ಸಿನಿಮಾ ಚಾನ್ಸ್‌ಗಾಗಿ ಕಮಿಂಟ್‌ಮೆಂಟ್ ನೇರವಾಗಿ ಕೇಳಿದ್ರು: 'ಲಕ್ಷ್ಮೀ ಬಾರಮ್ಮ' ನಟಿಗೆ ಕೆಟ್ಟ ಅನುಭವ!
ಖ್ಯಾತ ಕಿರುತೆರೆ, ಹಿರಿತೆರೆ ನಟಿ ಲಕ್ಷ್ಮಿ ಸಿದ್ದಯ್ಯ (Lakshmi Siddaiah) ಅವರು 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಯಾಗಿ, ಪೋಷಕ ನಟಿಯಾಗಿ, ಖಳನಟಿ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಬಳಿಕ ಸಿನಿಮಾಗಳಲ್ಲಿಯೂ ಮಿಂಚಿರುವ ಅವರು ತಮ್ಮ ಕಲಾಪ್ರತಿಭೆಯಿಂದ ಕನ್ನಡಿಗರ ಮನೆಮಾತಾಗಿದ್ದಾರೆ. ಜನಪ್ರಿಯ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಲಕ್ಷ್ಮಿ ಅವರು ಸೀರಿಯಲ್‌ಗೆ ಬರುವ ಮುನ್ನವೇ ಸಿನಿಮಾರಂಗಕ್ಕೆ ಹೋಗಬೇಕು ಎನ್ನುವ ಕನಸು ಕಂಡಿದ್ದವರು. ಆದರೆ ಸಿನಿಮಾದಲ್ಲಿ ಚಾನ್ಸ್ ಸಿಕ್ಕಾಗ ಆದ ಕಹಿ ಘಟನೆಯೊಂದನ್ನು ಅವರು ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
'ಚಿಕ್ಕ ವಯಸ್ಸಿನಲ್ಲೇ ಸೀರಿಯಲ್‌ಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ನಮ್ಮ ತಾಯಿಯನ್ನ ಹೊರಗೆ ಹಾಕಿದ್ದಕ್ಕೆ ಆಗ ನಾನು ಬದುಕಿ ತೋರಿಸ್ತೀನಿ ಅಂತ ನಮ್ಮ ತಂದೆ ಮೇಲೆ ಚಾಲೆಂಜ್ ಹಾಕಿದ್ದೆ. 'ಬಿದಿಗೆ ಚಂದ್ರಮ' ಸೀರಿಯಲ್‌ನಲ್ಲಿ ಲೀಡ್ ರೋಲ್, ಮೂವತ್ತು ಸೀರಿಯಲ್ ಮಾಡಿರಬಹುದು' ಎಂದು "ನ್ಯೂಸೋ ನ್ಯೂಸು ಕರಿಕಥೆ" ಸಂದರ್ಶನದಲ್ಲಿ ತಮ್ಮ ಕಲಾಬದುಕನ್ನು ಮೆಲುಕು ಹಾಕಿದ್ದಾರೆ.

'ನನಗೆ ನಾಯಕಿ ಪಾತ್ರಕ್ಕಿಂತ ವಿಲನ್ ಪಾತ್ರವೇ ಹೆಚ್ಚು ಇಷ್ಟ. ಅಲ್ಲಿ ನಟನೆ ಮಾಡೋಕೆ ತುಂಬಾ ಸ್ಪೇಸ್ ಸಿಗುತ್ತೆ. ಅಲ್ಲಿ ಎಷ್ಟು ಬೇಕಾದ್ರೂ ತಿದ್ದಿಕೊಂಡು ಪಾತ್ರವನ್ನು ಉತ್ತಮಪಡಿಸಿಕೊಳ್ಳಹುದು. ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ತುಂಬಾ ಸಿಟ್ಟಿನ ಪಾತ್ರ ನನ್ನದು. ಅಲ್ಲಿ ಸೆಟ್‌ನಲ್ಲಿ ಲಕ್ಸ್, ಲಚ್ಚು ಅಂತೆಲ್ಲ ಮುದ್ದಾಗಿ ಕರೀತಿದ್ರು. ಲಕ್ಷ್ಮಿ ಬಾರಮ್ಮ ನನ್ನ ಫೇವರೇಟ್ ಸೆಟ್' ಎಂದಿದ್ದಾರೆ.
'ಜಗಳ, ಕಾಮಿಡಿ, ವಿಲನ್ ಪಾತ್ರ ತುಂಬಾ ಇಷ್ಟ. ಆದರೆ ನನ್ನ ನಾಯಕಿ ಪಾತ್ರ ನೋಡಿ ನನಗೆ ಆಗ ಸಂದರ್ಶನಗಳಲ್ಲಿ ಅಳುಮುಂಜಿ ಲಕ್ಷ್ಮಿ ಎಂದು ಬರೀತಿದ್ರು. ಆಗ ನಾನು ನೆಗೆಟಿವ್ ರೋಲ್ ಮಾಡಬೇಕು ಅನಿಸಿತು. ಅದೇ ವೇಳೆ ಬಾ ನನ್ನ ಸಂಗೀತ ಸೀರಿಯಲ್‌ನಲ್ಲಿ ಮನೆಹಾಳಿ ನೆಗೆಟಿವ್ ಪಾತ್ರ ಸಿಕ್ಕಿತು. ಅದನ್ನ ತುಂಬಾ ಎಂಜಾಯ್ ಮಾಡಿಕೊಂಡು ನಿರ್ವಹಿಸಿದೆ. ಅದು ತುಂಬಾ ಕ್ಲಿಕ್ ಆಯ್ತು. ಆಗ ನನ್ನ ಯಾಮಿನಿ ಎಂದೇ ಜನ ಗುರುತಿಸುತ್ತಿದ್ರು. ಜನ ಕೂಡ ನನ್ನ ನಾಯಕಿ, ವಿಲನ್ ಪಾತ್ರಗಳನ್ನು ಮೆಚ್ಚಿಕೊಂಡಿದ್ದರು. ವಿಲನ್ ಪಾತ್ರ ಚೆನ್ನಾಗಿ ಮಾಡ್ತೀರಾ ಅಂತಿದ್ರು' ಎಂದು ನೆನೆದಿದ್ದಾರೆ.
ಎಲ್ಲರ ಜೊತೆ ಕಮಿಟ್‌ಮೆಂಟ್ ಅಂದ್ರು!
'ನಾನು ಸೀರಿಯಲ್‌ಗೆ ಬರುವ ಮುನ್ನ ಸಿನಿಮಾಗಳಿಗೆ ಪ್ರಯತ್ನಪಟ್ಟಿದ್ದೆ. ಆಗ ನನಗೆ ಕೆಲ ಕೆಟ್ಟ ಅನುಭವಗಳಾಯಿತು. ಹೆಣ್ಣುಮಕ್ಕಳು ಅಂದ್ರೆ ಅಲ್ಲಿ ಕಮಿಟ್‌ಮೆಂಟ್ ಇರಬೇಕು ಅಂತ ನೇರವಾಗಿ ಹೇಳಿದ್ರು. ಡೈರೆಕ್ಟರ್ ಜೊತೆ, ಪ್ರೊಡ್ಯೂಸರ್, ಕ್ಯಾಮರಾಮನ್ ಜೊತೆ ಅಂತೆಲ್ಲ ಡೈರೆಕ್ಟಾಗಿ ಹೇಳಿದ್ರು. ಆಗ ನಾನಿನ್ನೂ ಸಣ್ಣವಳು. ಆಗ ನಾನು ಅದೆಲ್ಲ ಆಗಲ್ಲ ಅಂತ ಸಿನಿಮಾ ಆಸೆಯನ್ನೇ ಬಿಟ್ಟೆ. ಆ ಮೇಲೆ ಸೀರಿಯಲ್‌ಗಳಿಗೆ ಬಂದಾಗ ತುಂಬಾ ಇಷ್ಟ ಆಯ್ತು. ಅದೊಂದು ಫ್ಯಾಮಿಲಿ ತರ ಅನಿಸಿತು. ಹಾಗಾಗಿ ಅಲ್ಲೇ ಮುಂದುವರಿದೆ' ಎಂದಿದ್ದಾರೆ.
'ತುಂಬಾ ಜನರೊಂದಿಗೆ ನಟನೆ ಮಾಡಿದ್ದೇನೆ. ಆದರೆ ಎಲ್ಲೋ ಎಲೆಮರೆ ಕಾಯಂತೆ ಆಗಿದ್ದೇನೆ. ನಾನು ಸರಿಯಾಗಿದ್ದೇನೆ ಎಂಬ ಕಾರಣಕ್ಕೇ ಎಷ್ಟೋ ಮಂದಿಗೆ ಕೆಟ್ಟವಳಾಗಿದ್ದೇನೆ. ನನಗೆ ಸರಿ ಅನಿಸಿದ್ದೇ ವಾದ ಮಾಡುತ್ತೇನೆ. 95 ಸಿನಿಮಾಗಳಲ್ಲಿ ಬೆಸ್ಟ್ ಸೆಟ್ 'ಕೃಷ್ಣ ಲೀಲಾ'. ಅದು ನನಗೆ ಬ್ರೇಕ್ ಕೊಟ್ಟ ಸಿನಿಮಾ. ಅದರಲ್ಲಿ ನಾನು ಅಮ್ಮನ ಪಾತ್ರ ಅಂದಾಗ ಒಪ್ಪಲಿಲ್ಲ. ಆಗ ಪಾತ್ರದ ಬಗ್ಗೆ ಚೆನ್ನಾಗಿ ಅರ್ಥ ಮಾಡಿಸಿದರು. ಅದಕ್ಕೆ ಒಳ್ಳೆಯ ಜನಪ್ರಿಯತೆ ಸಿಕ್ಕಿತು. ಇಂದಿಗೂ ನನ್ನ ಅದೇ ಪಾತ್ರದಿಂದ ಗುರುತಿಸುತ್ತಾರೆ' ಎಂದು ನಟಿ ಲಕ್ಷ್ಮಿ ಸಿದ್ದಯ್ಯ ಸಂತಸ ಹಂಚಿಕೊಂಡಿದ್ದಾರೆ.












Click it and Unblock the Notifications