ನಟ್ಟು ಬೋಲ್ಟ್ ರೌಡಿಸಂ ಮಾತು, ಒಂದು ಸಿನಿಮಾ ಮಾಡಿ ತೋರಿಸಿ: ಪ್ರಶಾಂತ್ ಸಂಬರಗಿ ಸವಾಲ್
ಚಿತ್ರರಂಗದವರ ನಟ್ಟು ಬೋಲ್ಟ್ ಟೈಟ್ ಮಾಡೋದು ಗೊತ್ತಿದೆ ಎಂಬ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ಹೇಳಿಕೆ ವಿವಾದ ಸೃಷ್ಟಿಸಿ ತಣ್ಣಗಾಗಿತ್ತು. ಇತ್ತೀಚೆಗೆ ಕಿಚ್ಚ ಸುದೀಪ್ ಇದರ ಬಗ್ಗೆ ಪ್ರತಿಕ್ರಿಯಿಸಿದ ಬೆನ್ನಲ್ಲೇ ಮತ್ತೆ ವಿವಾದದ ಕಿಚ್ಚು ಹೊತ್ತಿಕೊಂಡಿದೆ. ಡಿಕೆ ಶಿವಕುಮಾರ್ ಹೇಳಿಕೆಯನ್ನು ವೇದಿಕೆಯಲ್ಲೇ ಖಂಡಿಸಿದ್ದ ಕಿಚ್ಚ, ಎಲ್ಲ ನಟ್ಟು ಬೋಲ್ಟು ಟೈಟಾಗೇ ಇದೆ ಎಂದು ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಕೂಡ ನಾನು ಯಾವನಿಗೂ ಉತ್ತರ ಕೊಡುವುದಿಲ್ಲ ಎನ್ನುವ ಮೂಲಕ ಟಾಕ್ ವಾರ್ ಶುರು ಮಾಡಿದ್ದಾರೆ. ಮತ್ತೊಂದೆಡೆ ಕಿಚ್ಚ ಸುದೀಪ್ ಬೆನ್ನಿಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ನಿಂತಿದ್ದು, ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಟ ಸುದೀಪ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಡಿ.ಕೆ.ಶಿವಕುಮಾರ್, ನಾನು ಯಾವನ್ಗೂ ಉತ್ತರ ಕೊಡೋಕೆ ಇಷ್ಟ ಇಲ್ಲ ಎಂದು ಏಕವಚನದಲ್ಲೇ ಕೌಂಟರ್ ನೀಡಿದ್ದರು. ನಾನು ಬಿಚ್ಚೋದು ಬೇಕಿಲ್ಲ. ನಾನು ಅದರ ಬಗ್ಗೆ ಮಾತನಾಡುವುದು ಬೇಕಾಗಿಲ್ಲ, ಫಿಲಂ ಚೇಂಬರ್‌ಗೆ ಹೋಗಿ ನಿಮ್ಮ ದಾಖಲೆ ಹಾಗೂ ನಿಮ್ಮ ಹಿಸ್ಟರಿ ತೆಗೆದುಕೊಂಡು ಬನ್ನಿ, ಅವರಿಗೆಲ್ಲ ನಾನು ಉತ್ತರಿಸುವ ಅಗತ್ಯವಿಲ್ಲ, ಇದಕ್ಕೆಲ್ಲ ಕಾಲ ಉತ್ತರ ಕೊಡುತ್ತೆ ಎಂದಿದ್ದರು. ಡಿಕೆಶಿ ಹೇಳಿಕೆಗೆ ಸುದೀಪ್ ಅಭಿಮಾನಿಗಳು ಗರಂ ಆಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಡಿಸಿಎಂಗೆ ಹಣ ಕೂತಲ್ಲಿ ಬರುತ್ತೆ
ಬಿಗ್‌ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ ಡಿಕೆಶಿ ಹೇಳಿಕೆಯನ್ನು ಖಂಡಿಸಿದ್ದಾರೆ. ʼಡಿಸಿಎಂ ಆ ಹೇಳಿಕೆ ನೀಡಿದಾಗ ಯಾವ ನಟನೂ ಮಾತನಾಡಲಿಲ್ಲ, ಫಿಲಂ ಚೇಂಬರ್ ಕೂಡ ಪ್ರತಿಕ್ರಿಯೆ ಕೊಡಲಿಲ್ಲ. ಈ ನಟ್ಟು ಬೋಲ್ಟ್ ಮಾಡೋದು ರೌಡಿಸಂ ಮಾತು. ಈ ರೀತಿ ಹೆದರಿಸುವುದೇನು? ಕಾಂಗ್ರೆಸ್‌ನ ಹಲವರು ಸಿನಿಮಾರಂಗದಲ್ಲಿದ್ದಾರೆ. ಯಾರನ್ನ ಟೈಟ್ ಮಾಡ್ತೀರಾ? ಎಂದು ಪ್ರಶಾಂತ್ ಸಂಬರಗಿ ಗುಡುಗಿದ್ದಾರೆ. ನಿಮ್ಮ ಕೈಲಾದ್ರೆ ಒಂದು ಸಿನಿಮಾ ಮಾಡಿ ತೋರಿಸಿ, ನಿಮಗೆ ದುಡ್ಡು ತುಂಬಾ ಆರಾಮಾಗಿ ಬಂದಿದೆ. ನಿಮ್ಮ ದರ್ಪ, ಹಠದಿಂದ ಕೂತಲ್ಲಿಗೇ ಹಣ ಬರುತ್ತಿದೆ. ಅದು ಯಾವ ಮಾರ್ಗದಿಂದ ಅನ್ನೋದು ಮತ್ತೊಂದು ಪ್ರಶ್ನೆ. ಅವರಿಗೆ ಹಣದ ಮಹತ್ವ ಗೊತ್ತಿಲ್ಲʼ ಎಂದು ದೂರಿದ್ದಾರೆ.
ಎಲ್ಲರ ತಂಟೆಗೆ ಹೋಗಬಾರದು: ಅಶೋಕ್
ಕಿಚ್ಚ ಸುದೀಪ್ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬೆಂಬಲಿಸಿದ್ದಾರೆ. ʼಇಲ್ಲಿ ಯಾರೂ ಪರ್ಮನೆಂಟ್ ಅಲ್ಲ, ನಟ್ಟು ಬೋಲ್ಟ್ ಟೈಟ್ ಮಾಡೋಕೆ ಹೋದವರೇ ಅವರ ನಟ್ಟು ಬೋಲ್ಟೇ ಟೈಟ್ ಆಗೋಗಿದೆ. ಸಿನಿಮಾ ರಂಗ ಅನ್ನೋದು ಇಡೀ ಪ್ರಪಂಚದಲ್ಲೇ ಒಂದು ಜನರನ್ನ ಆಕರ್ಷಿಸುವ ರಂಗ, ಅಲ್ಲೂ ಕೂಡ ಅವರದ್ದೇ ಆದ ಸಮಸ್ಯೆಗಳಿರುತ್ತೆ, ಏಳುಬೀಳುಗಳಿರುತ್ತೆ. ಅವರ ಸಮಸ್ಯೆಗಳ ಬಗ್ಗೆ ಅವರಿಗೆ ಮಾತ್ರವೇ ಗೊತ್ತಿರುತ್ತೆ. ರಾಜಕಾರಣದಲ್ಲಿರುವ ನಮಗೆ ರಾಜಕಾರಣದ ಬಗ್ಗೆ ಗೊತ್ತು, ರೈತನಿಗೆ ಅವನ ಸಮಸ್ಯೆ ಗೊತ್ತಿರುತ್ತೆ, ನಮಗೇನು ಗೊತ್ತೋ ಅದರ ಬಗ್ಗೆ ನಾವು ಮಾತನಾಡಬೇಕುʼ ಎಂದು ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.
ʼನಾವು ದೇಶದಲ್ಲಿರುವ ಎಲ್ಲ ರಂಗಗಳ ನಟ್ಟು ಬೋಲ್ಟನ್ನ ಟೈಟ್ ಮಾಡೋಕೆ ಹೋದ್ರೆ, ಜನ ನಮ್ಮ ನಟ್ ಬೋಲ್ಟ್ ಟೈಟ್ ಮಾಡ್ತಾರೆ. ಹಾಗಾಗಿ ಏನೇ ಮಾತನಾಡಿದ್ರೂ ಎಚ್ಚರಿಕೆಯಿಂದ ಮಾತನಾಡಬೇಕು. ಬೇರೆಯವರ ಬಗ್ಗೆ ಕಾಮೆಂಟ್ ಮಾಡೋಕೆ ಹೋದ್ರೆ ನಿಮ್ ಬಗ್ಗೆ ಜನ ಕಾಮೆಂಟ್ ಮಾಡ್ತಾರೆ. ಹಾಗಾಗಿ ನಟ ಸುದೀಪ್ ಏನ್ ಹೇಳಿದ್ದಾರೋ ಅದು ಸತ್ಯ. ಅವರ ಮಾತನ್ನ ನಾನು ಒಪ್ಪಿಕೊಳ್ತೀನಿ, ಆಯಾ ರಂಗದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಅವರ ಕಷ್ಟ ಗೊತ್ತಿರುತ್ತೆ. ಅವರಿಗೆ ಏನಾದ್ರೂ ಲಾಸ್ ಆದ್ರೆ ನೀವೇನಾದ್ರೂ ಕಟ್ಟಿಕೊಡ್ತೀರಾ? ಅವರ ಕಷ್ಟ ಸುಖವನ್ನ ಅವರೇ ಅನುಭವಿಸಬೇಕುʼ ಎಂದು ಅಶೋಕ್ ಹೇಳಿದ್ದಾರೆ.












Click it and Unblock the Notifications