Kantara Chapter 1: ರಿಲೀಸ್‌ಗೂ ಮೊದಲೇ ₹100 ಕೋಟಿ ಕಲೆಕ್ಷನ್ ಮಾಡಿದ ರಿಷಬ್ "ಕಾಂತಾರ"
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್-1 (Kantara Chapter 1) ಬಿಡುಗಡೆ ಸಜ್ಜಾಗಿದೆ. ಕಾಂತಾರ ಸಿನಿಮಾ ಹಿಟ್ ಆದ ಬಳಿಕ ಅದರ ಪ್ರೀಕ್ವೆಲ್ ಬರುತ್ತಿದ್ದು, ಈ ಸಿನಿಮಾ ಮೇಲೆಯೂ ಭಾರೀ ನಿರೀಕ್ಷೆ ಇದೆ. ಕಡಿಮೆ ಬಜೆಟ್‌ನಲ್ಲಿ ಮಾಡಿದ್ದ ಕಾಂತಾರ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಹೀಗಾಗಿ ಪ್ರೀಕ್ವೆಲ್ ಕೂಡ ಭಾರೀ ಸದ್ದು ಮಾಡಲಿದೆ ಎಂದು ಹೇಳಲಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಬೇರೆ ಭಾಷೆಗಳ ಪ್ರೇಕ್ಷಕರೂ ಸಿನಿಮಾಗಾಗಿ ಕಾದಿದ್ದಾರೆ. ಇದರ ನಡುವೆ ರಿಲೀಸ್‌ಗೂ ಮುನ್ನವೇ ಕಾಂತಾರ ಟೀಂ 100 ಕೋಟಿ ಬಾಚಿಕೊಂಡಿದೆ ಎಂದು ವರದಿಯಾಗಿದೆ.
ಕೇವಲ 15 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಕಾಂತಾರ ಚಿತ್ರ ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 450 ಕೋಟಿ ಗಳಿಸಿ ಇತಿಹಾಸ ಬರೆದಿತ್ತು. ಇದೀಗ ತೆಲುಗು ಭಾಷೆಯಲ್ಲೂ ಈ ಸಿನಿಮಾಗೆ ಭಾರಿ ಡಿಮ್ಯಾಂಡ್ ಇರುವ ಕಾರಣ ಹಂಚಿಕೆಯ ಹಕ್ಕು ದಾಖಲೆ ಬೆಲೆಗೆ ಮಾರಾಟವಾಗಿದೆ. ತೆಲುಗು ರಾಜ್ಯಗಳು ಬರೋಬ್ಬರಿ 100 ಕೋಟಿ ರೂ.ಗೆ ಕಾಂತಾರ-1 ಚಿತ್ರದ ಹಂಚಿಕೆ ಹಕ್ಕನ್ನು ಪಡೆದಿವೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಕಾಂತಾರ ಮತ್ತೊಂದು ದಾಖಲೆ ಬರೆದಿದೆ.

ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣದ ಪೈಕಿ ನಿಜಾಮ್ ಪ್ರದೇಶ 40 ಕೋಟಿ, ಕೋಸ್ಟಲ್ ಆಂಧ್ರ 45 ಕೋಟಿ, ರಾಯಲ್ ಸೀಮೆ 15 ಕೋಟಿ ಸೇರಿದಂತೆ 100 ಕೋಟಿ ಮೊತ್ತಕ್ಕೆ ಕಾಂತಾರ ಹಂಚಿಕೆ ಹಕ್ಕು ಮಾರಾಟವಾಗಿದೆ. ಕಾಂತಾರ ಪ್ರೀಕ್ವೆಲ್‌ಗಾಗಿ ನಿರ್ಮಾಪಕರು 125 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಅಕ್ಟೋಬರ್ 2ರಂದು ಕಾಂತಾರ: ಚಾಪ್ಟರ್ 1 ಸಿನಿಮಾದ ತೆಲುಗು ಹಕ್ಕುಗಳಿಗಾಗಿ ನಿರ್ಮಾಪಕರು 100 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಈ ಮೂಲಕ ವಿತರಣೆ ಹಕ್ಕು ವಿಚಾರದಲ್ಲೂ ಹೊಸ ಅಧ್ಯಾಯ ಬರೆಯುತ್ತಿದೆ.
ಈ ಚಿತ್ರದಲ್ಲಿ ರಿಷಬ್ ನಾಯಕ ಹಾಗು ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಜಯರಾಮ್, ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಆರಂಭದಿಂದಲೂ ಹಲವು ಅಡೆತಡೆಗಳನ್ನು ಎದುರಿಸಿ ಇತ್ತೀಚೆಗಷ್ಟೇ ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಮಾಡಿತ್ತು. ಕಾಂತಾರದಂತೆ ಇದು ಕೂಡ ಬಹುಭಾಷೆಗಳಲ್ಲಿ ಸದ್ದು ಮಾಡಲಿದೆ ಎಂದು ಹೇಳಲಾಗುತ್ತಿದೆ.
ತೆಲುಗು ರಾಜ್ಯಗಳಲ್ಲಿ ಇತ್ತೀಚೆಗೆ ತೆಲುಗು ಸಿನಿಮಾಗಳಿಗಿಂತ ಡಬ್ ಆದ ಸಿನಿಮಾಗಳು ಗಳಿಕೆ ಮಾಡುತ್ತಿವೆ. ಇತ್ತೀಚೆಗೆ ತೆರೆಕಂಡಂತಹ "ವಾರ್ 2" ಮತ್ತು "ಕೂಲಿ" ಎರಡು ಡಬ್ ಆದ ಸಿನಿಮಾಗಳು ತೆಲುಗು ರಾಜ್ಯಗಳ ಥಿಯೇಟರ್‌ಗಳಲ್ಲಿ ಅಬ್ಬರಿಸಿವೆ. ಬರೋಬ್ಬರಿ 150 ಕೋಟಿ ವ್ಯವಹಾರವೂ ನಡೆಸಿವೆ. ಆದರೂ ಕೂಲಿ ಸಿನಿಮಾಗೆ 10 ಕೋಟಿ ನಷ್ಟ ಅನುಭವಿಸಿದ್ದು, ವಾರ್ 2 ಚಿತ್ರದ ತೆಲುಗು ವಿತರಕರು 40 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ ಎಂದು ವರದಿಯಾಗಿದೆ. ಇದರ ನಡುವೆ ಕಾಂತಾರ ಕೂಡ ವಿತರಣೆಗೆ ದಾಖಲೆ ಮೊತ್ತ ಪಡೆದಿದೆ.












Click it and Unblock the Notifications