Sai Pallavi vs Rukmini Vasanth: ಸಾಯಿ ಪಲ್ಲವಿ ಮಾಡಬೇಕಿದ್ದ ಪಾತ್ರ ಕನ್ನಡತಿ ರುಕ್ಮಿಣಿ ವಸಂತ್ ಪಾಲಾಯಿತೇ? ಏನಿದು ಹೊಸ ಚರ್ಚೆ
ಭಾರತೀಯ ಶಾಸ್ತ್ರೀಯ ಸಂಗೀತದ ದಂತಕಥೆ, ಭಾರತರತ್ನ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಸಿನಿಮಾದ ಸಿದ್ಧತೆಗಳು ನಡೆಯುತ್ತಿದ್ದು, ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಕುರಿತು ಈಗ ಭಾರಿ ಚರ್ಚೆ ಗರಿಗೆದರಿದೆ. ಸದ್ಯ ದಕ್ಷಿಣ ಭಾರತದ ಇಬ್ಬರು ಪ್ರತಿಭಾವಂತ ನಟಿಯರಾದ ಸಾಯಿ ಪಲ್ಲವಿ ಮತ್ತು ಕನ್ನಡದ ರುಕ್ಮಿಣಿ ವಸಂತ್ ಅವರ ಹೆಸರುಗಳು ಈ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ.
ಈ ಚಿತ್ರವು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಗುವ ನಿರೀಕ್ಷೆಯಿದೆ. ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಭವ್ಯ ಜೀವನ ಮತ್ತು ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಈ ಸಿನಿಮಾ ಒಳಗೊಳ್ಳಲಿದೆ. ಕೇವಲ ನಟನೆಯಷ್ಟೇ ಅಲ್ಲದೆ, ಸುಬ್ಬುಲಕ್ಷ್ಮಿ ಅವರ ವ್ಯಕ್ತಿತ್ವ ಮತ್ತು ಅವರ ಗಾಯನದ ಗಾಂಭೀರ್ಯವನ್ನು ತೆರೆಯ ಮೇಲೆ ತರಬಲ್ಲ ನಟಿಯ ಆಯ್ಕೆಯಲ್ಲಿ ಚಿತ್ರತಂಡ ಭಾರಿ ಕಸರತ್ತು ನಡೆಸುತ್ತಿದೆ.

ಸಾಯಿ ಪಲ್ಲವಿ-ರುಕ್ಕು ನಡುವೆ ಪೈಪೋಟಿ
ತಮ್ಮ ಸಹಜ ನಟನೆ ಮತ್ತು ಸಾಂಪ್ರದಾಯಿಕ ಲುಕ್‌ಗೆ ಹೆಸರಾಗಿರುವ ಸಾಯಿ ಪಲ್ಲವಿ ಅವರು ಈ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ ಎಂಬುದು ಅನೇಕ ಅಭಿಮಾನಿಗಳ ಅಭಿಪ್ರಾಯ. ಮತ್ತೊಂದೆಡೆ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮೂಲಕ ಕ್ರಶ್ ಆಗಿ ಮಿಂಚಿರುವ ರುಕ್ಮಿಣಿ ವಸಂತ್ ಅವರು ಶಾಸ್ತ್ರೀಯ ನೃತ್ಯಗಾರ್ತಿಯೂ ಆಗಿರುವುದರಿಂದ, ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೆ ಅವರು ಹೊಸ ಕಳೆ ತರಬಲ್ಲರು ಎಂದು ಹೇಳಲಾಗುತ್ತಿದೆ. ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಈ ಇಬ್ಬರಲ್ಲಿ ಯಾರು ಅಂತಿಮವಾಗಿ ಆಯ್ಕೆಯಾಗುತ್ತಾರೆ ಎಂಬುದು ಸದ್ಯದ ಕುತೂಹಲ.
ಸಿನಿಮಾ ವಿಳಂಬಕ್ಕೆ ಕಾರಣವೇನು?
ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ನಿಂದ ಸಾಯಿ ಪಲ್ಲವಿ ಹೊರಹೋಗಿದ್ದಾರೆ ಮತ್ತು ಅವರ ಜಾಗಕ್ಕೆ ಬೇರೆ ನಟಿಯ ಆಯ್ಕೆಯಾಗಿದೆ ಎಂಬ ವದಂತಿಗಳಿಗೆ ಈಗ ತೆರೆ ಬಿದ್ದಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಸುದ್ದಿಗಳು ಸಂಪೂರ್ಣ ಆಧಾರರಹಿತವಾಗಿದ್ದು, ಸಾಯಿ ಪಲ್ಲವಿ ಅವರೇ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸುವುದು ಖಚಿತ ಎಂದೇ ಹೇಳಲಾಗುತ್ತಿದೆ. ಸಾಯಿ ಪಲ್ಲವಿ ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಇತರ ಪ್ರಾಜೆಕ್ಟ್‌ಗಳ ಶೂಟಿಂಗ್ ಬಾಕಿ ಇರುವುದರಿಂದ ಸುಬ್ಬುಲಕ್ಷ್ಮಿ ಬಯೋಪಿಕ್ ಆರಂಭವಾಗುವುದು ಸ್ವಲ್ಪ ವಿಳಂಬವಾಗಿದೆ ಅಷ್ಟೇ. ಚಿತ್ರದ ತಾರಾಗಣದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸಾಯಿ ಪಲ್ಲವಿ ಭರ್ಜರಿ ತಯಾರಿ
ಲೆಜೆಂಡರಿ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೆ ಜೀವ ತುಂಬಲು ಸಾಯಿ ಪಲ್ಲವಿ ಈಗಾಗಲೇ ತೀವ್ರ ತಯಾರಿ ನಡೆಸುತ್ತಿದ್ದಾರೆ. ಸುಬ್ಬುಲಕ್ಷ್ಮಿ ಅವರ ಶಾಸ್ತ್ರೀಯ ನಡವಳಿಕೆ, ಭಾವನಾತ್ಮಕ ಆಳ ಮತ್ತು ಸಂಗೀತದ ಸಾಧನೆಗಳನ್ನು ತೆರೆಯ ಮೇಲೆ ನೈಜವಾಗಿ ತರಲು ಅವರು ಶ್ರಮಿಸುತ್ತಿದ್ದಾರೆ. ಸಾಯಿ ಪಲ್ಲವಿ ಅವರ ಸಹಜ ನಟನೆ ಈ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. 'ಜೆರ್ಸಿ' ಖ್ಯಾತಿಯ ಗೌತಮ್ ತಿನ್ನನೂರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ಭಾರತದ ಅತ್ಯಂತ ಗೌರವಾನ್ವಿತ ಸಂಗೀತಗಾರ್ತಿಯ ಜೀವನಗಾಥೆಯನ್ನು ಸಿನಿಮಾ ರೂಪದಲ್ಲಿ ನೋಡಲು ಸಂಗೀತ ಪ್ರೇಮಿಗಳು ಮತ್ತು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.












Click it and Unblock the Notifications