Kichcha Sudeep: ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ; ಬಿಗ್ ಬಾಸ್ 12 ನೇ ಸೀಸನ್‌ಗೂ ಕಿಚ್ಚನ ನಿರೂಪಣೆ ಫಿಕ್ಸ್
ಬೆಂಗಳೂರು, ಜೂನ್ 30: ಕನ್ನಡದ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ಬಾಸ್. ಬಿಗ್ ಬಾಸ್ ಕನ್ನಡ 11 ಸೀಸನ್ ಯಶಸ್ವಿಯಾದ ಬಳಿಕ ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಗೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದರು. ಈ ಬಗ್ಗೆ ನಟ ಸುದೀಪ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದನ್ನ ಕಂಡ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು, ಬಿಗ್ ಬಾಸ್ ನಿರೂಪಣೆಯನ್ನ ಕಿಚ್ಚ ಸುದೀಪ್ ಅವರೇ ನಡೆಸಿಕೊಡಬೇಕು ಎಂದು ಅಭಿಮಾನಿಗಳು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದು, ಇದೀಗ ಕಿಚ್ಚನ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಈಗಾಗಲೇ ಬಿಗ್ ಬಾಸ್ ಕನ್ನಡದ 11 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದ ಕಿಚ್ಚ ಸುದೀಪ್ ಅವರೇ ಬಿಗ್ಬಾಸ್ ಸೀಸನ್ 12ರ ಹೋಸ್ಟ್ ನಡೆಸಿಕೊಡಲಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದ ವೀಕ್ಷಕರಿಗೆ ಅಂತೂ ಇಂತೂ ಬಿಗ್ ಬಾಸ್ ತಂಡ ಬಿಗ್ ಅಪ್ಡೇಟ್ ಕೊಟ್ಟಿದೆ. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 12ಕ್ಕೂ ಕಿಚ್ಚ ಸುದೀಪ್ ಅವರೇ ನಿರೂಪಣೆ ವಹಿಸಲಿದ್ದಾರೆ. ಈ ಬಗ್ಗೆ ಖುದ್ದು ಬಿಗ್ಬಾಸ್ ಟೀಮ್ ಇಂದು ನಡೆದ ಪ್ರೆಸ್ ಮೀಟ್ನಲ್ಲಿ ಹಂಚಿಕೊಂಡಿದೆ.

ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ ಎಂ.ಜಿ ರಸ್ತೆಯ ತಾಜ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್ ಅವರು ಭಾಗವಹಿಸಿದ್ದರು. ಈ ವೇಳೆ ಈ ಬಾರಿಯ ಬಿಗ್ಬಾಸ್ ಸೀಸನ್ 12 ನಿರೂಪಣೆ ಮಾಡಲು ಕಿಚ್ಚ ಸುದೀಪ್ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಬಿಗ್ಬಾಸ್ ಟೀಮ್ ಮಾಹಿತಿ ನೀಡಿದೆ.
ಇನ್ನೂ ಈ ವೇಳೆ ನಟ ಕಿಚ್ಚ ಸುದೀಪ್ ಅವರು ಮಾತನಾಡಿ, ನಾನು ಬಿಗ್ ಬಾಸ್ ನಿರೂಪಣೆ ಮಾಡಲ್ಲ ಅಂದಿದ್ದು ನಿಜ. ನಾನು ಮಧ್ಯರಾತ್ರಿ 2 ಗಂಟೆಗೆ ಟ್ವೀಟ್ ಮಾಡಿದ್ದೆ. ನನ್ನ ಟ್ವೀಟ್ ಅನ್ನು ಯಾರು ಸೀರಿಯಸ್ ಆಗಿ ತಗೊಂಡಿರ್ಲಿಲ್ಲ. ನನ್ನ ಬಗ್ಗೆ ಜನರು ಮಾತನಾಡಿದ ವಿಟಿ ನೋಡಿದಾಗ ಹಾರ್ಟ್ ಗೆ ಟಚ್ ಆಯ್ತು. ನಾನು ಸೀಸನ್ 11ರ ಆರಂಭದಲ್ಲೆ ಹಿಂಟ್ ಕೊಟ್ಟಿದ್ದೆ, ಕೊನೆಯಲ್ಲಿ ನಾನು ನಿರೂಪಣೆ ಮಾಡಲ್ಲ ಅಂತ ಕ್ಲಾರಿಟಿ ಕೊಟ್ಟೆ ಅಷ್ಟೇ. ಬಿಗ್ ಬಾಸ್ ನ ಐಪಿಎಲ್ ತರ ಮೂರು ತಿಂಗಳು ನೋಡ್ತಾರೆ. ಇದು ನನ್ನ ರೆಸ್ಪಾನ್ಸ್ ಅನ್ನಿಸ್ತು. ನನ್ನ ಭಾವನೆಯನ್ನು ನಾನು ವ್ಯಕ್ತಪಡಿಸಿದ್ದೆ ಎಂದು ಹೇಳಿದ್ದರು.
ಬಿಗ್ಬಾಸ್ ಶುರುವಾಗುತ್ತೆ ಅಂದ್ರೆ ಅಷ್ಟೊಂದು ಜನ ನೋಡ್ತಾರೆ ಅಂದ್ರೆ ಅದಕ್ಕೆ ಅಷ್ಟು ಇಂಪಾರ್ಟೆನ್ಸ್ ಇದೆ. ಹಾಗೇ ನೋಡಿದ್ರೆ ಜನರು ನನ್ನ ಮೇಲೆ ಇಟ್ಟಿರೋ ಪ್ರೀತಿ, ಗೌರವ ಕಾಣಿಸಿದೆ. ನಾನು ವಾಪಸ್ ಬರೋದಕ್ಕೆ ಮುಖ್ಯ ಕಾರಣ ಪ್ರತಿಯೊಬ್ಬರು ನನಗೆ ಕರೆದ ರೀತಿ ಇರಬಹುದು. ಅವರು ನನ್ನ ಮೇಲೆ ಇಟ್ಟಿರೋ ಪ್ರೀತಿ ಇರಬಹುದು. ಜನ ಅಭಿಪ್ರಾಯ, ನನ್ನ ಸ್ನೇಹಿತರು ಈ ಬಗ್ಗೆ ಹೇಳಿದ್ದು, ಬಿಗ್ಬಾಸ್ ಟೀಮ್ ಪದೇ ಪದೇ ಬಂತು ಮನವೊಲಿಸಿದ್ದಕ್ಕೆ ನಾನು ಇದ್ದೇನೆ ಅಂತ ಹೇಳಿದ್ದಾರೆ.












Click it and Unblock the Notifications