ್ಲ, ಅವರಿಂದ ನಮಗೆ ತೊಂದರೆ ಆಗಿದೆ ಎಂದು ನಾವು ಹೇಳಿಲ್ಲ ಎಂದರು.
ನಿರ್ಮಾಪಕರು ಅಳೆದು ತೂಗಿ ಬಿಡುಗಡೆ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಕೂಡ ಸಿನಿಮಾ ಬಿಡುಗಡೆಯಾಗುತ್ತಿರುವ ಕಾರಣ ಎಲ್ಲವನ್ನೂ ನೋಡಿಕೊಂಡು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಬೇಕಾಗುತ್ತದೆ. ಇದರಲ್ಲಿ ಉಪೇಂದ್ರ ಅವರ ಜೊತೆ ಸ್ಪರ್ಧೆ ಮಾಡುವ ವಿಚಾರವೇ ಬರುವುದಿಲ್ಲ, ನಾನು ಅವರ ಸಿನಿಮಾ ನೋಡಿಕೊಂಡು ಬೆಳೆದವನು ಎಂದರು.












Click it and Unblock the Notifications