Kantara: ನಾಲ್ಕೈದು ಸಲ ನಾನು ಹೋಗೇಬಿಡ್ತಿದ್ದೆ, ಆ ದೈವ ನನ್ನ ಹಿಂದೆ ನಿಂತಿದೆ: ರಿಷಬ್ ಶೆಟ್ಟಿ
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್-1 (Kantara: Chapter 1) ಸಿನಿಮಾ ಅಕ್ಟೋಬರ್ ಎರಡರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಇಂದು ಈ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ, ಮೊದಲ ಬಾರಿಗೆ ಸುದ್ದಿಗೋಷ್ಠಿಯನ್ನು ಸಹ ಮಾಡಿದೆ. ಈ ಸಿನಿಮಾದ ಶೂಟಿಂಗ್ ವೇಳೆ ಕೆಲ ವದಂತಿಗಳು ಸಹ ಹಬ್ಬಿತ್ತು. ಈ ಬಗ್ಗೆ ಮೊದಲ ಬಾರಿಗೆ ರಿಷಬ್ ಶೆಟ್ಟಿ ಅವರೇ ಅಸಲಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಶೂಟಿಂಗ್ ವೇಳೆ ಎದುರಾದ ಸವಾಲುಗಳ ಬಗ್ಗೆಯೂ ಮಾತನಾಡಿರುವ ಅವರು ನಾಲ್ಕೈದು ಸಲ ನಾನೇ ಹೋಗಿಬಿಡಬೇಕಿತ್ತು ಎಂದು ಶಾಕಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.
'ಒಂದು ಕಥೆಯನ್ನ ತಗೊಂಡು ಬಂದಾಗ, ಅದನ್ನೆಲ್ಲ ಹೇಗೆ ಇನ್ನಷ್ಟು ಚೆನ್ನಾಗಿ ಕಾಣಿಸಬೇಕು ಎಂದು ಎಲ್ಲರೂ ಕೆಲಸ ಮಾಡಿದ್ದಾರೆ. ಕಥೆ ಮೇಲೆ, ನನ್ನ ಮೇಲೆ ಇದ್ದ ನಂಬಿಕೆ ಇಂದ ಅವರು ಬಜೆಟ್ ಬಗ್ಗೆ ಹೊಂಬಾಳೆಯವರು ತಲೆಕೆಡಿಸಿಕೊಳ್ಳಲಿಲ್ಲ. ನಮ್ಮದು ಎಲ್ಲವೂ ದಿನಗೂಲಿ ಅಂತಾನೇ ಲೆಕ್ಕ ಹಾಕಿದ್ರು ಹೊಂಬಾಳೆಯವರು ನಾಲ್ಕೂವರೆ ವರ್ಷದವರೆಗೆ ನಮ್ಮೆಲ್ಲರಿಗೂ ಈ ಸಿನಿಮಾಗಾಗಿ ಊಟ ಹಾಕಿದ್ದಾರೆ. ಮೂರು ತಿಂಗಳಿಂದ ನಾವು ಸರಿಯಾಗಿ ನಿದ್ದೆ ಮಾಡಲಿಲ್ಲ. ಇಡೀ ಚಿತ್ರತಂಡ ಹಗಲಿರುಳು ಶ್ರಮ ಪಡುತ್ತಲೇ ಇದೆ' ಎಂದು ರಿಷಬ್ ಹೇಳಿದ್ದಾರೆ.

'ಕಾಂತಾರ ಶುರು ಮಾಡಿದ ಮೇಲೆ ಸೆಟ್‌ನಲ್ಲಿ ಹಾಗಾಯ್ತು, ಹೀಗಾಯ್ತು ಎಂದೆಲ್ಲ ಮಾಧ್ಯಮಗಳಲ್ಲಿ ಸುದ್ದಿ ಬಂತು. ಲೆಕ್ಕ ಹಾಕಬೇಕು ಅಂದ್ರೆ ನಾನು ನಾಲ್ಕೈದು ಸಲ ಹೋಗೇಬಿಡ್ತಿದ್ದೆ. ಆದರೆ ನಾನು ಇವತ್ತಿನವರೆಗೂ ನಾನು ಬದುಕಿ ಬಂದು, ಈ ಸಿನಿಮಾವನ್ನ ನನ್ನ ಹೆಗಲ ಮೇಲೆ ಹಾಕೊಂಡು ಇಡೀ ತಂಡದ ಜೊತೆ ಬಂದು ನಿಮ್ಮೆಲ್ಲರ ಮುಂದೆ ನಿಂತಿದ್ದೀನಿ' ಎಂದು ರಿಷಬ್ ಶೂಟಿಂಗ್ ವೇಳೆ ಅನುಭವಿಸಿದ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.
'ಈ ಸಿನಿಮಾ ನಿಮ್ಮೆಲ್ಲರಿಗೆ ತೋರಿಸ್ತೀವಿ. ನನ್ನ ಹಿಂದೆ ಆ ದೈವ ಇದೆ ಅನ್ನೋದೇ ನನ್ನ ನಂಬಿಕೆ. ಆ ದೈವವೇ ನಮ್ಮ ಇಡೀ ತಂಡಕ್ಕೆ ಆಶೀರ್ವಾದ ಮಾಡಿ ಇವತ್ತು ನಮ್ಮೆಲ್ಲರನ್ನ ಇಲ್ಲಿವರೆಗೆ ಕರೆತಂದಿದೆ' ಎಂದಿದ್ದಾರೆ.
ವದಂತಿಗಳಿಗೂ ತೆರೆ ಎಳೆದ ರಿಷಬ್
ʼಕಾಂತಾರ ಚಾಪ್ಟರ್-1 ಸಿನಿಮಾ ದೈವದ ಕುರಿತು ಆಗಿರುವುದರಿಂದ ಅದನ್ನು ನೋಡಲು ಬರುವ ಪ್ರೇಕ್ಷಕರು ಯಾವುದೇ ಮದ್ಯಪಾನ, ಧೂಮಪಾನ, ಮಾಂಸಾಹಾರ ಸೇವಿಸಬಾರದು ಎಂಬ ಪೋಸ್ಟ್‌ವೊಂದು ವೈರಲ್ ಆಗಿತ್ತು. ಇದನ್ನು ಹಲವರು ನಂಬಿದ್ದರು. ಇದಕ್ಕೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿರುವ ರಿಷಬ್ ಶೆಟ್ಟಿ, ಅದು ಫೇಕ್ ಪೋಸ್ಟರ್ ಎಂದು ಕ್ಲಾರಿಟಿ ಕೊಟ್ಟಿದ್ದಾರೆ. ಮುಖ್ಯವಾಗಿ ಊಟೋಪಚಾರ, ಅವರವರ ಅಭ್ಯಾಸಗಳನ್ನು ಪ್ರಶ್ನಿಸಲು ಯಾರಿಗೂ ಅಧಿಕಾರ ಇಲ್ಲ. ಅದೆಲ್ಲ ಅವರವರ ಸ್ವಂತ ವಿವೇಚನೆಗೆ ಬಿಟ್ಟಿದ್ದು. ಯಾರೋ ಫೇಕ್ ಪೋಸ್ಟರ್ ಹಾಕಿದ್ದಾರೆ ಎಂದು ನಮ್ಮ ಗಮನಕ್ಕೂ ಬಂದಿದೆ. ಆದರೆ ಆ ಪೋಸ್ಟರ್ ಹಾಕಿದವರೇ ಅದನ್ನು ಡಿಲೀಟ್ ಮಾಡಿ ಕ್ಷಮೆಯೂ ಕೇಳಿದ್ದಾರೆʼ ಎಂದು ರಿಷಬ್ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications