ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಇದು 2026ರ ಅದ್ಭುತ ಆರಂಭ ಎಂದು ಬರೆದುಕೊಂಡ ನಟ ಕಿಚ್ಚ ಸುದೀಪ್ ಮಗಳು ಸಾನ್ವಿ
Sanvi Sudeep: ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಸಿನಿಮಾ ಡಿಸೆಂಬರ್ 25, 2025ರಂದು ಅದ್ಧೂರಿಯಾಗಿ ತೆರೆ ಕಂಡಿದೆ. ಇದೀಗ ಯಶಸ್ಸಿನ ಹಾದಿಯಲ್ಲಿ ಹೊರಟಿದ್ದು, 'ಮಸ್ತ್ ಮಲೈಕಾ' ಹಾಡು ವೀಕ್ಷಣೆಯಲ್ಲಿ ದಾಖಲೆ ಬರೆದಿದೆ. ಇದರ ಬೆನ್ನಲ್ಲೇ ಇದೀಗ ಸಾನ್ವಿ ಸುದೀಪ್ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಇದು 2026ರ ಅದ್ಭುತ ಆರಂಭ ಎಂದು ಬರೆದುಕೊಂಡು ಗಮನ ಸೆಳೆದಿದ್ಧಾರೆ.
ಕಳೆದ ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ ಅವರು ತಮ್ಮ 'ಮಾರ್ಕ್' ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಹೇಳಿದ ಮಾತು ಹಲವು ತಿರುವು ಪಡೆದುಕೊಂಡಿತ್ತು. 'ಯುದ್ಧಕ್ಕೆ ಸಿದ್ಧ, ಮಾತಿಗೆ ಬದ್ಧ' ಎಂಬ ಹೇಳಿಕೆ ನೀಡಿದ್ದು, ಇದು ಫ್ಯಾನ್ಸ್ ವಾರ್‌ಗೆ ಕಾರಣವಾಗಿತ್ತು. ಬಳಿಕ ಈ ಬಗ್ಗೆ ಸ್ಪಷನೆ ನೀಡಿ ಗೊಂದಲಕ್ಕೆ ತೆರೆ ಎಳೆಯುವ ಕೆಲಸವನ್ನು ನಟ ಸುದೀಪ್ ಅವರು ಮಾಡಿದ್ದರು.

ಪೈರಸಿ ವಿರುದ್ಧ ಯುದ್ಧಕ್ಕೆ ಸಿದ್ಧ ಎಂದು ಹೇಳಿದ್ದು, ಬೇರೆ ಯಾವ ಉದ್ದೇಶದಿಂದ ಅಲ್ಲ ಎಂದು ಹೇಳಿದ್ದರು. ಅಷ್ಟಕ್ಕೂ ಸುಮ್ಮನಾಗದ ದರ್ಶನ್-ಸುದೀಪ್ ಫ್ಯಾನ್ಸ್ ಸಾಮಾಜಿಕ ಜಾಲತಣದಲ್ಲಿ ವಾರ್ ಶರು ಮಾಡಿದ್ದರು. ಬಳಿಕ ಕಿಚ್ಚ ಸುದೀಪ್ ಅವರು ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ದರ್ಶನ್ ಜೊತೆಗಿನ ಫೋಟೋವನ್ನು ರೀ ಪೋಸ್ಟ್ ಮಾಡಿಕೊಂಡು ನಮ್ಮ ನಡುವೆ ಯಾವ ಮನಸ್ತಾಪಗಳು ಇಲ್ಲ ಎಂದು ಹೇಳಿದ್ದರು. ಆಗ ಫ್ಯಾನ್ಸ್ ವಾರ್ ಒಂದು ಹಂತಕ್ಕೆ ತಣ್ಣಗಾಯಿತು.
ಮತ್ತೊಂದೆಡೆ, ಕೆಲ ಕಿಡಿಗೇಡಿಗಳು ನಟ ಸುದೀಪ್ ಗುರಿಯಾಗಿಸಿಕೊಂಡು ಟೀಕೆಗಳನ್ನು ಮಾಡುವುದಲ್ಲದೆ, ಅವರ ಮಗಳು ಸಾನ್ವಿ ಸುದೀಪ್ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿ ಟ್ರೋಲ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಾನ್ವಿ ಸುದೀಪ್ "ನನ್ನ ದೇಹ ಇನ್ಯಾರದ್ದೋ ಚರ್ಚೆಯ ವಿಷಯವಲ್ಲ, ನನಗೆ ನಿಮ್ಮ ಅಭಿಪ್ರಾಯ ಬೇಕಿದ್ದರೆ ಖಂಡಿತ ಕೇಳುತ್ತೇನೆ," ಎಂದು ಖಡಕ್ ಆಗಿ ಹೇಳಿದ್ದರು.
ದಾಖಲೆ ಬರೆದ 'ಮಸ್ತ್ ಮಲೈಕಾ': ಇದೀಗ ತಾವು ಮಾರ್ಕ್ ಸಿನಿಮಾದಲ್ಲಿ ಹಾಡಿರುವ 'ಮಸ್ಟ್ ಮಲೈಕಾ' ವೀಕ್ಷಣೆಯಲ್ಲಿ ದಾಖಲೆ ಬರೆದಿದ್ದು, ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ಟ್ರೋಲಿಗರಿಗೆ ಮತ್ತೆ ಖಡಕ್ ಉತ್ತರ ಕೊಟ್ಟಿದ್ದಾರೆ. ಇದು ಇದೀಗ ಸಖತ್ ಸದ್ದು ಮಾಡುತ್ತಿದೆ.
ಮಾರ್ಕ್ ಸಿನಿಮಾದಲ್ಲಿ ಸಾನ್ವಿ ಸುದೀಪ್ ಅವರು ಹಾಡಿರುವ 'ಮಸ್ತ್ ಮಲೈಕಾ' ಹಾಡು ಯೂಟ್ಯೂಬ್‌ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಹಾಡು ಕರ್ನಾಟಕದಲ್ಲಿ ಮಾತ್ರವಲ್ಲದೇ, ದೇಶದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ಯೂಟ್ಯೂಬ್‌ನಲ್ಲಿ 10 ಮಿಲಿಯನ್ ವೀಕ್ಷಣೆ ಪಡೆದಿದೆ. ಈ ಹಾಡಿಗೆ ಹೆಜ್ಜೆ ಹಾಕಿರುವ ನಿಶ್ಚಿಕಾ ಕೂಡ ಧನ್ಯವಾದ ಹೇಳಿದ್ದು, ಹಾಡು ಹಾಡಿರುವ ಸಾನ್ವಿ ಸುದೀಪ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಫೋಟೋ ಶೇರ್ ಮಾಡಿ ಸಂಭ್ರಮ: ಸಾನ್ವಿ ಸುದೀಪ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಯೂಟ್ಯೂಬ್ ವ್ಯೂವ್ಸ್ ಫೋಟೊ ಶೇರ್ ಮಾಡಿ "2026ರ ಅದ್ಭುತ ಆರಂಭ," ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಸ್ಟೋರಿಯಲ್ಲಿ 10 ಮಿಲಿಯನ್ ವೀಕ್ಷಣೆ ಸಂಭ್ರಮಕ್ಕೆ ಸರ್ಪ್ರೈಸ್ ಕೇಕ್ ಫೋಟೊವನ್ನು ಶೇರ್ ಮಾಡಿ ಸಂಭ್ರಮಿಸಿದ್ದಾರೆ.
ಸಾನ್ವಿ ಹಾಡಿಗೆ ಭಾರೀ ಮೆಚ್ಚುಗೆ: ಸಾನ್ವಿ ಸುದೀಪ್ ಈ ಹಿಂದೆ ತೆಲುಗಿನಲ್ಲಿ ಎರಡು ಹಾಡು ಹಾಡಿದ್ದರು. ಹಿಟ್ 3ಯ ಥೀಮ್ ಸಾಂಗ್ ಹಾಗೂ ಪೊರಟಮೆ 3.0 ಸಿನಿಮಾದ ಹಾಡು ಹಾಡಿದ್ದರು. ಆದರೆ, ಇದೀಗ "ಮಸ್ತ್ ಮಲೈಕಾ" ಮೂಲಕ ಸ್ಯಾಂಡಲ್‌ವುಡ್‌ಗೆ ಸಾನ್ವಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು, ಹಾಡಿದ ಮೊದಲ ಹಾಡೇ ಸೂಪರ್ ಹಿಟ್ ಆಗಿದೆ. ಈ ಹಾಡಿಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.
ಸಾನ್ವಿ ಈ ಹಿಂದೆ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ನಾನು ಸಾನ್ವಿ ಸುದೀಪ್. ಮೊನ್ನೆ ನನ್ನ ಮೊದಲ ಕನ್ನಡ ಸಾಂಗ್ "ಮಸ್ತ್ ಮಲೈಕಾ" ಬಿಡುಗಡೆಯಾಗಿದೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ, ಧನ್ಯವಾದಗಳು. ಹೀಗೆ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಹೇಳಿದ್ದರು.












Click it and Unblock the Notifications