ನನಗೆ ನಟಿ ತ್ರಿಶಾ ಮೇಲೆ ಕ್ರಶ್, ಇದನ್ನ ಹೇಳಿದ್ರೆ ಸಮಸ್ಯೆಯಾಗುತ್ತೆ: ಸಂದರ್ಶನದಲ್ಲೇ ತಡಬಡಾಯಿಸಿದ ಖ್ಯಾತ ನಟ
ಇತ್ತೀಚೆಗಷ್ಟೇ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ದಳಪತಿ ವಿಜಯ್ ಮತ್ತು ಬಹುಭಾಷಾ ನಟಿ ತ್ರಿಶಾ ಕೃಷ್ಣನ್ (Trisha) ಅವರ ನಡುವಿನ ಆಪ್ತತೆಯ ಕುರಿತು ಚಿತ್ರರಂಗದಲ್ಲಿ ಸಾಲು ಸಾಲು ವದಂತಿಗಳು ಹರಿದಾಡುತ್ತಲೇ ಇವೆ. ಈ ಇಬ್ಬರ ಸ್ನೇಹದ ಕಾರಣದಿಂದಲೇ ವಿಜಯ್ ಪತ್ನಿಯಿಂದ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಹೊಸ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ಖ್ಯಾತ ನಟನೊಬ್ಬ ತ್ರಿಶಾ ನನ್ನ ಕ್ರಶ್ ಎನ್ನುವ ಮೂಲಕ ಸುದ್ದಿಯಲ್ಲಿದ್ದಾರೆ.
ವಿಜಯ್ ಪತ್ನಿ ಸಂಗೀತಾ ಅವರು ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂಬ ಸುದ್ದಿ ಹೊರಬಂದ ಸಮಯದಲ್ಲೇ ತ್ರಿಶಾ ಹಾಗೂ ವಿಜಯ್ ಮದುವೆಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ತಮಿಳುನಾಡು ಚುನಾವಣಾ ಫಲಿತಾಂಶ, ಸಿಎಂ ಆಗಿ ಪ್ರಮಾಣವಚನದ ಸಂದರ್ಭದಲ್ಲಿಯೂ ತ್ರಿಶಾ ಮಿಂಚಿದ್ದರು. ಇದರ ನಡುವೆ ಮಲಯಾಳಂ ಚಿತ್ರರಂಗದ ಖ್ಯಾತ ಬಹುಮುಖ ಪ್ರತಿಭೆ, ನಟ ಹಾಗೂ ನಿರ್ದೇಶಕ ಬೆಸಿಲ್ ಜೋಸೆಫ್ (Basil Joseph) ಅವರು ನೀಡಿದ ಸಂದರ್ಶನವೊಂದರಲ್ಲಿ ನಟಿ ತ್ರಿಶಾ ಅವರ ಕುರಿತು ಆಡಿರುವ ಮಾತುಗಳು ಈಗ ಕಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

"ಹೇಳಿದರೆ ದೊಡ್ಡ ಸಮಸ್ಯೆಯಾಗುತ್ತೆ" ಎಂದ ನಟ
ತಮ್ಮ ಮುಂಬರುವ ಹೊಸ ಸಿನಿಮಾದ ಪ್ರಚಾರದ ಭಾಗವಾಗಿ ಮಲಯಾಳಂ ನಟ ಬೆಸಿಲ್ ಜೋಸೆಫ್ ಅವರು ತಮಿಳು ಮಾಧ್ಯಮವೊಂದಕ್ಕೆ ವಿಶೇಷ ಸಂದರ್ಶನ ನೀಡಿದ್ದರು. ಈ ವೇಳೆ ನಿರೂಪಕರು, "ನಿಮ್ಮ ಸೆಲೆಬ್ರಿಟಿ ಕ್ರಶ್ ಯಾರು?" ಎಂದು ಪ್ರಶ್ನಿಸಿದ್ದಾರೆ. ಈ ಸಣ್ಣ ಪ್ರಶ್ನೆಗೆ ಬೆಸಿಲ್ ತಕ್ಷಣವೇ ಉತ್ತರಿಸದೆ ಸ್ವಲ್ಪ ರಹಸ್ಯ ಕಾಯ್ದುಕೊಳ್ಳಲು ಯತ್ನಿಸಿದರು. ಮೊದಲಿಗೆ ಈ ರಹಸ್ಯ ಬಿಚ್ಚಿಡಲು ಹಿಂದೇಟು ಹಾಕಿದ ಬೆಸಿಲ್, "ಇದನ್ನು ನಾನು ಈಗ ಈ ವೇದಿಕೆಯಲ್ಲಿ ಹೇಳಬೇಕೋ ಅಥವಾ ಬೇಡವೋ ಗೊತ್ತಿಲ್ಲ. ಒಂದು ವೇಳೆ ನಾನು ಆ ನಟಿಯ ಹೆಸರನ್ನು ಹೇಳಿದರೆ ದೊಡ್ಡ ಸಮಸ್ಯೆಯಾಗಬಹುದು" ಎಂದು ತಮಾಷೆಯಾಗಿಯೇ ಭಯಪಟ್ಟಿದ್ದಾರೆ.
#BasilJoseph in recent interview!
— shruthi (@shruthisundar01) May 22, 2026
Says his "romba crush" is #Trisha 😍🫶🏻🤍🤍🤍..
Favourites for all the gen! For decades!
🫶🏻🤍💯 #Southqueen #Trisha 👸🏻👑 #TrishaKrishnan @trishtrashers 🤍🤍🤍 pic.twitter.com/kXlAoagpmZ
ಕೊನೆಗೂ ಧೈರ್ಯ ಮಾಡಿ 'ತ್ರಿಶಾ' ಹೆಸರು ಹೇಳಿದ ಬೆಸಿಲ್
ನಿರೂಪಕರ ಒತ್ತಾಯದ ನಂತರ ಕೊನೆಗೂ ಧೈರ್ಯ ಮಾಡಿದ ನಟ ಬೆಸಿಲ್ ಜೋಸೆಫ್, "ನನಗೆ ನಟಿ ತ್ರಿಶಾ ಕೃಷ್ಣನ್ ಎಂದರೆ ಸಿಕ್ಕಾಪಟ್ಟೆ ಇಷ್ಟ ಮತ್ತು ಅವರ ಮೇಲೆ ಕ್ರಶ್ ಇತ್ತು" ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಆದರೆ, ತಮಿಳುನಾಡಿನ ಪ್ರಸ್ತುತ ರಾಜಕೀಯ ಮತ್ತು ಸಿನಿಮಾ ವಿದ್ಯಮಾನಗಳ ಸೂಕ್ಷ್ಮತೆ ಅರಿತಿದ್ದರಿಂದ ತಕ್ಷಣವೇ ಎಚ್ಚೆತ್ತುಕೊಂಡ ಬೆಸಿಲ್, "ಆದರೆ ಆ ಕ್ರಶ್ ಕೇವಲ ಹಳೆಯ ದಿನಗಳಲ್ಲಿ ಇತ್ತು, ಈಗ ಇಲ್ಲ" ಎಂದು ನಗುತ್ತಲೇ ಸ್ಪಷ್ಟನೆ ನೀಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
ಸಾಮಾನ್ಯವಾಗಿ ನಟ-ನಟಿಯರು ತಮ್ಮ ಹಳೆಯ ಕ್ರಶ್‌ಗಳ ಬಗ್ಗೆ ಮಾತನಾಡುವುದು ಸಹಜ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ತ್ರಿಶಾ ಅವರ ಹೆಸರು ಕಾಲಿವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿರುವುದರಿಂದ ಈ ವಿಡಿಯೋ ಇಷ್ಟೊಂದು ವೈರಲ್ ಆಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಮತ್ತು ತ್ರಿಶಾ ಅವರ ಸ್ನೇಹದ ಕುರಿತು ತಮಿಳು ಮಾಧ್ಯಮಗಳು ದಿನಕ್ಕೊಂದು ಸುದ್ದಿ ಬಿತ್ತರಿಸುತ್ತಿವೆ. ಅದಕ್ಕೆ ಪೂರಕವೆಂಬಂತೆ ತ್ರಿಶಾ ಹಾಗೂ ಅವರ ಆಪ್ತ ಸ್ನೇಹಿತರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಕೆಲವು ಪೋಸ್ಟ್‌ಗಳು ಮತ್ತು ಹಿಂಟ್‌ಗಳು ಈ ವದಂತಿಗಳಿಗೆ ಮತ್ತಷ್ಟು ತುಪ್ಪ ಸಾರುತ್ತಿವೆ. ಇಂತಹ ಬಿಸಿಯೇರಿದ ವಾತಾವರಣದ ನಡುವೆಯೇ ಬೆಸಿಲ್ ಜೋಸೆಫ್ ಅವರ ಈ ಹಳೆಯ ಕ್ರಶ್ ವಿಡಿಯೋ ಮುನ್ನೆಲೆಗೆ ಬಂದಿದ್ದು, ನೆಟ್ಟಿಗರು ಹಾಗೂ ತಮಿಳು ಪ್ರೇಕ್ಷಕರು ಈ ವಿಡಿಯೋ ಕ್ಲಿಪ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಶೇರ್ ಮಾಡುತ್ತಿದ್ದಾರೆ.













Click it and Unblock the Notifications