ಸ್ಟೋನಿ ಬ್ರೂಕ್‌ನಲ್ಲಿ ಡಿ-ಬಾಸ್ ಸಫಾರಿ: ಪೊಲೀಸರ ಜೊತೆ ದರ್ಶನ್, ಚಿಕ್ಕಣ್ಣ ಫೋಟೋ ವೈರಲ್
ಬೆಂಗಳೂರು, ಸೆಪ್ಟೆಂಬರ್ 05: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಸುಮಾರು ಮೂರು ತಿಂಗಳು ಸಮೀಪಿಸುತ್ತಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿದ ಆರೋಪದ ಮೇಲೆ ಸದ್ಯ ದರ್ಶನ್‌ನನ್ನು ಬೆಂಗಳೂರಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆ ಮುಕ್ತಾಯಗೊಂಡಿದ್ದು, ಪ್ರಕರಣದ ಆರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆ ಆಗಿದೆ. ಈಗ ಪ್ರಕರಣ ಮತ್ತೆ ಹೈಪ್ ಪಡೆದಿದ್ದು ಮಹತ್ವದ ಬೆಳವಣಿಗೆ ಜೊತೆಗೆ ಕೆಲವು ಫೋಟೋಗಳು ಸಹ ಬಹಿರಂಗಗೊಂಡಿದೆ. ಪಟ್ಟಣಗೆರೆ ಶೆಡ್‌ನಲ್ಲಿರುವ ರೇಣುಕಾಸ್ವಾಮಿಯ ಕೆಲವು ಫೋಟೋಗಳ ಜೊತೆಗೆ ಸ್ಟೋನಿ ಬ್ರೂಕ್ ಹೋಟೆಲ್ನಲ್ಲಿರುವ ದರ್ಶನ್ ಫೋಟೋ ಕೂಡ ವೈರಲ್ ಆಗಿದೆ.

ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಇತರ ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಇದೀಗ ಕೊಲೆಗೂ ಮುನ್ನ ದರ್ಶನ್ ಭೇಟಿ ನೀಡಿದ ಸ್ಟೋನಿ ಬ್ರೂಕ್ ಹೋಟೆಲ್ನಲ್ಲಿ ಸ್ಥಳ ಮಹಜರು ನಡೆಸಿದ ಫೋಟೋವೊಂದು ವೈರಲ್ ಆಗಿದೆ. ನಟ ದರ್ಶನ್, ಆರೋಪಿಗಳಾದ ವಿನಯ್, ಪ್ರದೋಶ್ ಜೊತೆಗೆ ನಟ ಚಿಕ್ಕಣ್ಣ ಜೊತೆಗೆ ಸ್ಥಳ ಮಹಜರು ನಡೆಸಲಾಗಿದೆ.
ಪಟ್ಟಣಗೆರೆ ಶೆಡ್‌ಗೆ ಹೋಗುವ ಮುನ್ನ ದರ್ಶನ್ ಸೇರಿ ಇನ್ನೂ ಕೆಲವರು ಬೆಂಗಳೂರಿನ ಸ್ಟೋನಿ ಬ್ರೂಕ್ ಹೋಟೆಲ್ನಲ್ಲಿ ಪಾರ್ಟಿ ನಡೆಸಿದ್ದಾರೆ. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಭಾಗಿಯಾಗಿದ್ದರು ಎನ್ನುವ ಮಾಹಿತಿ ಈ ಮೊದಲೇ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ನಟ ಚಿಕ್ಕಣ್ಣ ಎರಡು ಬಾರಿ ವಿಚಾರಣೆ ಎದುರಿಸಿದ್ದರು. ಆದರೆ ಸ್ಥಳ ಮಹಜರು ವೇಳೆ ಕೂಡ ಚಿಕ್ಕಣ್ಣ ಇದ್ದರು ಎನ್ನುವುದು ಇದೀಗ ತಿಳಿದು ಬಂದಿದೆ.

ಇನ್ನು ವೈರಲ್ ಆದ ಫೋಟೋದಲ್ಲಿ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ದರ್ಶನ್‌ಗಾಗಿ ವಿಶೇಷ ಸ್ಥಳದ ವ್ಯವಸ್ಥೆ ಮಾಡಲಾಗಿರುವುದು ಕೂಡ ಕಂಡು ಬಂದಿದೆ. ದರ್ಶನ್‌ಗಾಗಿಯೇ ಮೀಸಲಿರುವ ಈ ಸ್ಥಳಕ್ಕೆ ಡಿ-ಬಾಸ್ ಸಫಾರಿ ಎಂದು ಹೆಸರಿಡಲಾಗಿದೆ. ಇನ್ನು ಪೊಲೀಸರು ಜೊತೆಗಿರುವ ಈ ಫೋಟೋದಲ್ಲಿ ದರ್ಶನ್ ನೀಲಿ ಬಣ್ಣದ ಟಿ-ಶರ್ಟ್ ಧರಿಸಿ ಸಪ್ಪಗೆ ಮುಖ ಮಾಡಿ ಕುಳಿತಿದ್ದು, ನಟ ಚಿಕ್ಕಣ್ಣ ಆತಂಕದಲ್ಲಿಯೇ ಕುಳಿತಿರುವುದು ಕಂಡುಬಂದಿದೆ. ಸದ್ಯ ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.












Click it and Unblock the Notifications