ಗೆಳೆಯನ ಸಿನಿಮಾ ಗೆದ್ದಿದ್ದಕ್ಕೆ ನಟ ರಿಷಬ್ ಶೆಟ್ಟಿ ವಿಶೇಷ ಸಂದೇಶ!
ನಟ ರಾಜ್ ಬಿ.ಶೆಟ್ಟಿ ನಿರ್ಮಾಣದ "ಸು ಫ್ರಂ ಸೋ" ಸಿನಿಮಾ ಪ್ರೇಕ್ಷಕರ ಮನಗೆದ್ದು ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಗೆ ಜನ ಫಿದಾ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡದಲ್ಲಿ ಸದ್ಯ ಈ ಸಿನಿಮಾ ಧೂಳೆಬ್ಬಿಸಿದ್ದು, ಗೆಳೆಯನ ಸಿನಿಮಾ ಗೆದ್ದಿದ್ದಕ್ಕೆ ನಟ ರಿಷಬ್ ಶೆಟ್ಟಿ ಕೂಡ ಖುಷಿ ಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ಪತ್ರದ ಮೂಲಕ ಚಿತ್ರತಂಡದ ಬೆನ್ನುತಟ್ಟಿದ್ದಾರೆ ರಿಷಬ್.
ನಮಸ್ಕಾರ ಕನ್ನಡ ಸಿನಿಪ್ರಿಯರೇ, ನೀವೆಲ್ಲರೂ "SuFromSo" ಚಿತ್ರಕ್ಕೆ ನೀಡಿರುವ ಅದ್ಭುತ ಬೆಂಬಲ ಮತ್ತು ಪ್ರೀತಿಗೆ ಹೃದಯಪೂರ್ವಕ ಧನ್ಯವಾದಗಳು! ಈ ಸಿನಿಮಾ ನಿಜಕ್ಕೂ ಮನಸ್ಸಿಗೆ ತುಂಬಾ ಖುಷಿ ನೀಡಿದೆ ಎಂದಿದ್ದಾರೆ. ಈ ಸಿನಿಮಾ ರಚಿಸಿ ನಿರ್ದೇಶನ ಮಾಡಿದ ಜೆಪಿ ತುಮಿನಾಡ್ ಅವರಿಗೆ ಚಿತ್ರರಂಗಕ್ಕೆ ಸ್ವಾಗತ. ಅವರ ಚೊಚ್ಚಲ ಪ್ರಯತ್ನ ಅತ್ಯಂತ ಯಶಸ್ವಿಯಾಗಿದೆ. ನಿರ್ಮಾಪಕರಾದ ರಾಜ್ ಬಿ.ಶೆಟ್ಟಿ, ರವಿ ರೈ ಮತ್ತು ಶಶಿಧರ್ ಶೆಟ್ಟಿ ಬಾರೋಡ ಅವರ ಈ ಹೊಸ ಪ್ರಯತ್ನಕ್ಕೆ ನನ್ನ ಶುಭಾಶಯಗಳು. ಅವರ ಪ್ರೋತ್ಸಾಹದಿಂದ ಉತ್ತಮ ಚಿತ್ರಗಳು ಹೊರಬರುತ್ತಿವೆ.

ನಟರಾದ ಶನಿಲ್ ಗೌತಮ್, ಜೆಪಿ ತುಮಿನಾಡ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪನಾಜೆ, ಪುಷ್ಪರಾಜ್ ಬೋಳಾರ್, ಮೈಮ್ ರಾಮದಾಸ್ ಸೇರಿದಂತೆ ಪ್ರತಿಯೊಬ್ಬ ಕಲಾವಿದನ ಅಭಿನಯ ಗಮನ ಸೆಳೆಯುತ್ತಿದೆ. ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಳ್ಳೆಯ ಮನರಂಜನಾತ್ಮ ಚಿತ್ರವನ್ನು ನೀಡಿದ ಇಡೀ ಸುಫ್ರಂಸೋ ತಂಡಕ್ಕೆ ನನ್ನ ಅಭಿನಂದನೆಗಳು ಎಂದಿದ್ದಾರೆ.
ಈ ಚಿತ್ರವು ನನ್ನನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ದಿನಗಳಿಗೆ ಕರೆದುಕೊಂಡು ಹೋಯಿತು. ಆ ಚಿತ್ರದಲ್ಲಿ ನಟಿಸಿದ್ದ ಅನೇಕ ಕಲಾವಿದರು ಈ ಸಿನಿಮಾದಲ್ಲೂ ಇರುವುದು ಹಳೆಯ ನೆನೆಪುಗಳನ್ನು ಮರುಳಿಸುವಂತೆ ಮಾಡಿತು. ನಿಮ್ಮ ಈ ಪ್ರಯತ್ನಕ್ಕೆ ಇನ್ನಷ್ಟು ದೊಡ್ಡ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಕನ್ನಡ ಚಿತ್ರರಂಗಕ್ಕೆ ನಿಮ್ಮ ಬೆಂಬಲ ಹೀಗೇ ಇರಲಿ ಎಂದು ರಿಷಬ್ ಶೆಟ್ಟಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಬೇರೆ ಭಾಷೆಗಳಿಗೆ ಡಬ್
'ಸು ಫ್ರಂ ಸೋ' ಎಂಬ ಕನ್ನಡ ಸಿನಿಮಾಗೆ ಕರ್ನಾಟಕದಲ್ಲಿ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆ ನಂತರ ಮೊದಲ ಮೂರು ದಿನಗಳಲ್ಲಿ ಚಿತ್ರವು ರಾಜ್ಯಾದ್ಯಾಂತ ವಿಶಿಷ್ಟ ದಾಖಲೆ ಸ್ಥಾಪಿಸಿದೆ. ಮೊದಲ ದಿನದ ಕಲೆಕ್ಷನ್ 78 ಲಕ್ಷ, ಎರಡನೇ ದಿನದ ಕಲೆಕ್ಷನ್ ₹2.17 ಕೋಟಿ ಹಾಗೂ ಮೂರನೇ ದಿನದ ಕಲೆಕ್ಷನ್ ₹3.86 ಕೋಟಿ ಎಂದು ವರದಿಯಾಗಿದೆ. ಕೇವಲ ಕರ್ನಾಟಕದಲ್ಲಿ ಮೂರೇ ದಿನಕ್ಕೆ ₹6.81 ಕೋಟಿ ಬಾಚಿದೆ ಎಂದು ಹೇಳಲಾಗುತ್ತಿದೆ.
ಈ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಮಾಡುವ ಯೋಜನೆ ನಡೆಯುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಸಿನಿಮಾ ಪ್ರೇಕ್ಷಕರ ಮನಗೆದ್ದಿರುವ ಕಾರಣ ಓಟಿಟಿಯಿಂದಲೂ ಭಾರಿ ಬೇಡಿಕೆಯಲ್ಲಿದೆ. ಹಲವು ಓಟಿಟಿ ವೇದಿಕೆಗಳು ಈ ಸಿನಿಮಾ ಖರೀದಿಸಲು ಮುಗಿಬಿದ್ದಿವೆ ಎಂದು ತಿಳಿದುಬಂದಿದೆ.












Click it and Unblock the Notifications