ಭೇಟಿಯಾಗೋಣ ಅಂತ ಕರೆಸಿ ಅಲ್ಲೆಲ್ಲ ಕೆಟ್ಟದಾಗಿ ಟಚ್ ಮಾಡಿದ್ದ: ಖ್ಯಾತ ರಿಯಾಲಿಟಿ ಶೋ ಸ್ಪರ್ಧಿಗೆ ಕಹಿ ಅನುಭವ
ರಿಯಾಲಿಟಿ ಶೋಗಳ ಲೋಕದಲ್ಲಿ ಸದಾ ಸೆನ್ಸೇಷನ್ ಸೃಷ್ಟಿಸುವ 'ಸ್ಪ್ಲಿಟ್ಸ್‌ವಿಲ್ಲಾ' (Splitsvilla X6) ಕಾರ್ಯಕ್ರಮ ಮುಕ್ತಾಯಗೊಂಡಿದ್ದರೂ, ಅದರ ಸ್ಪರ್ಧಿಗಳ ಸುತ್ತಲಿನ ವಿವಾದಗಳು ಮಾತ್ರ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಇತ್ತೀಚೆಗಷ್ಟೇ ಕುಶಾಲ್ ತನ್ವರ್ (ಗುಲ್ಲು) ಮತ್ತು ಕೈರಾ ಅನು ಈ ಸೀಸನ್‌ನ ವಿಜೇತರಾಗಿ ಹೊರಹೊಮ್ಮಿದ ಬೆನ್ನಲ್ಲೇ, ಶೋನ ಸ್ಪರ್ಧಿ ಸಿಮ್ರಾನ್ ಖಾನ್ ಮಾಡಿರುವ ಆಘಾತಕಾರಿ ಆರೋಪವೊಂದು ಇಡೀ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.
ಪಾಡ್‌ಕಾಸ್ಟ್‌ನಲ್ಲಿ ಕಹಿ ಸತ್ಯ ಬಿಚ್ಚಿಟ್ಟ ಸಿಮ್ರಾನ್
ಭಾಗ್ಯ ಸಿಂಗ್ ಅವರ ಜನಪ್ರಿಯ ಪಾಡ್‌ಕಾಸ್ಟ್‌ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸಿಮ್ರಾನ್ ಖಾನ್, ತಮ್ಮ ರಿಯಾಲಿಟಿ ಶೋ ಜರ್ನಿ ಹಾಗೂ ಸಹ-ಸ್ಪರ್ಧಿಗಳೊಂದಿಗಿನ ಒಡನಾಟದ ಬಗ್ಗೆ ಮಾತನಾಡುತ್ತಾ ಈ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಮಾಜಿ ಸ್ಪರ್ಧಿ ಸಚಿನ್ ಶರ್ಮಾ ತನಗೆ ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎಂದು ಸಿಮ್ರಾನ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ.

ರಿಯಾಲಿಟಿ ಶೋಗೆ ಬರುವ ಮುನ್ನ ಸಿಮ್ರಾನ್ ಮತ್ತು ಸಚಿನ್ ಶರ್ಮಾ ಒಂದೇ ಡ್ಯಾನ್ಸ್ ಕ್ಲಾಸ್‌ನಲ್ಲಿದ್ದರು. ಸಚಿನ್ ಅಲ್ಲಿ ಸಿಮ್ರಾನ್‌ಗೆ ಸೀನಿಯರ್ ಆಗಿದ್ದರು. ಒಮ್ಮೆ ಸಚಿನ್ ತನ್ನನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದರು. ಆ ಭೇಟಿಯ ಸಂದರ್ಭದಲ್ಲಿ ಸಚಿನ್ ಶರ್ಮಾ ತನ್ನನ್ನು ಅತ್ಯಂತ ಅಸಭ್ಯವಾಗಿ ಮತ್ತು ಮುಜುಗರ ತರುವ ರೀತಿಯಲ್ಲಿ ಸ್ಪರ್ಶಿಸಿದ್ದರು ಎಂದು ಸಿಮ್ರಾನ್ ಆರೋಪಿಸಿದ್ದಾರೆ. ಈ
ಮೊದಲ ಭೇಟಿಯ ನಂತರ ಸಚಿನ್ ಶರ್ಮಾ ತನ್ನನ್ನು ಮನೆಗೆ ಬರುವಂತೆ ಕರೆದಿದ್ದರು. ಆದರೆ ಆ ಸಮಯದಲ್ಲಿ ಸಿಮ್ರಾನ್ ಮೇಲೆ ಅವರ ಕೇವಲ 4 ವರ್ಷದ ಪುಟ್ಟ ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಇತ್ತು. ಹೀಗಾಗಿ "ನನ್ನ ತಂಗಿ ಚಿಕ್ಕವಳಿದ್ದಾಳೆ, ನಾನು ಬರಲು ಸಾಧ್ಯವಿಲ್ಲ" ಎಂದು ಸಿಮ್ರಾನ್ ನಿರಾಕರಿಸಿದ್ದರು. ಸಿಮ್ರಾನ್ ಅವರ ಅಸಹಾಯಕತೆಯನ್ನು ಕೇಳಿದರೂ ಬಿಡದ ಸಚಿನ್, "ಪರವಾಗಿಲ್ಲ, ನಿನ್ನ ತಂಗಿಯನ್ನೂ ನಿನ್ನ ಜೊತೆಯಲ್ಲೇ ಕರೆದುಕೊಂಡು ಬಾ" ಎಂದು ಒತ್ತಾಯ ಮಾಡಿದ್ದರು. ಸೀನಿಯರ್ ಎಂಬ ಗೌರವ ಹಾಗೂ ಅವರ ಒತ್ತಾಯಕ್ಕೆ ಮಣಿದ ಸಿಮ್ರಾನ್, ಅನಿವಾರ್ಯವಾಗಿ ಪುಟ್ಟ ತಂಗಿಯನ್ನು ಕರೆದುಕೊಂಡು ಸಚಿನ್ ಮನೆಗೆ ಹೋಗಿದ್ದಾಗಿ ಹೇಳಿಕೊಂಡಿದ್ದಾರೆ.
ಜೀನ್ಸ್ ಒಳಗೆ ಕೈ ಹಾಕಿದ್ದ
ಸಚಿನ್ ಮನೆಗೆ ತಲುಪಿದ ನಂತರ ಅಲ್ಲಿ ಪರಿಸ್ಥಿತಿಯೇ ಬದಲಾಗಿತ್ತು. ಸಚಿನ್ ತನ್ನ ಕ್ರೂರ ಬುದ್ಧಿ ತೋರಿಸಲು ಆರಂಭಿಸಿದ್ದರು. 4 ವರ್ಷದ ಮಗುವಿನ ಮುಂದೆಯೇ ಸಿಮ್ರಾನ್ ಧರಿಸಿದ್ದ ಹರಿದ ಜೀನ್ಸ್ ಒಳಗೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದರು. "ನನ್ನ ಪುಟ್ಟ ತಂಗಿ ಎದುರಲ್ಲೇ ಸಚಿನ್ ನನ್ನ ಜೀನ್ಸ್ ಒಳಗೆ ಕೈ ಹಾಕಿ ವಿಕೃತಿ ಮೆರೆದಿದ್ದ. ಆ ದೃಶ್ಯವನ್ನು ನೆನೆದರೆ ಈಗಲೂ ಮೈ ನಡುಗುತ್ತದೆ" ಎಂದು ಸಿಮ್ರಾನ್ ಪಾಡ್‌ಕಾಸ್ಟ್‌ನಲ್ಲಿ ಕಣ್ಣೀರು ಹಾಕಿದ್ದಾರೆ. ಘಟನೆ ನಡೆದ ತಕ್ಷಣವೇ ಸಿಮ್ರಾನ್ ಅವರು ಸಚಿನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಸಮಯದಲ್ಲಿ ಸಚಿನ್ ತನ್ನ ತಪ್ಪಿಗೆ ಕ್ಷಮೆ ಕೇಳಿದ್ದರು ಎಂದೂ ಸಿಮ್ರಾನ್ ಪಾಡ್‌ಕಾಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ.
ವೈರಲ್ ಆದ ಕ್ಲಿಪ್: ನೆಟ್ಟಿಗರ ಆಕ್ರೋಶ
ಪಾಡ್‌ಕಾಸ್ಟ್‌ನ ಈ ನಿರ್ದಿಷ್ಟ ವಿಡಿಯೋ ತುಣುಕುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ವಿಡಿಯೋ ನೋಡಿದ ನೆಟ್ಟಿಗರು ಸಚಿನ್ ಶರ್ಮಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಇಷ್ಟು ದಿನಗಳ ನಂತರವಾದರೂ ಧ್ವನಿ ಎತ್ತಿದ್ದಕ್ಕೆ ಸಿಮ್ರಾನ್‌ಗೆ ಹ್ಯಾಟ್ಸಾಫ್. ಇಂತಹ ವಿಷಯಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ದೊಡ್ಡ ಧೈರ್ಯ ಬೇಕು" ಎಂದು ಅಭಿಮಾನಿಯೊಬ್ಬರು ಬೆಂಬಲ ಸೂಚಿಸಿದ್ದಾರೆ. ಆದರೆ, ಇನ್ನೊಂದು ವರ್ಗದ ನೆಟ್ಟಿಗರು "ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ಸಚಿನ್ ಶರ್ಮಾ ಅವರ ಆಂಗಲ್ ಏನೆಂಬುದನ್ನು ಕೇಳಬೇಕು, ನಾಣ್ಯಕ್ಕೆ ಎರಡು ಮುಖಗಳಿರುತ್ತವೆ" ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ಆರೋಪಗಳ ಕುರಿತು ಸಚಿನ್ ಶರ್ಮಾ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಟ್ವಿಸ್ಟ್‌ಗಳೊಂದಿಗೆ ಗಮನ ಸೆಳೆದಿದ್ದ ಸ್ಪ್ಲಿಟ್ಸ್‌ವಿಲ್ಲಾ X6
ಈ ಬಾರಿಯ ಸೀಸನ್ ಹಲವು ರೋಚಕ ಟ್ವಿಸ್ಟ್‌ಗಳು ಮತ್ತು ದೊಡ್ಡ ಸ್ಪರ್ಧಿಗಳ ಗುಂಪಿನಿಂದಲೇ ಗಮನ ಸೆಳೆದಿತ್ತು. ಆಕಾಂಕ್ಷಾ ಚೌಧರಿ, ಅಂಜಲಿ ಸ್ಮಕ್, ಅನೀಶಾ ಶಿಂದೆ, ದೀಕ್ಷಾ ಪವಾರ್, ಸೌಂದರ್ಯ ಶೆಟ್ಟಿ, ಯೋಗೇಶ್ ರಾವತ್, ಸೌರಭ್ ಬೇಡಿ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಸ್ಪರ್ಧಿಗಳು ಈ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಶೋ ಮುಗಿದ ನಂತರವೂ ಸ್ಪರ್ಧಿಗಳ ವೈಯಕ್ತಿಕ ಜೀವನದ ಇಂತಹ ವಿವಾದಗಳು ಸಿನಿರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿವೆ.












Click it and Unblock the Notifications