ರಶ್ಮಿಕಾ-ವಿಜಯ್ ಮದುವೆಯಾಗುತ್ತಿರುವ ಐಷಾರಾಮಿ ಉದಯಪುರ ಹೋಟೆಲ್ ಹೇಗಿದೆ, ಒಂದು ದಿನದ ಬಾಡಿಗೆ ಎಷ್ಟು?
ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ಮದುವೆಯ ಸುದ್ಧಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಭಿಮಾನಿಗಳು ಪ್ರೀತಿಯಿಂದ 'VIROSH' (ವಿರೋಶ್) ಎಂದು ಕರೆಯುವ ಈ ಜೋಡಿ, ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ದೂರದ ರಾಜಸ್ಥಾನದಲ್ಲಿ ಇವರ ವಿವಾಹ ನಡೆಯಲಿದ್ದು, ಈಗಾಗಲೇ ರಶ್ಮಿಕಾ ಹಾಗೂ ವಿಜಯ್ ಉದಯಪುರದಲ್ಲಿ ಬೀಡುಬಿಟ್ಟಿದ್ದಾರೆ. ಇನ್ನು ಈ ಜೋಡಿಯ ಮದುವೆ ಐಷಾರಾಮಿ ಹೋಟೆಲ್‌ನಲ್ಲಿ ಖಾಸಗಿಯಾಗಿ ನಡೆಯಲಿದ್ದು, ಈಗ ಎಲ್ಲರ ಕಣ್ಣು ಆ ಹೋಟೆಲ್ ಹಾಗೂ ಅದರ ವಿಶೇಷತೆಗಳತ್ತ ನೆಟ್ಟಿದೆ.
ನಿನ್ನೆಯಷ್ಟೇ ರಶ್ಮಿಕಾ ಹಾಗೂ ವಿಜಯ್ ಭಾರೀ ಭದ್ರತೆಯಲ್ಲಿ ಉದಯಪುರ ವಿಮಾನ ನಿಲ್ದಾಣದಿಂದ ಈ ಹೋಟೆಲ್ ಸೇರಿಕೊಂಡಿದ್ದಾರೆ. ವರದಿಗಳ ಪ್ರಕಾರ ಫೆಬ್ರವರಿ 24ರಿಂದ 26ರವರೆಗೆ ಮೂರು ದಿನಗಳ ಕಾಲ ವೈಭವದ ಮದುವೆ ಸಂಭ್ರಮ ನೆರವೇರಲಿದೆ. ಫೆಬ್ರವರಿ 26ರಂದು ಮುಹೂರ್ತ ನಡೆಯಲಿದ್ದು, ಈ ಜೋಡಿ ಹಸೆಮಣೆ ಏರಲಿದೆ.

ಅತಿಥಿಗಳಿಗೆ ಮೊಬೈಲ್ ಬಳಕೆಗೆ ನಿರ್ಬಂಧ
ಈ ಖಾಸಗಿ ಮದುವೆಗೆ ಕೇವಲ 230 ಆಪ್ತ ಕುಟುಂಬದ ಸದಸ್ಯರು ಮತ್ತು ವಿಶೇಷ ಗಣ್ಯರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ. ಮದುವೆಯ ಫೋಟೋಗಳು ಲೀಕ್ ಆಗಬಾರದೆಂಬ ಕಾರಣಕ್ಕೆ ಕಟ್ಟುನಿಟ್ಟಾದ 'ನೋ-ಫೋನ್ ಪಾಲಿಸಿ' ಜಾರಿಯಲ್ಲಿದ್ದು, ಬಿಗಿ ಭದ್ರತೆ ಕೂಡ ಏರ್ಪಡಿಸಲಾಗಿದೆ. ವಿಶೇಷವೆಂದರೆ, ಮದುವೆಗಾಗಿ ಈ ಹೋಟೆಲ್‌ನ ಒಟ್ಟು 117 ಕೊಠಡಿಗಳನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದ್ದು, ಫೆಬ್ರವರಿ 24 ರಿಂದಲೇ ಅತಿಥಿಗಳ ಆಗಮನ ಆರಂಭವಾಗಿದೆ.
ಅರಾವಳಿ ಬೆಟ್ಟಗಳ ನಡುವೆ ಇರುವ ಹೋಟೆಲ್
ರಶ್ಮಿಕಾ-ವಿಜಯ್ ಅವರ ರಾಯಲ್ ವೆಡ್ಡಿಂಗ್‌ಗಾಗಿ ಉದಯಪುರದ ಜನಜಂಗುಳಿಯಿಂದ ದೂರವಿರುವ, ಅರಾವಳಿ ಬೆಟ್ಟಗಳ ಮಡಲಲ್ಲಿರುವ 'ಮೆಮೆಂಟೋಸ್ ಬೈ ಐಟಿಸಿ ಹೋಟೆಲ್ಸ್, ಏಕಾಯಾ' (Mementos by ITC Hotels, Ekaaya) ಎಂಬ ಅತ್ಯಂತ ಐಷಾರಾಮಿ ರೆಸಾರ್ಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಚ್ಚ ಹಸಿರಿನ ನಡುವೆ ಇರುವ ಈ ಪ್ರಾಪರ್ಟಿ ಸಿಟಿ ಲೈಫ್‌ನಿಂದ ದೂರವಿದ್ದು, ಅತ್ಯಂತ ಪ್ರಶಾಂತವಾದ ಪರಿಸರವನ್ನು ಹೊಂದಿದೆ.

ಐಷಾರಾಮಿ ಹೋಟೆಲ್‌ನ ಬಾಡಿಗೆ, ವಿಶೇಷತೆ, ಸೌಲಭ್ಯಗಳು
ಈ ತಾರಾ ಜೋಡಿಯ ಮದುವೆ ಸುದ್ದಿ ಹೊರಬಂದ ಬೆನ್ನಲ್ಲೇ ಅವರು ಮದುವೆಯಾಗುತ್ತಿರುವ ಈ ಐಷಾರಾಮಿ ಹೋಟೆಲ್ ಬಗ್ಗೆ ಕುತೂಹಲ ಹೆಚ್ಚಿಸಿಕೊಂಡಿದ್ದಾರೆ. ಸಾಮಾನ್ಯ ಪ್ರವಾಸಿಗರು ಈ ಐಷಾರಾಮಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲು ಇಚ್ಛಿಸಿದರೆ ಭಾರಿ ಮೊತ್ತವನ್ನೇ ತೆರಬೇಕಾಗುತ್ತದೆ. ಹೋಟೆಲ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ ಬೆಲೆ ಪಟ್ಟಿ ಹೀಗಿದೆ.
* ವಿಲ್ಲಾ (Villa): 4 ಜನರು ಉಳಿಯಬಹುದಾದ 45 ಚದರ ಮೀಟರ್ ವಿಸ್ತೀರ್ಣದ ವಿಲ್ಲಾ ಬಾಡಿಗೆ ಒಂದು ರಾತ್ರಿಗೆ ಸುಮಾರು ₹35,499 (ತೆರಿಗೆ ಹೊರತುಪಡಿಸಿ).
* ಸೂಟ್ (Suite): ಪರ್ಸನಲ್ ಸ್ವಿಮ್ಮಿಂಗ್ ಪೂಲ್ ಮತ್ತು ಸುಂದರವಾದ ಗೆಜೆಬೋ ಹೊಂದಿರುವ ಅತ್ಯಂತ ಐಷಾರಾಮಿ ಸೂಟ್‌ನ ಬೆಲೆ ಒಂದು ರಾತ್ರಿಗೆ ಬರೋಬ್ಬರಿ ₹71,499 (ತೆರಿಗೆ ಹೊರತುಪಡಿಸಿ).
ಬಹಳ ದಿನಗಳಿಂದ ಇವರ ಪ್ರೀತಿಯ ಬಗ್ಗೆ ಹರಿದಾಡುತ್ತಿದ್ದ ಗುಸುಗುಸು ಸುದ್ಧಿಗಳಿಗೆ ಈಗ ಅಧಿಕೃತ ಮುದ್ರೆ ಬಿದ್ದಿದೆ. ರಾಜಸ್ಥಾನದ ರಾಜವೈಭವದ ಶೈಲಿಯಲ್ಲಿ ನಡೆಯಲಿರುವ ಈ ವಿವಾಹ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದೇ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಮದುವೆ ವಿಚಾರವನ್ನು ಖಚಿತಪಡಿಸಿದ್ದರು. ಹಲವು ವರ್ಷಗಳಿಂದಲೂ ಈ ಜೋಡಿ ಬಗ್ಗೆ ಗಾಸಿಪ್ ಇತ್ತು. ಇದೀಗ ಕೊನೆಗೂ ಕರ್ನಾಟಕದ ಕೊಡಗಿನ ಕುವರಿ ರಶ್ಮಿಕಾ ಹಸೆಮಣೆ ಏರುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಜೋಡಿ ಶುಭಾಷಯಗಳ ಮಹಾಪೂರ ಹರಿದುಬರುತ್ತಿದೆ.













Click it and Unblock the Notifications