Kantara Teaser: ತ್ರಿಶೂಲ, ಕೊಡಲಿ ಹಿಡಿದು ಉಗ್ರರೂಪಿಯಾಗಿ ಕಾಣಿಸಿಕೊಂಡ ರಿಷಬ್ ಶೆಟ್ಟಿ!
2022ರಲ್ಲಿ ಬಿಡುಗಡೆಯಾಗಿ ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಿ ಭಾಷೆಗಳಲ್ಲಿ ಕೂಡ ಭಾರಿ ಯಶಸ್ಸು ಕಂಡ ರಿಷಬ್ ಶೆಟ್ಟಿ ಅಭಿನಯದ ಕಾಂತಾರ, ಈಗ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಕಾಂತಾರ ಚಿತ್ರದ ಪ್ರೀಕ್ವೆಲ್ ತೆಗೆಯುವುದಾಗಿ ಹೇಳಿದ್ದ ರಿಷಬ್ ಶೆಟ್ಟಿ ಅದಕ್ಕೆ ತಕ್ಕಂತೆ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಕಾಂತಾರ ಚಿತ್ರದ ಕಾಡುಬೆಟ್ಟದ ಶಿವನ ದೃಶ್ಯದೊಂದಿಗೆ ಶುರುವಾಗುವ ಟೀಸರ್, ಕೈಯಲ್ಲಿ ಕೊಡಲಿ, ತ್ರಿಶೂಲ ಹಿಡಿದ ಉಗ್ರರೂಪಿ ರಿಷಬ್ ಶೆಟ್ಟಿ ಅವರ ಅವತಾರದೊಂದಿಗೆ ಕೊನೆಯಾಗುತ್ತದೆ. ಬರಿ ಬೆಳಕಲ್ಲ ದರ್ಶನ ಎನ್ನುವ ಟ್ಯಾಗ್‌ಲೈನ್ ಕೂಡ ನೀಡಲಾಗಿದೆ. ಕದಂಬರ ಕಾಲದಲ್ಲಿ ನಡೆಯುವ ಕತೆ ಎಂದು ಹೇಳಲಾಗಿದೆ.

ಈ ಮೂಲಕ ಕಾಂತಾರ ಚಿತ್ರಕ್ಕಿಂತ ಹೆಚ್ಚು ಥ್ರಿಲ್ಲರ್, ಆಕ್ಷನ್ ದೃಶ್ಯಗಳ ರಸದೌತಣ ಪ್ರೇಕ್ಷಕರಿಗೆ ಸಿಗುವುದು ಪಕ್ಕಾ ಆಗಿದೆ. ಬರೋಬ್ಬರಿ ಏಳು ಭಾಷೆಗಳಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಲಿದೆ. ಅಲ್ಲದೆ, ಕಾಂತಾರ ಚಾಪ್ಟರ್ 1 ಎಂದು ಹೆಸರಿಡುವ ಮೂಲಕ ಕಾಂತಾರ ಸರಣಿ ಮತ್ತೆ ಮುಂದುವರೆಯುವ ಸೂಚನೆಯನ್ನು ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ನೀಡಿದ್ದಾರೆ.
ಚಿತ್ರೀಕರಣ ಯಾವಾಗ ಶುರು?
ಡಿಸೆಂಬರ್ ಮೊದಲ ವಾರದಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. ಆನೆಗುಡ್ಡೆ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ಕೆಜಿಎಫ್ -2 ಮತ್ತು ಕಾಂತಾರ ಚಿತ್ರದ ಮುಹೂರ್ತ ಕೂಡ ಇಲ್ಲೇ ನಡೆದಿತ್ತು ಎನ್ನುವುದು ವಿಶೇಷ.
ಉಡುಪಿ ಸುತ್ತಮುತ್ತ ಮತ್ತು ಶ್ರೀಲಂಕಾದಲ್ಲಿ ಚಿತ್ರೀಕರಣ ನಡೆಯಲಿದ್ದು, ಹೆಚ್ಚಿನ ಜನರನ್ನು ನಿಯಂತ್ರಿಸಲು ಮತ್ತು ಚಿತ್ರದ ಬಹುಪಾಲು ಶೂಟಿಂಗ್ ಅನ್ನು ಶ್ರೀಲಂಕಾದಲ್ಲಿ ಮಾಡಲು ಯೋಜಿಸಲಾಗಿದೆ. ಭಾರಿ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಬಜೆಟ್ ಬಗ್ಗೆ ಎಲ್ಲೂ ಗುಟ್ಟು ಬಿಟ್ಟುಕೊಡದಿದ್ದರೂ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಲಿದೆ ಎಂದು ಹೇಳಲಾಗಿದೆ. ಕಾಂತಾರ ಚಿತ್ರವನ್ನು ಸುಮಾರು 16 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು, ಆ ಚಿತ್ರ ವಿಶ್ವದಾದ್ಯಂತ ಸುಮಾರು 450 ಕೋಟಿ ರೂಪಾಯಿ ಗಳಿಸಿತ್ತು.
ಟೀಸರ್ ನೋಡಿ ಥ್ರಿಲ್ ಆದ ಅಭಿಮಾನಿಗಳು
ಇನ್ನು ಕಾಂತಾರ ದಿ ಲೆಜೆಂಡರ್ ಪಾರ್ಟ್ 1 ಟೀಸರ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕನ್ನಡದಲ್ಲಿ ಮತ್ತೊಂದು 1000 ಕೋಟಿ ರೂಪಾಯಿ ಗಳಿಸುವ ಚಿತ್ರ ಇದಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಬಹುತೇಕ ಕಾಂತಾರ ಚಿತ್ರದ ತಂತ್ರಜ್ಞರೇ ಈ ಚಿತ್ರದಲ್ಲಿ ಕೂಡ ಮುಂದುವರೆಯಲಿದ್ದಾರೆ. ಚಿತ್ರದ ಇತರೆ ನಟರ ಬಗ್ಗೆ ನಿರ್ದೇಶಕ ರಿಷಬ್ ಶೆಟ್ಟಿ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. 2024ರಲ್ಲಿ ಚಿತ್ರ ತೆರೆ ಕಾಣುವ ನಿರೀಕ್ಷೆ ಇದೆ.












Click it and Unblock the Notifications