Upendra: ನನಗೆ ಆ ನಟನ ಡೇಟ್ ಸಿಗೋಕೆ ಮೂರು ವರ್ಷ ಬೇಕು: ಉಪ್ಪಿ ಹೇಳಿದ್ದು ಯಾರ ಬಗ್ಗೆ
ಕನ್ನಡ ಖ್ಯಾತ ನಿರ್ದೇಶಕ ಹಾಗೂ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ನಟನೆಯಲ್ಲೂ ಸೈ, ನಿರ್ದೇಶನಕ್ಕೂ ಸೈ. ಇವರ ಡೈರೆಕ್ಷನ್ ಕಂಡು ಭಾರತದ ಇನ್ನಿತರ ನಿರ್ದೇಶಕರು ಕೂಡ ಸಲಾಂ ಹೊಡೆಯುತ್ತಾರೆ. ಇನ್ನು ಉಪ್ಪಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾಗಳೆಲ್ಲ ಸೂಪರ್ ಹಿಟ್ ಆಗಿವೆ. ಕನ್ನಡದ ಹಲವು ನಟರಿಗೆ ಆಕ್ಷನ್ ಕಟ್ ಹೇಳಿರುವ ಅವರು ಇದೀಗ ಮತ್ತೊಬ್ಬ ಖ್ಯಾತ ನಟನಿಗೆ ನಿರ್ದೇಶನ ಮಾಡುವ ವಿಚಾರವಾಗಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಸದ್ಯ ಇಂದು ಉಪೇಂದ್ರ ಅವರು ನಿರ್ದೇಶಿಸಿ ನಟಿಸಿರುವ ಯುಐ ಸಿನಿಮಾ ರಿಲೀಸ್ ತೆರೆಕಂಡಿದೆ. ಇತ್ತೀಚೆಗೆ ಉಪೇಂದ್ರ ಅವರು ಈ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾಗ ಟಾಲಿವುಡ್‌ನ ಖ್ಯಾತ ನಟ ಡಾರ್ಲಿಂಗ್ ಪ್ರಭಾಸ್ ಅವರಿಗೆ ಡೈರೆಕ್ಟ್ ಮಾಡುವ ವಿಚಾರದ ಬಗ್ಗೆ ಪ್ರಸ್ತಾಪವಾಗಿದೆ. ಇದಕ್ಕೆ ನಟ ಉಪೇಂದ್ರ ಕೂಡ ತಮ್ಮ ಶೈಲಿಯಲ್ಲೇ ಉತ್ತರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಪ್ರಚಾರದ ವೇಳೆ ಟಾಲಿವುಡ್‌ನ ಯಾವ ನಟನಿಗೆ ನಿಮ್ಮ ಎ ಸಿನಿಮಾವನ್ನು ಡೈರೆಕ್ಟ್ ಮಾಡಲು ಇಚ್ಛಿಸುತ್ತೀರಿ ಎಂದು ಉಪೇಂದ್ರ ಅವರಿಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಉಪ್ಪಿ, ಅದು ಸ್ಟಾರ್ ಸಿನಿಮಾವಲ್ಲ, ನಾನು ಮೊದಲ ಬಾರಿಗೆ ಲಾಂಚ್ ಮಾಡಿಕೊಂಡ ಸಿನಿಮಾ. ಹಾಗೇನಾದರೂ ನನಗೆ ಐಡಿಯಾ ಬಂದ್ರೆ ನಿಮ್ಮನ್ನೇ ಹಾಕಿಕೊಂಡು ಸಿನಿಮಾ ಮಾಡುತ್ತೇನೆ ಎಂದು ಉಪ್ಪಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ.
ಬಳಿಕ ನೀವು ನಟ ಪ್ರಭಾಸ್ ಅವರಿಗೆ ಸಿನಿಮಾ ನಿರ್ದೇಶಿಸುವುದಾದರೆ ಎಂತಹ ಸಿನಿಮಾ ಮಾಡಲು ಬಯಸುತ್ತೀರಾ? ಎಂದು ಮತ್ತೊಂದು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಉಪ್ಪಿ, ಪ್ರಭಾಸ್ ಅವರಂತಹ ಸ್ಟಾರ್ ಅನ್ನು ಈ ರೀತಿ ಸುಮ್ಮನೆ ಸಿನಿಮಾ ಮಾಡ್ತೀನಿ ಎಂದು ಕೇಳಲು ಆಗುತ್ತಾ? ಅಂತಹ ಕಥೆಯನ್ನು ಹೀಗಿದೆ ಎಂದು ಈಗಲೇ ಹೇಳಿಬಿಡಲಾ? ಎಂದು ಉಪ್ಪಿ ಕೇಳಿದ್ದಾರೆ.

ಪ್ರಭಾಸ್ ಅವರ ಡೇಟ್ ಸಿಗೋಕೆ ಕನಿಷ್ಠ ಎಂದರೂ ಎರಡು ಮೂರು ವರ್ಷಗಳು ಬೇಕು. ಹಾಗಾಗಿ ಕಥೆ ಮಾಡಲು ಮೂರು ವರ್ಷ ಟೈಮ್ ಇದೆ. ಅವರಿಗೆ ಕಥೆ ಮಾಡುವುದಾದರೆ ಮೂರು ವರ್ಷ ಮಾಡಬಹುದು ಎಂದೂ ಉಪೇಂದ್ರ ಹೇಳಿದ್ದಾರೆ. ಇದರ ಬೆನ್ನಲ್ಲೇ ನಟ ಉಪೇಂದ್ರ ಅವರು ಪ್ರಭಾಸ್ ಅವರಿಗೆ ಸಿನಿಮಾ ಡೈರೆಕ್ಟ್ ಮಾಡ್ತಾರೆ ಎಂದು ಅವರ ಅಭಿಮಾನಿಗಳು ಉಪ್ಪಿ ಹೇಳಿರುವ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.
ನಟ ಉಪೇಂದ್ರ ಅವರು ಈಗಾಗಲೇ ತೆಲುಗು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಟಾಲಿವುಡ್‌ನಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಮತ್ತೊಂದೆಡೆ ಅವರ ನಿರ್ದೇಶನಕ್ಕೂ ಅಲ್ಲಿ ಅಪಾರ ಅಭಿಮಾನಿ ಬಳಗವಿದೆ. ದಯವಿಟ್ಟು ಪ್ರಭಾಸ್ ಅವರಿಗೆ ಉಪ್ಪಿ ಒಂದು ಸಿನಿಮಾ ಮಾಡಲೇಬೇಕು ಎಂದು ಹಲವು ಕೋರಿಕೆ ಮುಂದಿಟ್ಟಿದ್ದಾರೆ.

ಇನ್ನು ನಟ ಉಪೇಂದ್ರ ಅವರು ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಹಲವು ನಟರನ್ನು ವಿಭಿನ್ನ ಶೇಡ್‌ನಲ್ಲಿ ತೋರಿಸಿ, ನಿರ್ದೇಶನದಲ್ಲಿ ಗೆದ್ದಿದ್ದರು. ಆದರೆ, ಇತ್ತೀಚೆಗೆ ಅವರು ತಾವೇ ನಿರ್ದೇಶಿಸಿ, ತಾವೇ ನಟಿಸುತ್ತಿದ್ದು ಬೇರೆ ನಟರಿಗೆ ಆಕ್ಷನ್ ಕಟ್ ಹೇಳುತ್ತಿಲ್ಲ.
ಹಾಗಾಗಿ ಪ್ರಭಾಸ್ ಹಾಗೂ ಉಪೇಂದ್ರ ಅವರ ಕಾಂಬಿನೇಷನ್‌ನಲ್ಲಿ ಸಿನಿಮಾ ಬಂದರೆ ಅದಕ್ಕಿಂತ ದೊಡ್ಡ ಹಬ್ಬ ಇನ್ನೊಂದಿಲ್ಲ ಎಂದು ಅಭಿಮಾನಿಗಳು ಆಸೆ ಪಟ್ಟಿದ್ದಾರೆ. ಉಪ್ಪಿ ಅವರ ನಿರ್ದೇಶನ ಅಂದರೆ ಯಾವ ನಟ ಕೂಡ ಬೇಡ ಅನ್ನೋದೆ ಇಲ್ಲ. ಹೀಗಿರುವಾಗ ನೀವು ಪ್ರಭಾಸ್ ಅವರೊಂದಿಗೆ ಸಿನಿಮಾ ಮಾಡ್ತೀನಿ ಅಂದ್ರೆ, ಡಾರ್ಲಿಂಗ್ ಓಕೆ ಅನ್ನೋದು ಗ್ಯಾರಂಟಿ ಎಂದು ಅಭಿಮಾನಿಗಳು ಕೇಳಿಕೊಂಡಿದ್ದಾರೆ.












Click it and Unblock the Notifications