Harshika Poonacha: ಗುಡ್‌ನ್ಯೂಸ್ ಕೊಟ್ಟ ಕೊಡಗಿನ ಬೆಡಗಿ ನಟಿ ಹರ್ಷಿಕಾ ಪೂಣಚ್ಚ
ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿ ಎನಿಸಿಕೊಂಡಿರುವ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗಿ ವರ್ಷದೊಳಗೆ ಗುಡ್ ನ್ಯೂಸ್ ನೀಡಿರುವ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ವಿಭಿನ್ನವಾಗಿ ಈ ಖುಷಿಯ ವಿಚಾರವನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಡಗಿನ ಬೆಡಗಿ ನಟಿ ಹರ್ಷಿಕಾ ಪೂಣಚ್ಚ ಈ ಸಂಭ್ರಮವನ್ನು ವಿಭಿನ್ನವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಜೋಡಿ ಆಗಸ್ಟ್ 24, 2023ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮದುವೆಯಾಗಿ ವರ್ಷದೊಳಗೆ ಗುಡ್ ನ್ಯೂಸ್ ನೀಡಿದ್ದಾರೆ.

ಹರ್ಷಿಕಾ ಮತ್ತು ಭುವನ್ ಪೊನ್ನಣ್ಣ ಅನೇಕ ವರ್ಷಗಳ ಸ್ನೇಹಿತರಾಗಿದ್ದರು. ಈ ಸ್ನೇಹ ಪ್ರೀತಿಗೆ ತಿರುಗಿ ಕಳೆದ ವರ್ಷ ಹಸೆಮಣೆ ಏರಿದರು. ವಿರಾಜಪೇಟೆಯ ಅಮ್ಮತ್ತಿಯಲ್ಲಿ ಹರ್ಷಿಕಾ ಮತ್ತು ಭುವನ್ ಕೊಡವ ಶೈಲಿಯಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರ ಮದುವೆಗೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಕೂಡ ಸಾಕ್ಷಿಯಾಗಿದ್ದರು.
ಇದೀಗ ನಟ ಭುವನ್ ಹಾಗೂ ಹರ್ಷಿಕಾ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದು, ಸದ್ಯ ಹರ್ಷಿಕಾ ಐದು ತಿಂಗಳ ಗರ್ಭಿಣಿ ಆಗಿದ್ದಾರೆ. ಈ ಖುಷಿಯ ವಿಚಾರವನ್ನು ವಿಭಿನ್ನ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮೆಟರ್ನಿಟಿ ಶೂಟ್ ಅಂದ ತಕ್ಷಣ ಎಲ್ಲರೂ ಹೊಸ ಹೊಸ ಕಾನ್ಸೆಪ್ಟ್‌ನಲ್ಲಿ ಶೂಟ್ ಮಾಡಲು ಇಷ್ಟಪಡುತ್ತಾರೆ. ಆದರೆ ಹರ್ಷಿಕಾ ಮತ್ತು ಭುವನ್ ಮಾತ್ರ ತಮ್ಮ ಕೊಡವ ಶೈಲಿ ಹಾಗೂ ಸಂಪ್ರದಾಯವನ್ನು ಬಿಟ್ಟು ಕೊಡಬಾರದು ಎನ್ನುವ ಕಾರಣಕ್ಕೆ ಅವರ ಸಾಂಪ್ರದಾಯಿಕ ಉಡುಗೆ ತೊಟ್ಟು ಕುಟುಂಬಸ್ಥರ ಜೊತೆ ಕೊಡಗಿನ ಶೈಲಿಯಲ್ಲಿ ವಿಡಿಯೋ ಹಾಗೂ ಫೋಟೋ ಶೂಟ್ ಮಾಡಿಸಿದ್ದಾರೆ.
ತಮ್ಮ ಚೊಚ್ಚಲ ಮಗುವಿನ ಆಗಮನದ ವಿಚಾರ ತಿಳಿಸಲು ಪುರಾತನ ಕೊಡವ ಸಾಂಪ್ರದಾಯ, ಉಡುಪು, ಕೊಡಗಿನ 'ಐನ್ ಮನೆ' (ದೊಡ್ಡಮನೆ), ಕೋವಿ, ಉಪಕರಣಗಳು, ಜೀವನಶೈಲಿ ಎಲ್ಲವನ್ನು ಬಿಂಬಿಸುವ ಶೈಲಿಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಜೋಡಿ ಫೋಟೋ ಶೂಟ್ ಮಾಡಿಸಿದ್ದಾರೆ. ಅಂದ ಹಾಗೆ ಅಕ್ಟೋಬರ್‌ನಲ್ಲಿ ಈ ಸ್ಟಾರ್ ಜೋಡಿಯ ಮನೆಗೆ ಹೊಸ ಸದಸ್ಯನ ಆಗಮನವಾಗಲಿದೆ.
ಇನ್ನು ಈ ಬಗ್ಗೆ ಹರ್ಷಿಕಾ ಪೂಣಚ್ಚ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 'ಗೆಳೆಯರೇ, ಇಂದಿನವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ, ಇನ್ನು ಮುಂದೆ ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವದ ಮೇಲೂ ಇರಲಿ. ಅಕ್ಟೋಬರ್‌ಗೆ ಕಾತುರದಿಂದ ಕಾಯುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ. ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.












Click it and Unblock the Notifications