ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮಿಸ್ ಯೂನಿವರ್ಸ್ ಇಂಡಿಯಾ ಬೆಡಗಿ
ಇತ್ತೀಚೆಗೆ ಮಿಸ್ ಯೂನಿವರ್ಸ್ ಇಂಡಿಯಾ-2024 (Miss Universe India) ಕಿರೀಟ ಮುಡಿಗೇರಿಸಿಕೊಂಡಿರುವ ಗುಜರಾತ್ ಬೆಡಗಿ ರಿಯಾ ಸಿಂಘಾ ಅವರಿಗೆ ಮತ್ತೊಂದು ದೊಡ್ಡ ಆಫರ್ ಬಂದಿದೆ. ಈ ವರ್ಷ ನಡೆಯಲಿರುವ ವಿಶ್ವಪ್ರಸಿದ್ಧ ಅಯೋಧ್ಯೆಯ ರಾಮ್ ಲೀಲಾ ಕಾರ್ಯಕ್ರಮದಲ್ಲಿ ರಿಯಾ ಸಿಂಘಾ ಅವರು ಸೀತಾದೇವಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಬಿಜೆಪಿ ನಾಯಕ, ನಟ ಹಾಗೂ ಗಾಯಕ ಮನೋಜ್ ತಿವಾರಿ ಅವರು ಶ್ರೀರಾಮನ ಪಾತ್ರದಲ್ಲಿ, ಮತ್ತೊಬ್ಬ ಬಿಜೆಪಿ ನಾಯಕ ಮತ್ತು ನಟ ರವಿ ಕಿಶನ್ ಸುಗ್ರೀವನ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಈ ಬಗ್ಗೆ ಸಂಸತ ಹಂಚಿಕೊಂಡಿರುವ ರಿಯಾ ಸಿಂಘಾ, ನಾನು ಸೀತಾ ದೇವಿಯ ಪಾತ್ರದಲ್ಲಿ ವಿಶ್ವದ ಅತಿ ದೊಡ್ಡ ರಾಮಲೀಲಾ ಕಾರ್ಯಕ್ರಮಕ್ಕಾಗಿ ಅಯೋಧ್ಯೆಗೆ ಬರುತ್ತಿದ್ದೇನೆ. ಶ್ರೀರಾಮ ಮತ್ತು ಸೀತೆಯ ಆಶೀರ್ವಾದದಿಂದ ನನಗೆ ಈ ಅವಕಾಶ ಸಿಕ್ಕಿದೆ ಎಂದು ಭಾವಿಸಿದ್ದೇನೆ ಎಂದಿದ್ದಾರೆ.
ಕಳೆದ ವರ್ಷ 36 ಕೋಟಿ ಮಂದಿ ರಾಮಲೀಲಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಈ ವರ್ಷ ಸುಮಾರು 50 ಕೋಟಿ ಜನ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಇದಕ್ಕಾಗಿ ನಾನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅಯೋಧ್ಯೆಯ ರಾಮ್ ಲೀಲಾ ಸಂಸ್ಥಾಪಕ ಸುಭಾಷ್ ಮಲಿಕ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರಿಯಾ ಹೇಳಿದ್ದಾರೆ.

ರಾಮಲೀಲಾ ಎಂಬುದು ಪ್ರಾಚೀನ ಹಿಂದೂ ಮಹಾಕಾವ್ಯವಾದ ರಾಮಾಯಣ ಅಥವಾ ರಾಮಚರಿತಮಾನಸದ ಸಾಹಿತ್ಯದ ಪ್ರಕಾರ ರಾಮನ ಜೀವನದ ಯಾವುದೇ ನಾಟಕೀಯ ಜಾನಪದದ ಮರು-ನಿರ್ಮಾಣವಾಗಿದೆ. ಅಯೋಧ್ಯೆಯಲ್ಲಿ ಈ ರಾಮ್ ಲೀಲಾವನ್ನು ಸಾಮಾನ್ಯವಾಗಿ ಬಯಲು ಸ್ಥಳಗಳಲ್ಲಿ ಅಥವಾ ದೇವಾಲಯಗಳ ಬಳಿ ಪ್ರದರ್ಶಿಸಲಾಗುತ್ತದೆ. ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನವರಾತ್ರಿಯ ರಾಮಲೀಲಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರುತ್ತದೆ.
2008ರಲ್ಲಿ ಯುನೆಸ್ಕೋ ಈ ರಾಮಲೀಲಾ ಉತ್ಸವಗಳನ್ನು ʼಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆʼ ಎಂದು ಘೋಷಿಸಿತ್ತು. ಉತ್ತರ ಪ್ರದೇಶದ ಐತಿಹಾಸಿಕ ನಗರಗಳಾದ ಅಯೋಧ್ಯೆ, ವಾರಣಾಸಿ, ವೃಂದಾವನ, ಅಲ್ಮೋರಾ, ಸತ್ನಾ ಮತ್ತು ಮಧುಬನಿ, ಉತ್ತರಾಖಂಡ, ಬಿಹಾರ, ಮಧ್ಯಪ್ರದೇಶ ಸೇರಿದಂತೆ ಹಲವು ಭಾಗಗಳಲ್ಲಿ ರಾಮಲೀಲಾ ವಿಶೇಷವಾಗಿ ಆಯೋಜಿಸಲಾಗುತ್ತದೆ. ಆದರೆ, ಅಯೋಧ್ಯೆಯಲ್ಲಿ ನಡೆಯುವ ರಾಮಲೀಲಾ ಕಾರ್ಯಕ್ರಮ ಹೆಚ್ಚು ಪ್ರಸಿದ್ಧಿ ಪಡೆದಿದೆ.
ರಿಯಾ ಸಿಂಘಾ ಬಗ್ಗೆ: ರಾಜಸ್ಥಾನದ ಜೈಪುರದಲ್ಲಿ ಇತ್ತೀಚೆಗೆ ನಡೆದ Miss Universe India 2024 ಸ್ಪರ್ಧೆ ಗ್ರ್ಯಾಂಡ್ ಫಿನಾಲೆಯಲ್ಲಿ ರಿಯಾ ಸಿಂಘಾ ಅವರು ಈ ಕಿರೀಟ ಮುಡಿಗೇರಿಸಿಕೊಂಡರು. ಸದ್ಯ ಮೆಕ್ಸಿಕೋದಲ್ಲಿ ನಡೆಯಲಿರುವ ಜಾಗತಿಕ ವಿಶ್ವ ಸುಂದರಿ (global Miss Universe 2024) ಸ್ಪರ್ಧೆಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಗುಜರಾತಿನ ಅಹಮದಾಬಾದ್ ಮೂಲದ ರಿಯಾ ಸಿಂಘಾ ಅವರಿಗೆ ಇನ್ನೂ 19 ವರ್ಷ. ಮಾಡೆಲ್ ಕೂಡ ಆಗಿರುವ ರಿಯಾ, ಉದ್ಯಮಿ ಮತ್ತು ಇಸ್ಟೋರ್ ಫ್ಯಾಕ್ಟರಿಯ ನಿರ್ದೇಶಕರಾಗಿರುವ ರೀಟಾ ಸಿಂಘಾ ಮತ್ತು ಬ್ರಿಜೇಶ್ ಸಿಂಘಾ ಅವರ ಪುತ್ರಿ ದಂಪತಿ ಪುತ್ರ. ಇವರು ಗುಜರಾತ್‌ನ GLS ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ. ಬಾಲಿವುಡ್‌ನಲ್ಲಿ ನಟಿಸಬೇಕು ಎಂದು ರಿಯಾ ಆಸೆ ಬಿಚ್ಚಿಟ್ಟಿದ್ದಾರೆ.












Click it and Unblock the Notifications