ದ್ವಾರಕೀಶ್ ನಮ್ಮೂರಿನವ್ರು; ತುಂಬಾ ಕಷ್ಟ ಜೀವ: ಹಳೇ ನೆನಪುಗಳನ್ನ ಮೆಲುಕು ಹಾಕಿದ ಸಿದ್ದರಾಮಯ್ಯ
ಬೆಂಗಳೂರು : ಏಪ್ರಿಲ್ 17 : ದ್ವಾರಕೀಶ್ ಅವರು ನಮ್ಮೂರಿನವ್ರು. ಒಮ್ಮೆ ದ್ವಾರಕೀಶ್ ಅವರೊಂದಿಗೆ ಹೆಲಿಕಾಪ್ಟರ್ ನಲ್ಲಿ ಮೈಸೂರಿಗೆ ಹೋಗಿದ್ವಿ ಎಂದು ಪ್ರಚಂಡ ಹಾಸ್ಯನಟ ದ್ವಾರಕೀಶ್ ಅವರೊಂದಿಗಿದ್ದ ತಮ್ಮ ಒಡನಾಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಲುಕು ಹಾಕಿದರು.
ದ್ವಾರಕೀಶ್ ರವರ ಪ್ರಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಬ್ಬ ನಟನಾಗಿ, ನಿರ್ಮಾಪಕ ಮತ್ತು ನಿರ್ದೇಶಕನಾಗಿ ಅವರು ಕನ್ನಡ ಚಿತ್ರರಂಗಕ್ಕೆ ಬಹು ದೊಡ್ಡ ಕಾಣಿಕೆ ಸಲ್ಲಿಸಿದ್ದಾರೆ. ದ್ವಾರಕೀಶ್ ಅವರು ಡಾ ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ ಚಿತ್ರಗಳನ್ನು ನೋಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಸಿನಿಮಾಗಳನ್ನು ಮಾಡುವಾಗ ಅವರು ಹಲವಾರು ಏಳುಬೀಳುಗಳನ್ನು ಕಂಡಿದ್ದು ನಿಜ, ಸೋತಾಗ ಎದೆಗುಂದದೆ ಮುಂದೆ ಸಾಗಿದ ಅವರ ಆತ್ಮಸ್ಥೈರ್ಯ ಅಭಿನಂದನೀಯ. ಕನ್ನಡ ಚಿತ್ರರಂಗದಕ್ಕೆ ನಟ, ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ದ್ವಾರಕೀಶ್ ಅಪಾರ ಕೊಡುಗೆ ಹಾಗೂ ಸೇವೆಯನ್ನು ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಹಾಸ್ಯನಟರಾಗಿ ಯಲ್ಲದೆ ನಾಯಕ ನಟರಾಗಿಯೂ ಉತ್ತಮ ಅಭಿನಯ ನೀಡಿದವರು ಎಂದರು.
ಡಾ: ರಾಜ್ ಕುಮಾರ್ ಮತ್ತು ಅವರ ಜೋಡಿ ಬಹಳ ಚೆನ್ನಾಗಿತ್ತು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಚಿತ್ರಗಳಲ್ಲಿ ಯೂ ಅಭಿನಯಿಸಿದ್ದರು. ಜೀವನದಲ್ಲಿ ಬಹಳಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಆದರೂ ಕನ್ನಡ ಚಿತ್ರ ನಿರ್ಮಾಣ, ನಟನೆಯನ್ನು ಬಿಟ್ಟಿರಲಿಲ್ಲ. ಕಷ್ಟಗಳನ್ನು ಸಹಿಸಿ ಕನ್ನಡ ಚಿತ್ರರಂಗ ಬೆಳೆಯಲು ಕೊಡುಗೆ ನೀಡಿದ್ದಾರೆ. ಮೈಸೂರಿನ ಹುಣಸೂರಿನಲ್ಲಿ ಹುಟ್ಟಿದವರು. ತವರಿನ ಬಗ್ಗೆ ಬಹಳ ಪ್ರೇಮವಿತ್ತು. ಒಮ್ಮೆ ಮೈಸೂರಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ರಾಜಕೀಯ, ಸಿನಿಮಾ, ಸಾಮಾಜಿಕ ವಿಚಾರಗಳನ್ನು ಚರ್ಚೆ ಮಾಡಿದ್ದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮರಿಸಿದರು.
ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದು ಸಂತಾಪ ವ್ಯಕ್ತಡಿಸಿದರು. ದ್ವಾರಕೀಶ್ ಅವರ ಎರಡು ಕಣ್ಣುಗಳನ್ನು ದಾನಮಾಡಿರುವುದು ಶ್ಲಾಘನೀಯ. ಸತ್ತ ನಂತರವೂ ಸಮಾಜಮುಖಿ ಕೆಲಸ ಮಾಡಿದ್ದಾರೆ. ಅಂಥ ವ್ಯಕ್ತಿಯನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದರು. ಕೆಲ ವರ್ಷಗಳ ಹಿಂದೆ ಅವರ ಧರ್ಮಪತ್ನಿಯವರು ಮೃತಪಟ್ಟ ದಿನವೇ ದ್ವಾರಕೀಶ್ ಅವರೂ ಮೃತಪಟ್ಟಿದ್ದು, ಅವರಿಬ್ಬರ ಆತ್ಮಕ್ಕೆ ಶಾಂತಿ ದೊರಕಲಿ ಎಂದರು.












Click it and Unblock the Notifications