ಅಬ್ಬಾ ಎಂಥಾ ನಟ ಅನಿಸುತ್ತೆ: ಡಾಲಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಶಿವಣ್ಣ ಹೇಳಿದ್ದೇನು?
ಇಂದು ನಟ ಡಾಲಿ ಧನಂಜಯ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾಗಿರುವ ಡಾಲಿ ತಮ್ಮ ಪತ್ನಿ ಜೊತೆಗೆ ತಮ್ಮ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಬಹುಮುಖ ಪ್ರತಿಭೆಯಾಗಿರುವ ಡಾಲಿ ತೆಲುಗು ಚಿತ್ರರಂಗದಲ್ಲೂ ಹವಾ ಇಟ್ಟಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಧನಂಜಯ್ ಅವರಿಗೆ ಶುಭಾಶಯಗಳ ಸುರಿಮಳೆ ಹರಿದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಕೂಡ ಡಾಲಿ ಬರ್ತ್‌ಡೇಗೆ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ಡಾಲಿಯ ವಿಶೇಷ ಟ್ಯಾಲೆಂಟ್ ಬಗ್ಗೆ ಶಿವಣ್ಣ ಕೊಂಡಾಡಿದ್ದಾರೆ.
ಶಿವರಾಜ್‌ಕುಮಾರ್ ನಟನೆಯ ಟಗರು ಸಿನಿಮಾದಿಂದಲೇ ನಟ ಧನಂಜಯ್‌ಗೆ ಡಾಲಿ ಎಂಬ ಹೆಸರು ಬಂದಿತ್ತು. ಆ ಸಿನಿಮಾದಲ್ಲಿ ಡಾಲಿ ಎಂಬ ಪಾತ್ರದಲ್ಲಿ ಧನು ಅಭಿನಯಿಸಿದ್ದರು. ವಿಲನ್ ರೋಲ್ ಆದರೂ ಶಿವಣ್ಣನಿಗೆ ಸರಿಸಮನಾಗಿ ಆ ಪಾತ್ರ ಮೆಚ್ಚುಗೆ ಪಡೆದುಕೊಂಡಿತ್ತು. ಅಂದಿನಿಂದಲೂ ಶಿವಣ್ಣ ಹಾಗೂ ಡಾಲಿ ನಡುವೆ ಒಳ್ಳೆಯ ಬಾಂಡಿಂಗ್ ಕೂಡ ಇದೆ. ಈ ಹಿನ್ನೆಲೆ ಇಂದು ಧನು ಹುಟ್ಟುಹಬ್ಬಕ್ಕೆ ಶಿವಣ್ಣ ವಿಶೇಷವಾಗಿ ಶುಭಕೋರಿದ್ದಾರೆ.

ಜನರ ಪ್ರೀತಿ ಸದಾ ನಿಮ್ಮೊಂದಿಗೆ ಇರಲಿ
ಹುಟ್ಟುಹಬ್ಬದ ಶುಭಾಶಯಗಳು ಡಾಲಿ ಧನಂಜಯ್. ತೆರೆ ಮೇಲೆ ಹಾಗೂ ಜೊತೆಗೆ ಕೆಲಸ ಮಾಡಿದಾಗ "ಅಬ್ಬಾ ಎಂಥಾ ನಟ" ಅನ್ನಿಸೋ ನಟರಲ್ಲಿ ನೀವು ಕೂಡ ಒಬ್ಬರು. ಜನರ ಪ್ರೀತಿ ಸದಾ ನಿಮ್ಮ ಜೊತೆಗೆ ಇರಲಿ ಎಂದು ಶಿವಣ್ಣ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮೊದಲಿಗೆ ಟಗರು ಸಿನಿಮಾ ಮೂಲಕ ಧನಂಜಯ್-ಶಿವಣ್ಣ ಒಂದಾಗಿದ್ದರು. ಡಾಲಿ ನೆಗೆಟಿವ್ ಪಾತ್ರಗಳ ಮೂಲಕ ತಮ್ಮದೇ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಮತ್ತೊಂದು ಹೊಸ ಸಿನಿಮಾದಲ್ಲಿಯೂ ಇಬ್ಬರೂ ಜೊತೆಯಾಗಿದ್ದಾರೆ.
ಈಗಾಗಲೇ "ಟಗರು" ಹಾಗೂ "ಬೈರಾಗಿ" ಸಿನಿಮಾಗಳಲ್ಲಿ ಶಿವಣ್ಣ ಹಾಗೂ ಡಾಲಿ ಒಟ್ಟಿಗೆ ನಟಿಸಿದ್ದಾರೆ. ಇದರಲ್ಲಿ ಡಾಲಿ ನೆಗೆಟಿವ್ ಪಾತ್ರದಲ್ಲೇ ಇದ್ದರು. ಇದೀಗ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದಲ್ಲಿ ಇಬ್ಬರೂ ಮತ್ತೆ ತೆರೆ ಹಂಚಿಕೊಳ್ಳಲಿದ್ದು, ಇವರ ಪಾತ್ರಗಳು ಹೇಗಿರುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅನೇಕರು ಡಾಲಿ ಮತ್ತೆ ಶಿವಣ್ಣನ ಎದುರು ವಿಲನ್ ರೋಲ್ ಮಾಡಿದ್ರೆ ಇಬ್ಬರ ಕಾಂಬಿನೇಷನ್ ನೋಡಲು ಮಜಾ ಇರುತ್ತೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಶಿವಣ್ಣ ಇತ್ತೀಚೆಗೆ ಕ್ಯಾನ್ಸರ್ ಆಪರೇಷನ್‌ಗೆ ಒಳಗಾಗಿದ್ದರು. ಆಗ ಡಾಲಿ ಅವರ ಮನೆಗೆ ಖುದ್ದಾಗಿ ತೆರಳಿ ಆರೋಗ್ಯ ವಿಚಾರಿಸಿ ಭಾವುಕರಾಗಿದ್ದರು. ನಂತರ ಶಿವಣ್ಣ ಯಶಸ್ವಿಯಾಗಿ ಆಪರೇಷನ್ ಮುಗಿಸಿ ವಾಪಸ್ ಆಗಿದ್ದರು. ಮೈಸೂರಿನಲ್ಲಿ ನಡೆದ ಡಾಲಿ ವಿವಾಹಕ್ಕೆ ಆಗಮಿಸಿ, ನವದಂಪತಿಗೆ ಶುಭಕೋರಿದ್ದರು. ಮದುವೆಗೆ ಶಿವಣ್ಣ ಆಗಮಿಸಿದ್ದಕ್ಕೆ ಧನಂಜಯ್ ಹಾಗೂ ಧನ್ಯತಾ ಹರ್ಷ ವ್ಯಕ್ತಪಡಿಸಿದ್ದರು. ಶಿವಣ್ಣನಿಗೆ ನಾವು ಹೇಗೆ ಥ್ಯಾಂಕ್ಸ್ ಹೇಳಬೇಕು ಅಂತಾ ಗೊತ್ತಿಲ್ಲ. ಅವರ ಪ್ರೀತಿ ತುಂಬಾ ದೊಡ್ಡದು. ಅಷ್ಟೆಲ್ಲ ಒತ್ತಡದ ನಡುವೆಯೂ ಶಿವಣ್ಣ ಅಷ್ಟು ಎನರ್ಜಿಟಿಕ್ ಆಗಿ ನಮ್ಮ ಮದುವೆ ಬಂದು, ನಮಗೆ ಎನರ್ಜಿ ಕೊಟ್ಟು ಹೋದರು ಎಂದು ಸಂತಸ ಹಂಚಿಕೊಂಡಿದ್ದರು.












Click it and Unblock the Notifications