Sikandar: ರಶ್ಮಿಕಾ, ಅವರಪ್ಪನಿಗೂ ಇಲ್ಲದ ತೊಂದರೆ ನಿಮಗೇಕೆ? ಸಲ್ಮಾನ್ ಖಾನ್ ಹೇಳಿಕೆ ವೈರಲ್!
Actress Rashmika Mandanna: ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣ ಹಾಗೂ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಇಬ್ಬರು ಒಟ್ಟಿಗೆ ಹಿಂದಿಯ 'ಸಿಕಂದರ್' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. 'ಈದ್' ಹಬ್ಬಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ನೆನ್ನೆ ಭಾನುವಾರ ಟ್ರೈಲರ್ ಬಿಡುಗಡೆಯಾಗಿದೆ. ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆದಿದೆ. ಈ ವೇಳೆ ನಟ ಸಲ್ಮಾನ್ ಖಾನ್ ಅವರು, ''ರಶ್ಮಿಕಾ ಮಂದಣ್ಣ ಅವರಿಗೆ ಮದುವೆಯಾದರೆ, ಮುಂದೆ ಮಗಳು ಹುಟ್ಟಿ, ಅವಳು ದೊಡ್ಡವಳಾದರೂ ಅವರೊಂದಿಗೆ ನಟಿಸುತ್ತೇನೆ'' ಎಂದು ಪಂಚ್ ಲೈನ್ ಹೊಡೆದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಭಾನುವಾರ ಟ್ರೈಲರ್ ಲಾಂಚ್ ಮಾಡಿದ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಸಿನಿಮಾ ಕುರಿತು ಎಲ್ಲರು ಮಾತನಾಡಿದರು. ಆಗ 'ಸಿಕಂದರ್' ನಟಿ ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಖಾನ್ ಮಧ್ಯೆ ಬರೋಬ್ಬರಿ 31 ವರ್ಷ ವಯಸ್ಸಿನ ಅಂತರ ಇದೆ ಎಂದು ಟ್ರೋಲ್ ಆಗಿದ್ದು ಪ್ರಸ್ತಾಪವಾಯಿತು.
ಇದಕ್ಕೆ ಪ್ರತಿಕ್ರೆಯಿಸಿದ ನಟ ಸಲ್ಮಾನ್ ಖಾನ್ 'ನನಗೂ ರಶ್ಮಿಕಾಗೂ 31 ವರ್ಷ ವ್ಯತ್ಯಾಸ ಇದೆ ಎಂದು ಹೇಳುತ್ತಿದ್ದಾರೆ. ಇದರಿಂದ ನಟಿ ರಶ್ಮಿಕಾಗೆ ಆಗಲಿ, ಅವರ ತಂದೆಗೆ ಆಗಲಿ ಸಮಸ್ಯೆಯಾಗಿಲ್ಲ. ನಿಮಗೆ ಏಕೆ ಸಮಸ್ಯೆ' ಎಂದು ಪಂಚ್ ಲೈನ್ ಹೇಳುವ ಮೂಲಕ ವೇದಿಕೆ ಮೇಲಿದ್ದ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.
ಮುಂದುವರಿದು 'ಮುಂದೆ ರಶ್ಮಿಕಾ ಮಂದಣ್ಣ ಅವರಿಗೆ ಮದುವೆ ಆದರೂ ನಾನು ಅವರೊಂದಿಗೆ ನಟಿಸುತ್ತೇನೆ. ರಶ್ಮಿಕಾಗೆ ಮಗಳಾದರೂ ಅವರು ಬೆಳೆದು ದೊಡ್ಡವರಾದ ಮೇಲೆ ಅನುಮತಿ ಪಡೆದು ಅವರೊಂದಿಗೂ ನಟಿಸುತ್ತೇನೆ' ಎಂದು ಸಲ್ಮಾನ್ ಹೇಳಿದ್ದಾರೆ. ನಟ-ನಟಿಯ ಮಧ್ಯದ ವಯಸ್ಸಿನ ಅಂತರದ ಟ್ರೋಲ್ ವಿಷಯಕ್ಕೆ ಪ್ರತಿಕ್ರಿಯಿಸಿ ನೀಡಿದ ಸಲ್ಮಾನ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಒಂದೇ ದಿನ ಎರಡು ಸಿನಿಮಾ ಶೂಟಿಂಗ್: ರಶ್ಮಿಕಾಗೆ ಪ್ರಶಂಸೆ
ಈ ಸಿನಿಮಾಗೆ ನಟಿ ರಶ್ಮಿಕಾರ ಸಮರ್ಪಣೆ ಭಾವವನ್ನು ಸಲ್ಮಾನ್ ಖಾನ್ ಸ್ಮರಿಸಿದ್ದಾರೆ. 'ಪುಷ್ಪಾ 2' ಸಿನಿಮಾ ಜೊತೆಗೆ 'ಸಿಕಂದರ್' ನಲ್ಲೂ ಏಕಕಾಲಕ್ಕೆ ನಟಿಸಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ಪುಷ್ಪಾ-2 ಚಿತ್ರೀಕರಣದಲ್ಲಿ ಪಾಲ್ಗೊಂಡು, ಬಳಿಕ 'ಸಿಕಂದರ್' ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ರಶ್ಮಿಕಾ ಕಾಲು ನೋವಾದರೂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಬಿಡುವಿಲ್ಲದೆ ಅವರು ನಟಿಸಿದ್ದಾರೆ ಎಂದು ಸಲ್ಮಾನ್ ಖಾನ್ ಶ್ಲಾಘಿಸಿದರು.
ತಮಿಳಿನ ಎ.ಆರ್.ಮುರುಗದಾಸ್ ಅವರು 'ಸಿಕಂದರ್' ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸತ್ಯರಾಜ್ ಸಲ್ಮಾನ್ ಖಾನ್ ಮುಂದೆ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಕನ್ನಡದ ನಟ ಕಿಶೋರ್, ಹಿಂದಿಯ ಸುನಿಲ್ ಶೆಟ್ಟಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ತೆರೆಕಂಡಿದ್ದ ಪುಷ್ಪಾ-2 ಸೇರಿದಂತೆ ಬೇರೆ ಬೇರೆ ಸಿನಿಮಾ ರಂಗದಲ್ಲೂ ಕನ್ನಡ ಕಲಾವಿದರು ಮಿಂಚುತ್ತಿದ್ದಾರೆ.
ಭಾನುವಾರ ಸಿನಿಮಾ ರಿಲೀಸ್
'ಸಿಕಂದರ್' ಸಿನಿಮಾ ಇದೇ ಮಾರ್ಚ್ 30 ರಂದು ಭಾನುವಾರ ಈದ್ ಹಬ್ಬಕ್ಕೆ ತೆರೆಗೆ ಬರಲಿದೆ. 2023 ರಲ್ಲಿ ಸಲ್ಮಾನ್ ಖಾನ್ ಅವರ 'ಟೈಗರ್ 3' ಸಹ ಭಾನುವಾರವೇ ಬಿಡುಗಡೆ ಆಗಿತ್ತು. ಈ ಮೂಲಕ ಗುರುವಾರ, ಶುಕ್ರವಾರದ ಸಿನಿಮಾ ಬಿಡುಗಡೆ ಪದ್ಧತಿಯನ್ನು ಸಲ್ಮಾನ್ ಮತ್ತೊಮ್ಮೆ ಮುರಿದಿದ್ದಾರೆ. ವಾರಾಂತ್ಯದ ಹಿನ್ನೆಲೆಯಲ್ಲಿ ಚಿತ್ರತಂಡ ಈದ್‌ಗೆ ಬರಲು ಪ್ಲಾನ್ ಮಾಡಿಕೊಂಡಿದೆ.












Click it and Unblock the Notifications