Kiccha Sudeep: ಅಮ್ಮನಿಲ್ಲದೆ ಕಷ್ಟ ಆಗ್ತಿದೆ, ಮನೆ ಹತ್ರ ಬರಬೇಡಿ: ಕೈಮುಗಿದು ಬೇಡಿಕೊಂಡ ಸುದೀಪ್
ನಟ ಕಿಚ್ಚ ಸುದೀಪ್ ಅವರು ಅಭಿಮಾನಿಗಳಿಗೆ ಕಹಿಸುದ್ದಿ ನೀಡಿದ್ದಾರೆ. ಸುದೀಪ್ ಅವರನ್ನು ನೋಡಬೇಕು ಎಂದು ಪ್ರತಿದಿನವೂ ಅವರ ನಿವಾಸದ ಬಳಿ ಅಭಿಮಾನಿಗಳು ಸೇರುತ್ತಾರೆ. ಆದರೆ ದಯವಿಟ್ಟು ಯಾರೂ ನಮ್ಮ ಮನೆಯ ಹತ್ತಿರ ಬರಬೇಡಿ ಎಂದು ಸುದೀಪ್ ಕೈಮುಗಿದು ಕೇಳಿಕೊಂಡಿದ್ದಾರೆ. ಮನೆ ಬಳಿ ಚೂರು ಶಾಂತಿ ವಾತಾವರಣ ಇರಲಿ ಎಂದು ಬಯಸುತ್ತಿದ್ದೇನೆ, ನೀವು ನನ್ನ ಅರ್ಥಮಾಡಿಕೊಳ್ಳುತ್ತೀರಿ ಎನ್ನುವ ನಂಬಿಕೆ ಇದೆ ಎಂದು ಸುದೀಪ್ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸುದೀಪ್, 'ಪ್ರಿಯ ಸ್ನೇಹಿತರೇ, ಸೆಪ್ಟೆಂಬರ್ ಎರಡರ ಬೆಳಗಿನಲ್ಲಿ ಅಲ್ಲ, ಸೆಪ್ಟೆಂಬರ್ ಒಂದರ ರಾತ್ರಿಯೇ ಸಿಗೋಣವಾ? ಎಂದು ಅಭಿಮಾನಿಗಳನ್ನ ಕೇಳಿದ್ದಾರೆ. ಸೆಪ್ಟೆಂಬರ್ ಎರಡರಂದು ನೀವು ನನ್ನನ್ನು ಭೇಟಿಮಾಡುವುದಕ್ಕಾಗಿ ಎಷ್ಟು ಕಾಯುವಿರೋ, ಅದಕ್ಕಿಂತ ಹೆಚ್ಚಾಗಿ ನಾನು ನಿಮಗಾಗಿ ಕಾಯುತ್ತೇನೆ. ಆ ದಿನ ನೀವು ಪಡುವ ಸಂಭ್ರಮ, ಆಚರಿಸುವ ವಿಡಿಯೋಗಳನ್ನು ನೋಡಿದಾಗ ಪ್ರತಿಸಲವೂ ನನಗೆ ಮರುಹುಟ್ಟು ಪಡೆದಂತಾಗುತ್ತದೆ' ಎಂದು ಧನ್ಯವಾದ ತಿಳಿಸಿದ್ದಾರೆ.

'ಅಮ್ಮನಿಲ್ಲದ ಮೊದಲ ವರ್ಷ'
'ಸೆಪ್ಟೆಂಬರ್ 2ರಂದು ತಮ್ಮ ಹುಟ್ಟುಹಬ್ಬ ಇರುವ ಹಿನ್ನೆಲೆ ಸುದೀಪ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ನಿಸ್ಸಂದೇಹವಾಗಿ ನನ್ನ ಬದುಕಿಗೆ ಮೌಲ್ಯ ತುಂಬಿದವರು ನೀವು. ನಿಮ್ಮೆದರು ನಿಂತು ವಿನೀತನಾಗುವುದಕ್ಕಿಂತ ಖುಷಿ ಏನಿದೆ? ಆದ್ದರಿಂದಲೇ ದಶಕಗಳಿಂದ ನಿಮ್ಮನ್ನು ಮನೆಯ ಹತ್ತಿರ ಭೇಟಿ ಮಾಡುತ್ತಲೇ ನಾನೂ ಸಂಭ್ರಮಸಿದ್ದೇನೆ. ಆದರೆ ಈ ಸಲ ತುಂಬಾ ಕಷ್ಟವಾಗುತ್ತಿದೆ. ಏಕೆಂದರೆ ಅಮ್ಮನಿಲ್ಲದ ಮೊದಲ ವರ್ಷವಿದು. ಅಮ್ಮನಿಲ್ಲದ ಸಂಭ್ರಮವನ್ನು ಊಹಿಸಿಕೊಳ್ಳುವುದೂ ನನಗೆ ಕಷ್ಟವಾಗುತ್ತಿದೆ' ಎಂದು ಭಾವುಕರಾಗಿದ್ದಾರೆ.
'ಆದರೆ, ನಿಮ್ಮನ್ನು ನಿರಾಸೆಗೊಳಿಸುವುದು ನನಗೆ ಇಷ್ಟವಿಲ್ಲ. ನಿಮ್ಮ ಮೂಲಕವೇ ನನ್ನ ಹುಟ್ಟುಹಬ್ಬ ಹುಟ್ಟಬೇಕು!. ಗಡಿಯಾರ ಹನ್ನೆರಡು ಗಂಟೆ ಎಂದು ಸದ್ದು ಮಾಡುವಾಗ ನನಗೆ ನಿಮ್ಮ ಶುಭಾಶಯಗಳೇ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಸೆಪ್ಟೆಂಬರ್ ಒಂದರ ರಾತ್ರಿ ನಾವೆಲ್ಲರೂ ಒಂದು ಕಡೆ ಸೇರೋಣ. ಎಲ್ಲಿ, ಹೇಗೆ? ಅನ್ನೋದನ್ನು ತಿಳಿಸುತ್ತೇನೆ' ಎಂದು ಸಿಹಿಸುದ್ದಿ ನೀಡಿದ್ದಾರೆ.

'ಆದರೆ, ಮಾರನೇ ದಿನ ಅಂದರೆ ಸೆಪ್ಟೆಂಬರ್ 2ರಂದು ದಯವಿಟ್ಟು ಯಾರೂ ಮನೆ ಹತ್ತಿರ ಬರಬೇಡಿ. ನಾನು ಆ ದಿನ ಮನೆಯಲ್ಲಿ ಇರುವುದಿಲ್ಲ. ನಾನಿರುವುದಿಲ್ಲವೆಂದು ಹೇಳಿದ ಮೇಲೂ ನೀವು ಮನೆ ಬಳಿ ಬಂದು ಕಾದರೆ, ನನ್ನ ಮನಸಿಗೆ ನೋವಾಗುತ್ತದೆ. ಜೊತೆಗೆ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ' ಎಂದು ಕಾರಣ ತಿಳಿಸಿದ್ದಾರೆ.
'ನೀವು ನನ್ನನ್ನು ಅರ್ಥಮಾಡಿಕೊಳ್ಳುವಿರೆಂದು ಮತ್ತು ನಿರಾಸೆಗೊಳಿಸುವುದಿಲ್ಲವೆಂದು ನನಗೆ ನಂಬಿಕೆ ಇದೆ. ಅದು ಬಿಟ್ಟರೆ ಪ್ರತಿವರ್ಷದಂತೆ ಈ ವರ್ಷವೂ ಸಾಮಾಜಿಕ ಸೇವಾ ಕಾರ್ಯಗಳು ಯಥಾಪ್ರಕಾರ ನಡೆಯಲಿವೆ. ನಿಮ್ಮ ಹಾರೈಕೆ, ಅಭಿಮಾನ ಮತ್ತು ಸಾಂಗತ್ಯವೇ ನನ್ನ ಬಹುದೊಡ್ಡ ಆಸ್ತಿ. ಸದಾ ಪ್ರೀತಿ ಇರಲಿ, ನಿಮ್ಮ ಕಿಚ್ಚ' ಎಂದು ಸುದೀಪ್ ಬರೆದುಕೊಂಡಿದ್ದಾರೆ.












Click it and Unblock the Notifications