Viral Monalisa: ನಟ ಶಿವರಾಜ್ ಕುಮಾರ್ ಸಿನಿಮಾದಲ್ಲಿ ಕುಂಭ ಮೇಳದ ವೈರಲ್ ಬೆಡಗಿ ನಟನೆ ಫಿಕ್ಸ್?
ಬೆಂಗಳೂರು, ಜನವರಿ 22: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರಲು ಬಂದ ಇಂದೋರ್ ಯುವತಿ ಮೊನಾಲಿಸಾ ಭೋಸ್ಲೆ (Monalisa Bhosle Viral in Maha Kumbha Mela 2025) ಫೋಟೋಗಳು, ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಇದರ ಬೆನ್ನಲ್ಲೆ ಆಕೆಗೆ ಬಾಲಿವುಡ್‌ನಿಂದ ಸಿನಿಮಾದಲ್ಲಿ ನಟನೆಗೆ ಆಫರ್ ಬಂದಿದೆ ಎನ್ನಲಾಗಿದೆ. ಇದೀಗ ಕನ್ನಡದ ನಟ ಶಿವರಾಜ್ ಕುಮಾರ್ ಅವರ ಸಿನಿಮಾದಲ್ಲೂ ಮೊನಾಲಿಸಾ ಅವಕಾಶ ಪಡೆದಿದ್ದಾಳೆ ಎಂಬ ಸುದ್ದಿ ಹರಿದಾಡುತ್ತಿದೆ.
ಹೌದು, ಜೇನುಗಣ್ಣಿನ ಚೆಲುವೆ ಫೋಟೋ ಮತ್ತು ಆನ್‌ಲೈನ್‌ನಲ್ಲಿ ಅಪ್ಲೋಡ್ ಆಗಿದ್ದೇ ತಡ, ರಾತ್ರೋ ರಾತ್ರಿ ಈ ಯುವತಿ ಮೊನಾಲಿಸಾ ಭಾರೀ ಫೆಮಸ್ ಆಗಿದ್ದಾಳೆ. ರುದ್ರಾಕ್ಷಿ ಮಾರಲು ಕುಟುಂಬ ಸಮೇತರಾಗಿ ಬಂದಿದ್ದ ಈಕೆಯ ಫೋಟೋವನ್ನು ಒಂದಷ್ಟು ಸಾಮಾಜಿಕ ಜಾಲತಾಣ ಬಳಕೆದಾರರು ಅಪ್ಲೋಡ್ ಮಾಡಿದ್ದಾರೆ. ಆಕೆಯ ಹೆಸರಿನಲ್ಲಿ ಐಡಿ ಕ್ರಿಯೆಟ್ ಮಾಡಿಕೊಂಡು, ಆಕೆಯ ಫೋಟೋ ಬಳಸಿ ಖ್ಯಾತಿ ಗಳಿಸುತ್ತಿದ್ದಾರೆ.

ಇಷ್ಟು ಮಾತ್ರವಲ್ಲದೇ ಮಾಧ್ಯಮದವರು ಈ ಸುಂದರ ಯುವತಿ ಮೊನಾಲಿಸಾ ಬಗ್ಗೆ ಮೇಲಿಂದ ಮೇಲೆ ವರದಿ ಮಾಡುತ್ತಿದ್ದಾರೆ. ಈ ಮಧ್ಯೆ ಆಕೆಗೆ ಹಿಂದಿ ಸಿನಿಮಾದಲ್ಲಿ ನಟಿಸಲು ಅವಕಾಶ ದೊರೆತಿದೆ ಎನ್ನಲಾಗಿದೆ. ಅದರ ಬೆನ್ನಲ್ಲೆ ಟಾಲಿವುಡ್‌ನಿಂದ ಮೊನಾಲಿಸಾಗೆ ಬಿಗ್ ಆಫರ್ ಬಂದಿದೆ.
ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಅವರ 'RC16' ಸಿನಿಮಾ ಸೆಟ್ಟೆರಲಿದೆ. ಇದರಲ್ಲಿ ಕನ್ನಡದ ನಟ ಶಿವರಾಜ್ ಕುಮಾರ್ ಅವರ ಸಹ ನಟಿಸುತ್ತಿದ್ದಾರೆ. ಈ ಎರಡು ಘಟಾನುಘಟಿ ನಟರ ಎದುರು ಈ ವೈರಲ್ ಬೆಡಗಿ ಮೊನಾಲಿಸಾ ಭೋಸ್ಲೆ ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ರಾಮ್ ಚರಣ್ ನಟನೆಯ 'ಗೇಮ್ ಚೇಂಜರ್' ಅಷ್ಟಾಗಿ ಹೆಸರು ಮಾಡಲಿಲ್ಲ. ಇದೀಗ ರಾಮ್ ಚರಣ್ ತಮ್ಮ ಮುಂದಿನ ಪ್ರಾಜೆಕ್ ಮೇಲೆ ಗಮನ ಹರಿಸಿದ್ದಾರೆ. ಈ ಸಿನಿಮಾಗೆ ಬುಚ್ಚಿ ಬಾಬು ನಿರ್ದೇಶನ ಇದೆ. ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಲಿದ್ದಾರೆ. ಸಿನಿಮಾಗೆ ಮೈತ್ರಿ ಮೂವಿ ಮೇಕರ್ಸ್ ಸೇರಿದಂತೆ ಮೂವರು ಬಂಡವಾಳ ಹೂಡಲಿದ್ದಾರೆ. ರಾಮ್‌ಚರಣ್‌ಗೆ ನಾಯಕಿಯಾಗಿ ನಟಿ ಜಾನ್ವಿ ಕಪೂರ್ ಆಯ್ಕೆ ಆಗಿದ್ದು, ಇದರಲ್ಲಿಯೇ ಕನ್ನಡದ ನಟ ಶಿವಣ್ಣ ನಟಿಸಲಿದ್ದಾರೆ.
ಈ ಬಹುತಾರಾಗಣ ಇರುವ 'RC16' ಸಿನಿಮಾದಲ್ಲಿ ವೈರಲ್ ಬೆಡಗಿ ಮೊನಾಲಿಸಾ ಭೋಸ್ಲೆ ಅವಕಾಶ ಪಡೆದುಕೊಂಡಿದ್ದಾಳೆ. ಶಿವಣ್ಣ ಎದುರು ಮೊನಾಲಿಸಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಸಿನಿಮಾ ಮುಂದಿನ ದಸರಾ ಹಬ್ಬಕ್ಕೆ ಬಿಡುಗಡೆ ಆಗುವ ನಿರೀಕ್ಷೆಗಳು ಇವೆ.












Click it and Unblock the Notifications