CCL 2025: ಕರ್ನಾಟಕ ಬುಲ್ಡೋಜರ್ಸ್ ಅಬ್ಬರಕ್ಕೆ ಶರಣಾದ ಚೆನ್ನೈ ರ್‍ಹಿನೋಸ್; ಕಿಚ್ಚನ ಪಡೆಗೆ ಭರ್ಜರಿ ಗೆಲುವು
ಸಿಸಿಎಲ್ 2025ರ ಪಂದ್ಯಾವಳಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಗೆಲುವಿನ ಓಟ ಮುಂದುವರೆಸಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ರ್‍ಹಿನೋಸ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಿಚ್ಚ ಸುದೀಪ್ ಹುಡುಗರು ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಟಾಸ್ ಗೆದ್ದ ಚೆನ್ನೈ ರ್‍ಹಿನೋಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‌ನ 10 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 108 ರನ್ ಕಲೆಹಾಕಿತು. ಪೃಥ್ವಿ 10 ಎಸೆತಗಳಲ್ಲಿ 21 ರನ್ ಗಳಿಸಿದರೆ, ವಿಕ್ರಾಂತ್ 16 ಎಸೆತಗಳಲ್ಲಿ 27 ರನ್ ಗಳಿಸಿದರು. ಚಂದನ್ ಕುಮಾರ್ 2 ವಿಕೆಟ್ ಪಡೆದರೆ, ಗೋಲ್ಡನ್ ಸ್ಟಾರ್ ಗಣೇಶ್ 1 ವಿಕೆಟ್ ಪಡೆದರು.

ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ 10 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 142 ರನ್ ಕಲೆಹಾಕುವ ಮೂಲಕ 34 ರನ್‌ಗಳ ಭರ್ಜರಿ ಮುನ್ನಡೆ ಪಡೆದುಕೊಂಡಿತು. ಡಾರ್ಲಿಂಗ್ ಕೃಷ್ಣ 22 ಎಸೆತಗಳಲ್ಲಿ 8 ಬೌಂಡರಿ 1 ಭರ್ಜರಿ ಸಿಕ್ಸರ್ ಸಹಿತ ಅಜೇಯ 50 ರನ್ ಗಳಿಸಿದರು. ಕರಣ್ ಆರ್ಯನ್ 19 ಎಸೆತಗಳಲ್ಲಿ 42 ರನ್ ಗಳಿಸಿದರು.
ಬುಲ್ಡೋಜರ್ಸ್‌ಗೆ ಸುಲಭ ಗೆಲುವು
34 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಚೆನ್ನೈ ರ್‍ಹಿನೋಸ್ 10 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿತು. ಪೃಥ್ವಿ 14 ಎಸೆತಗಳಲ್ಲಿ 30 ರನ್ ಗಳಿಸಿದರೆ, ಕಲೈ ಅರಸನ್ 24 ರನ್ ಗಳಿಸಿದರು. ಸುನಿಲ್ ರಾವ್ 2 ವಿಕೆಟ್ ಪಡೆದರೆ, ಚಂದನ್ ಕುಮಾರ್, ರಾಜೀವ್, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಡಾರ್ಲಿಂಗ್ ಕೃಷ್ಣ ತಲಾ ಒಂದು ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್‌ನಲ್ಲಿ 70 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ಬುಲ್ಡೋಜರ್ಸ್ 6.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 70 ರನ್ ಗಳಿಸಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಡಾರ್ಲಿಂಗ್ ಕೃಷ್ಣ 13 ಎಸೆತಗಳಲ್ಲಿ 1 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 22 ರನ್ ಗಳಿಸಿದರೆ, ರಾಜೀವ್ ಹನು 9 ಎಸೆತಗಳಲ್ಲಿ ಅಜೇಯ 17 ರನ್ ಗಳಿಸಿ ಸುಲಭ ಗೆಲುವು ತಂದುಕೊಟ್ಟರು.ಈ ಗೆಲುವಿನ ಮೂಲಕ ಕರ್ನಾಟಕ ಬುಲ್ಡೋಜರ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.












Click it and Unblock the Notifications