ನಟ ವಿಜಯ್ ಅಭಿನಯದ 'ಜನನಾಯಗನ್' ಚಿತ್ರ ಬಿಡುಗಡೆಗೆ ಕೋರ್ಟ್ ಗ್ರೀನ್ ಸಿಗ್ನಲ್
Jana Nayagan Movie: ನಟ ದಳಪತಿ ವಿಜಯ್ ನಟನೆಯ ತಮಿಳು ಸಿನಿಮಾ 'ಜನನಾಯಗನ್'ಗೆ ತಕ್ಷಣವೇ ಯು/ಎ ಪ್ರಮಾಣಪತ್ರ ನೀಡುವಂತೆ ಕೇಂದ್ರ ಚಲನಚಿತ್ರ ಮಂಡಳಿಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ (ಜನವರಿ 9) ನಿರ್ದೇಶನ ನೀಡಿದೆ.
ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ 'ಜನ ನಾಯಗನ್' ಚಿತ್ರ ಬಿಡುಗಡೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಸೆನ್ಸಾರ್ ಕುರಿತ ಅಂಶಗಳು ಚಿತ್ರ ಬಿಡುಗಡೆಗೆ ಅಡ್ಡಿಯಾಗಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮದ್ರಾಸ್ ಹೈಕೋರ್ಟ್ 'ಜನನಾಯಗನ್'ಗೆ ತಕ್ಷಣವೇ ಯು/ಎ ಪ್ರಮಾಣಪತ್ರ ನೀಡುವಂತೆ ಸೂಚಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

'ಜನನಾಯಗನ್' ಸಿನಿಮಾ ಇಂದು ಅಂದರೆ ಜನವರಿ 9ರಂದು ವಿಶ್ವಾದಾದ್ಯಂತ ಅದ್ಧೂರಿಯಾಗಿ ತೆರೆ ಕಾಣಬೇಕಿತ್ತು. ಚಿತ್ರ ಬಿಡುಗಡೆಗೆ ಸಕಲ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಸೆನ್ಸಾರ್ ಮಂಡಳಿ ಹಾಗೂ ಸಿನಿಮಾದ ನಡುವಿನ ಗೊಂದಲ ಇದ್ದ ಕಾರಣ ಅಂದುಕೊಂಡ ದಿನ ರಿಲೀಸ್ ಆಗಿರಲಿಲ್ಲ. ಕೋರ್ಟ್‌ನಲ್ಲಿ ಈ ಬಗ್ಗೆ ಇಂದು ವಿಚಾರಣೆ ನಡೆದಿದ್ದು, ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ.
ವಿಜಯ್ ನಟನೆಯ 'ಜನನಾಯಗನ್' ಚಿತ್ರತಂಡ ಮೊದಲ ಬಾರಿ ಸೆನ್ಸಾರ್‌ಗೆ ಸಿನಿಮಾ ತೋರಿಸಿದ ನಂತರ ಕೆಲವು ತಿದ್ದುಪಡಿಗಳನ್ನು ಮಾಡುವಂತೆ ಸೂಚನೆ ನೀಡಲಾಗಿತ್ತು. ಸೆನ್ಸಾರ್ ಮಂಡಳಿ ಸೂಚನೆ ಮೇರೆಗೆ ಬದಲಾವಣೆ ಮಾಡಿ ಮರು ವೀಕ್ಷಣೆಗೆ ನೀಡಲಾಗಿತ್ತು. ಆದರೂ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಪ್ರಮಾಣ ಪತ್ರ ನೀಡಿರಲಿಲ್ಲ.
ಈ ಹಿನ್ನೆಲೆ ಸೆನ್ಸಾರ್ ಮಂಡಳಿ ಮತ್ತು ಚಿತ್ರತಂಡದ ನಡುವೆ ಗೊಂದಲಗಳು ಸೃಷ್ಟಿಯಾಗಿದ್ದು, ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಚೆನ್ನೈ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ತೀರ್ಪನ್ನು ಜನವರಿ 9ರಂದು ಮುಂದೂಡಿಕೆ ಮಾಡಲಾಗಿತ್ತು. ಇನ್ನೂ ಇಂದು ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್ ಸಿನಿಮಾ ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ.
ಇಂತಹ ದೂರುಗಳಿಗೆ ಉತ್ತೇಜನ ನೀಡುವುದು ಅಪಾಯಕಾರಿ ಪ್ರವೃತ್ತಿ. 'ಜನ ನಾಯಗನ್' ವಿರುದ್ಧ ಸಿನಿಮಾ ವಿರುದ್ಧ ಮೊದಲು ದೂರು ನೀಡಿ, ನಂತರ ಚಿಂತನೆ ಮಾಡುತ್ತಿರುವಂತೆ ತೋರುತ್ತದೆ ಎಂದು ಸೆನ್ಸಾರ್ ಮಂಡಳಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.
'ಜನ ನಾಯಗನ್' ತಮ್ಮ ಕೊನೆಯ ಸಿನಿಮಾ ಎಂದು ಈಗಾಗಲೇ ವಿಜಯ್ ಮಲೇಷ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಆದ್ದರಿಂದ ಅಭಿಮಾನಿಗಳು ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಇನ್ನೂ ಇದೀಗ ಕೋರ್ಟ್ ಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಜನವರಿ 14ರಂದು 'ಜನ ನಾಯಗನ್' ಚಿತ್ರ ಕೇರಳದಲ್ಲಿ ಬಿಡುಗಡೆ ಆಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.












Click it and Unblock the Notifications