‘ಕೆಜಿಎಫ್’ ದಾಖಲೆ ಮುರಿದ ತೆಲುಗು ಸಿನಿಮಾ ‘ಸಲಾರ್’: ಹೇಗೆ ಗೊತ್ತಾ?
ಸಲಾರ್ ಸಿನಿಮಾ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಮೂಲಕ ಮತ್ತೆ ಸೌತ್ ಸಿನಿಮಾ ಇಂಡಸ್ಟ್ರಿಯ ಖದರ್ ಏನು ಅನ್ನೋದು ಜಗತ್ತಿಗೆ ಅರಿವಾಗಿದೆ. ಆದ್ರೆ ಇದೇ ಸಮಯದಲ್ಲಿ ಕನ್ನಡಿಗರ ರಿಯಲ್ ಗೋಲ್ಡ್ 'ಕೆಜಿಎಫ್' ಸಿನಿಮಾ ದಾಖಲೆಯನ್ನು ಸಲಾರ್ ಈಗ ಮುರಿದಿದೆ ಎನ್ನಲಾಗುತ್ತಿದೆ. ಹಾಗಾದರೆ ಸಲಾರ್ ಮುರಿದ ಆ ದಾಖಲೆ ಯಾವುದು..? ಈ ವಿಚಾರದಲ್ಲಿ ಕನ್ನಡಿಗರ 'ಕೆಜಿಎಫ್' ಎಂತಹ ಸಾಧನೆ ಮಾಡಿತ್ತು ಗೊತ್ತಾ..? ಬನ್ನಿ ತಿಳಿಯೋಣ.
ಪ್ರಭಾಸ್ ಅವರಿಗೆ ಕಳೆದ 6 ವರ್ಷದಿಂದ ದೊಡ್ಡ ಬ್ರೇಕ್ ಸಿಗಲೇ ಇಲ್ಲ. ಅದರಲ್ಲೂ ತಮ್ಮ ಸಾಲು ಸಾಲು ಸಿನಿಮಾಗಳು ಫ್ಲಾಪ್ ಲಿಸ್ಟ್ ಸೇರಿದ ಹಿನ್ನೆಲೆಯಲ್ಲಿ ನಟ ಪ್ರಭಾಸ್ ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಬಾಹುಬಲಿ ಬಳಿಕ ಸಾಲು ಸಾಲು ಸೋಲು ನಟ ಪ್ರಭಾಸ್ ಅವರ ಬೆನ್ನುಹತ್ತಿದ್ದವು. 'ರಾಧೆ ಶ್ಯಾಮ್' & 'ಆದಿಪುರುಷ್' ಸೋಲು ಪ್ರಭಾಸ್‌ರನ್ನ ಕಂಗೆಡಿಸಿ, ಈ ಬಗ್ಗೆ ಸುದ್ದಿಗಳು ವೈರಲ್ ಆಗ ತೊಡಗಿದ್ದವು. ಆದರೆ ಗಟ್ಟಿ ಗುಂಡಿಗೆಯಿಂದ ಇದೆಲ್ಲವನ್ನೂ ಎದುರಿಸಿ ನಿಂತ ಡಾರ್ಲಿಂಗ್ ಪ್ರಭಾಸ್ ಗೆದ್ದು ನಿಂತಿದ್ದಾರೆ. ಕನ್ನಡದ 'ಕೆಜಿಎಫ್' ಸಿನಿಮಾ ದಾಖಲೆಯನ್ನು ಕೂಡ ಈಗ ಪ್ರಭಾಸ್ ಸಿನಿಮಾ ಸಲಾರ್ ಬ್ರೇಕ್ ಮಾಡಿದೆಯಂತೆ.

'ಕೆಜಿಎಫ್-2' ದಾಖಲೆ ಹಿಂದಿಕ್ಕಿದ ಸಲಾರ್?
ಅಂದಹಾಗೆ ಭಾರತದಲ್ಲಿ ಮೊದಲ ದಿನವೇ ಭರ್ಜರಿ ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಈಗ 'ಸಲಾರ್' ಸಿನಿಮಾ 3ನೇ ಸ್ಥಾನಕ್ಕೆ ಹೋಗಿದೆ ಎಂಬ ವರದಿ ಹರಿದಾಡುತ್ತಿದೆ. ಹೇಗೆ ಅಂದ್ರೆ ಮೊದಲ ದಿನವೇ ಹೆಚ್ಚು ಹಣ ಮಾಡಿದ ಭಾರತದ ಸಿನಿಮಾಗಳ ಪೈಕಿ RRR ಮೊದಲ ಸ್ಥಾನವನ್ನ ಪಡೆದಿದೆ. ಆರ್‌ಆರ್‌ಆರ್ ಮೊದಲ ದಿನವೇ 223.5 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಬಾಹುಬಲಿ-2 ಮೊದಲ ದಿನ 214.5 ಕೋಟಿ ರೂಪಾಯಿಗಳ ಸಂಪಾದನೆ ಮಾಡಿತ್ತು. ಇದನ್ನ ಬಿಟ್ಟರೆ ಕನ್ನಡಿಗರ 'ಕೆಜಿಎಫ್ ಚಾಪ್ಟರ್-2' ಬರೋಬ್ಬರಿ 164.5 ಕೋಟಿ ರೂಪಾಯಿ ವಸೂಲಿ ಮಾಡಿತ್ತು. ಆದರೆ 'ಕೆಜಿಎಫ್ ಚಾಪ್ಟರ್-2' ದಾಖಲೆ ಹಿಂದಿಕ್ಕಿದೆ ಸಲಾರ್ ಸಿನಿಮಾ.
ಮೊದಲ ದಿನವೇ 175 ಕೋಟಿ!
ಇದೀಗ ಸಲಾರ್ ಸಿನಿಮಾ ಮೊದಲ ದಿನವೇ ಬರೋಬ್ಬರಿ 175 ಕೋಟಿ ರೂಪಾಯಿ ಸಂಪಾದನೆ ಮಾಡಿದೆ ಎನ್ನಲಾಗಿದೆ. ಭಾರತ, ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಸೇರಿ ಪ್ರಪಂಚದ ಮೂಲೆ ಮೂಲೆಯಲ್ಲೂ ಈ ಸಿನಿಮಾ ರಿಲೀಸ್ ಆಗಿದೆ. 'ಸಲಾರ್' ಸಿನಿಮಾ ನೋಡೋಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದರು. ನಿನ್ನೆ ರಿಲೀಸ್ ಆಗಿರುವ ಸಲಾರ್ ಈಗ ಮೊದಲ ದಿನವೇ 175 ಕೋಟಿ ರೂಪಾಯಿ ಬಾಚುವ ಮೂಲಕ, 'ಕೆಜಿಎಫ್ ಚಾಪ್ಟರ್-2' ದಾಖಲೆ ಹಿಂದಿಕ್ಕಿದೆ ಎನ್ನಲಾಗಿದೆ. ಈ ಮೂಲಕ ಬಿಡುಗಡೆ ಆದ ಮೊದಲ ದಿನವೇ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪೈಕಿ ಟಾಪ್-3 ಸ್ಥಾನ ಪಡೆದಿದೆ. ಮತ್ತೊಂದು ವಿಶೇಷತೆ ಏನು ಅಂದ್ರೆ, 2 ಮತ್ತು 3ನೇ ಸ್ಥಾನ ಪಡೆದಿರುವ ಸಿನಿಮಾಗಳು ಪ್ರಭಾಸ್ ಅವರದ್ದೇ ಆಗಿವೆ.

ಹೇಗಿದೆ ಸಲಾರ್ ಸಿನಿಮಾ ಖದರ್?
ಕ್ರಿಸ್‌ಮಸ್ ರಜೆಯ ಸಂಭ್ರಮದ ಜೊತೆಗೆ ಅದ್ಧೂರಿಯಾಗಿ ರಿಲೀಸ್ ಆಗಿರುವ ಸಲಾರ್ ಈಗ, ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿದೆ. ಯಾಕಂದ್ರೆ ಈ ಸಿನಿಮಾ ನಿರ್ಮಿಸುತ್ತಿರುವ ದಾಖಲೆ ಒಂದೆರಡಲ್ಲ. ಭಾರತವೂ ಸೇರಿದಂತೆ ಜಗತ್ತಿನ ವಿವಿಧ ಥಿಯೇಟರ್‌ನಲ್ಲಿ ಸಲಾರ್ ಸಿನಿಮಾ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಟಿಕೆಟ್ ಪಡೆಯಲು ಪ್ರೇಕ್ಷಕರು ಕೂಡ ಮುಗಿಬೀಳುತ್ತಿದ್ದು, ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇಂದು ಶನಿವಾರ ಹಲವರಿಗೆ ರಜೆ ಇದ್ದು, ನಾಳೆಯ ದಿನ ಭಾನುವಾರ ಹೀಗಾಗಿ ಮತ್ತಷ್ಟು ಪ್ರೇಕ್ಷಕರು ಥಿಯೇಟರ್‌ಗೆ ನುಗ್ಗುವ ನಿರೀಕ್ಷೆ ಇದೆ. ಈ ಸಮಯದಲ್ಲೇ ಸೋಮವಾರ ಕ್ರಿಸ್‌ಮಸ್ ರಜೆ ಇರುವ ಕಾರಣ ಬಂಪರ್ ಸಿಕ್ಕಂತಾಗಿದೆ.












Click it and Unblock the Notifications