Mohini Dey: ಎ.ಆರ್. ರಹಮಾನ್ ನನಗೆ ತಂದೆಯಿದ್ದಂತೆ; ಗಾಸಿಪ್ ಬಗ್ಗೆ ಮೋಹಿನಿ ಡೇ ಆಕ್ರೋಶ
ಭಾರತ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಚೇದನ ಪಡೆದು ಬೇರೆಯಾಗಿದ್ದಾರೆ. ರೆಹಮಾನ್ ವಿಚ್ಛೇದನ ಸುದ್ದಿ ಹೊರಬಂದ ಕೆಲವು ಗಂಟೆಗಳಲ್ಲೇ ಅವರ ಸಂಗೀತ ತಂಡದಲ್ಲಿ ಬ್ಯಾಸಿಸ್ಟ್ ಆಗಿ ಕೆಲಸ ಮಾಡುವ ಮೋಹಿನಿ ಡೇ ಕೂಡ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಣೆ ಮಾಡಿದ್ದರು. ಇದು ಸಾಕಷ್ಟು ಗಾಸಿಪ್‌ಗಳಿಗೆ ಕಾರಣವಾಗಿತ್ತು. ರೆಹಮಾನ್ ತಂಡದಲ್ಲಿ ಮೋಹಿನಿ ಡೇ ಕೆಲಸ ಮಾಡುವುದರಿಂದ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಆದರೆ ಮೋಹಿನಿ ಡೇ ಈಗ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಸಂಗೀತಗಾರ ಎಆರ್ ರೆಹಮಾನ್ ಅವರೊಂದಿಗಿನ ಸಂಬಂಧದ ವದಂತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎ.ಆರ್ ರೆಹಮಾನ್ ಜೊತೆ 8.5 ವರ್ಷಗಳ ಕಾಲ ಬಾಸಿಸ್ಟ್ ಆಗಿ ಕೆಲಸ ಮಾಡಿದ್ದೇನೆ, ಕಳೆದ ಐದು ವರ್ಷದ ಹಿಂದೆ ತಾನು ಯುಎಸ್‌ಗೆ ಶಿಫ್ಟ್ ಆಗಿದ್ದೇನೆ. ಯುಎಸ್‌ನಲ್ಲಿ ಅನೇಕ ಪಾಪ್ ಕಲಾವಿದರ ಜೊತೆ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ, ಆದರೆ ಇದು ನನ್ನ ವೈಯಕ್ತಿಕ ವಿಚಾರವಾಗಿರುವ ಕಾರಣ ಎಲ್ಲರೂ ಮಿತಿಯಲ್ಲಿ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.

ಹಲವು ದಿನಗಳಿಂದ ಈ ವದಂತಿಗಳು ಹರಿದಾಡುತ್ತಿದ್ದರೂ, ಅದರ ಬಗ್ಗೆ ಸ್ಪಷ್ಟನೆ ಕೊಡಲು ಮೋಹಿನಿ ಡೇ ತಡ ಮಾಡಿದ್ದೇಕೆ ಎನ್ನುವ ಬಗ್ಗೆ ಕೂಡ ಹೇಳಿದ್ದಾರೆ. ಇಷ್ಟು ದಿನ ಹಲವು ಸಂಗೀತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಕಾರಣ ಸ್ಪಷ್ಟನೆ ನೀಡುವುದು ತಡವಾಗಿದೆ ಎಂದರು.
ರೆಹಮಾನ್ ನನ್ನ ತಂದೆಯಿದ್ದಂತೆ
ವಿಡಿಯೋದಲ್ಲಿ ಎಆರ್ ರೆಹಮಾನ್ ನನಗೆ ತಂದೆಯಿದ್ದಂತೆ, ನಾನು ಅವರ ಮಗಳ ವಯಸ್ಸಿನವಳು ಎಂದು ಹೇಳಿದ್ದಾರೆ. ಚಲನಚಿತ್ರ ಮತ್ತು ಸಂಗೀತ ಕಾರ್ಯಕ್ರಮಗಳಲ್ಲಿ ರೆಹಮಾನ್ ಜೊತೆ ನಾನು ಕೆಲಸ ಮಾಡಿದ್ದೇನೆ. ಅವರ ಜೊತೆ ಕೆಲಸ ಮಾಡಿದ್ದ ಸಮಯವನ್ನು ನಾನು ಗೌರವಿಸುತ್ತೇನೆ. ಭಾವನಾತ್ಮಕ ವಿಚರಗಳ ಬಗ್ಗೆ ಜನರಿಗೆ ಗೌರವ, ಸಹಾನುಭೂತಿ ಇಲ್ಲ ಎನ್ನುವುದು ಬೇಸರದ ಸಂಗತಿ. ಮಾಧ್ಯಮಗಳಲ್ಲಿ ಈ ಬಗ್ಗೆ ಕೆಟ್ಟದಾಗಿ ವರದಿ ಮಾಡಿರುವುದು ಅಪರಾಧ ಎನಿಸುತ್ತದೆ ಎಂದು ಹೇಳಿದ್ದಾರೆ.
ಎ.ಆರ್. ರೆಹಮಾನ್ ಸಂಗೀತ ಲೋಕದ ದಂತಕಥೆ, ಅವರು ನನಗೆ ತಂದೆಯಂತೆಯೇ ಇದ್ದಾರೆ. ನನ್ನ ವೃತ್ತಿಜೀವನ ಮತ್ತು ಪಾಲನೆಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ಅನೇಕ ರೋಲ್ ಮಾಡೆಲ್‌ಗಳಲ್ಲಿ ಅವರು ಒಬ್ಬರು. ನನಗೆ ಸಂಗೀತ ಕಲಿಸಿದ ನನ್ನ ತಂದೆ, ಉದ್ಯಮಕ್ಕೆ ಪರಿಚಯಿಸಿದ ರಂಜಿತ್, ಅವರ ಸಂಗೀತ ಕಾರ್ಯಕ್ರಮಗಳಲ್ಲಿ ಮಿಂಚಲು ಅವಕಾಶ ಮಾಡಿಕೊಟ್ಟಿ ಎಆರ್ ರೆಹಮಾನ್ ನನಗೆ ತಂದೆಯಿದ್ದಂತೆ ಎಂದರು.
ಜನರ ಮನಸ್ಸು ಮತ್ತು ಜೀವನದ ಮೇಲೆ ಬೀರುವ ಪರಿಣಾಮದ ಬಗ್ಗೆ ಮಾಧ್ಯಮಗಳು ಅರ್ಥಮಾಡಿಕೊಳ್ಳುವುದಿಲ್ಲ. ನಾನು ಯಾರಿಗೂ ಯಾವುದೇ ವಿವರಣೆಯನ್ನು ನೀಡಬೇಕಾಗಿತ್ತ. ನನ್ನ ದಿನವನ್ನು ಹಾಳು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಇದನ್ನೆಲ್ಲ ಇಲ್ಲಿಗೆ ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ.
ನವೆಂಬರ್ 19 ರಂದು, ಎಆರ್ ರೆಹಮಾನ್ ಮತ್ತು ಪತ್ನಿ ಸಾಯಿರಾ ಬಾನು 29 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನ ಪಡೆದರು. ಮೋಹಿನಿ ಡೇ ಪತಿ ಮಾರ್ಕ್‌ನಿಂದ ವಿಚ್ಛೇದನ ಘೋಷಿಸಿದರು. ಇದು ರೆಹಮಾನ್ ಜೊತೆಗಿನ ಸಂಬಂಧದ ಬಗ್ಗೆ ವದಂತಿಗಳಿಗೆ ಕಾರಣವಾಗಿತ್ತು.











Click it and Unblock the Notifications