777 Charlie: ಜಪಾನ್‌ನಲ್ಲಿ ಮೋಡಿ ಮಾಡಲು ಸಜ್ಜಾದ ಚಾರ್ಲಿ
ರಕ್ಷಿತ್ ಶೆಟ್ಟಿ ಅಭಿನಯದ ಸೂಪರ್ ಹಿಟ್ ಸಿನಿಮಾ 777 ಚಾರ್ಲಿ ಈಗ ಜಪಾನ್‌ನಲ್ಲಿ ಕೂಡ ಮೋಡಿ ಮಾಡಲು ಸಜ್ಜಾಗಿದೆ. ಕನ್ನಡದಲ್ಲಿ ನಿರ್ಮಾಣವಾದ ಈ ಸಿನಿಮಾ ಈಗಾಗಲೇ ದೇಶ, ವಿದೇಶಗಳ ಹಲವು ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಿದೆ.
ದೇಶ, ವಿದೇಶಗಳಲ್ಲಿ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಈ ಎಮೋಷನಲ್, ರೋಡ್ ಸಿನಿಮಾ ಈಗ ಜಪಾನಿ ಭಾಷೆಯಲ್ಲಿ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಜೂನ್ 28 ರಂದು ಜಪಾನ್‌ನ ಹಲವು ಭಾಗಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಜಪಾನ್‌ನಲ್ಲಿ ಈಗಾಗಲೇ ಚಿತ್ರದ ಪ್ರಮೋಷನ್ ಆರಂಭವಾಗಿದೆ. ಹಲವು ಭಾರತೀಯ ಸಿನಿಮಾಗಳನ್ನು ಈಗಾಗಲೇ ಜಪಾನಿಗರು ಮೆಚ್ಚಿಕೊಂಡಿದ್ದಾರೆ. ರಜನಿಕಾಂತ್, ಸುದೀಪ್, ರಾಜಮೌಳಿ ಸಿನಿಮಾಗಳು ಜಪಾನ್‌ನಲ್ಲಿ ಸಾಕಷ್ಟು ಜನಪ್ರಿಯ. ಈಗ ಚಾರ್ಲಿ ಕೂಡ ಜಪಾನಿಗರ ಮನ ಗೆಲ್ಲಲು ಹೊರಟಿದೆ.
子犬と出会い生きる喜びを取り戻す、インド発のロードムービー「チャーリー」公開https://t.co/8u1svGjHKK#チャーリー #ラクシット・シェッティ #キランラージ・K pic.twitter.com/QygFFaJfTv
— 映画ナタリー (@eiga_natalie) April 26, 2024
ಎಲ್ಲರ ಮನಗೆಲ್ಲುವ ಸಿನಿಮಾ
ಚಾರ್ಲಿ ಸಿನಿಮಾದ ಕಥೆಯೇ ಎಲ್ಲರ ಮನಮುಟ್ಟುವಂತಿದೆ. ಬದುಕಿನ ಮೇಲೆ ಆಸಕ್ತಿ ಕಳೆದುಕೊಂಡ ವ್ಯಕ್ತಿಯೊಬ್ಬನನ ಬದುಕಿಗೆ ಪ್ರವೇಶಿಸುವ ನಾಯಿಯೊಂದು ಆತನ ಜೀವನವನ್ನೇ ಬದಲಿಸುವ ಮನಮುಟ್ಟುವ ಕಥೆ. ನಾಯಿಯೊಂದಿಗೆ ಕರ್ನಾಟಕದಿಂದ ಕಾಶ್ಮೀರದವರೆಗೆ ಸಾಗುವ ವ್ಯಕ್ತಿಯ ಪ್ರಯಾಣದ ಕತೆಯಾಗಿದ್ದು, ನಾಯಿಯನ್ನು ಇಷ್ಟಪಡುವವರಿಗೆ ಈ ಸಿನಿಮಾ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಧರ್ಮನ ಪಾತ್ರಕ್ಕೆ ರಕ್ಷಿತ್ ಶೆಟ್ಟಿ ಜೀವ ತುಂಬಿದ್ದರೆ, ಚಾರ್ಲಿಯಾಗಿ ಕಾಣಿಸಿಕೊಳ್ಳುವ ನಾಯಿ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತದೆ. 2021ರ ವರ್ಷದ ಕನ್ನಡದ ಉತ್ತಮ ಚಲನಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಈ ಸಿನಿಮಾ ಬಿಡುಗಡೆಯಾದ ಬಳಿಕ 'ಲಾಬ್ರಡಾರ್' ಜಾತಿಯ ನಾಯಿಮರಿಗಳಿಗೆ ಬೇಡಿಕೆ ಕೂಡ ಹೆಚ್ಚಾಗಿತ್ತು.
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಭಾರತದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ₹100 ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು. ಅದಾದ ಬಳಿಕ ವಿವಿಧ ದೇಶಗಳಲ್ಲಿ ಸಿನಿಮಾ ಬಿಡೆಗಡೆಯಾಗುತ್ತಿದ್ದು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಬಾಬ್ಬಿ ಸಿಂಹ, ಡ್ಯಾನಿಶ್ ಸೇಟ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications