ಕಮಿಟ್‌ಮೆಂಟ್ ಅರ್ಥ ಗೊತ್ತಿರಲಿಲ್ಲ, ಬೆತ್ತಲೆ ವಿಡಿಯೋ ಕೇಳಿ ರೆಸಾರ್ಟ್‌ಗೆ ಕರೆದರು: ನಟಿ ಸಿತಾರಾಗೆ ಕಾಸ್ಟಿಂಗ್ ಕೌಚ್ ಅನುಭವ
ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹಲವು ನಟಿಯರು ಆಗಾಗ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಅಮಾಯಕ ಹೆಣ್ಣುಮಕ್ಕಳನ್ನು ಈ ಕೂಪಕ್ಕೆ ತಳ್ಳಿ ಅವರ ಬದುಕನ್ನ ನರಕ ಮಾಡುತ್ತಾರೆ ಎಂದು ಹಲವರು ದೂರಿದ್ದಾರೆ. ಇದೀಗ ಪಾರು ಧಾರಾವಾಹಿ ಖ್ಯಾತಿಯ ನಟಿ ಸಿತಾರಾ ಅವರು ಕೂಡ ತಮಗೆ ಆದ ಕೆಟ್ಟ ಅನುಭವವನ್ನು ಬಹಿರಂಗಪಡಿಸಿದ್ದಾರೆ. ರಂಗಭೂಮಿಯಿಂದ ಬಣ್ಣದ ಲೋಕಕ್ಕೆ ಬಂದಾಗ ಅವರ ಮೇಲೆ ಕಾಸ್ಟಿಂಗ್ ಕೌಚ್‌ನ ಬಲೆ ಹೇಗೆ ಬೀಸಲಾಗಿತ್ತು? ಕಮಿಟ್‌ಮೆಂಟ್, ನೆಕೆಡ್ ಎನ್ನುವ ಇಂಗ್ಲಿಷ್ ಪದಗಳ ಅರ್ಥ ಗೊತ್ತಿಲ್ಲದೆ ಸಿತಾರಾ ಅವರು ಹೇಗೆ ಇದನ್ನು ಎದುರಿಸಿದರು? ಎಂದು ಸಂದರ್ಶನವೊಂದರಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
́'ನಾನಿನ್ನೂ ಆಗ ತಾನೇ ರಂಗಭೂಮಿಯಿಂದ ಬಂದಿದ್ದೆ. ಸಿನಿಮಾ ಚಾನ್ಸ್ ನೆಪದಲ್ಲಿ ಒಂದು ಕೆಟ್ಟ ಅನುಭವ ಆಗಿತ್ತು. ನಂದೀಶ್ ಎಂಬ ವ್ಯಕ್ತಿ 2016ರಲ್ಲಿ ಬನ್ನಿ ಮೇಡಂ ನೋವು ಒಂದು ಸಿನಿಮಾಗೆ ಸೆಲೆಕ್ಟ್ ಆಗಿದ್ದೀರ ಅಂದಿದ್ರು. ಒಂದು ಕಾಫಿ ಶಾಪ್‌ನಲ್ಲಿ ಮಾತನಾಡುತ್ತಾ ಅವರು ನೇರವಾಗಿ, ನೋಡಿ ನೀವು ಕಮಿಟ್‌ಮೆಂಟ್‌ಗೆಲ್ಲ ಒಪ್ಪಿಕೊಳ್ಳಬೇಕು ಅಂದ್ರು. ರಂಗಭೂಮಿಯಲ್ಲಿ ನಮ್ಮ ಪ್ರಕಾರ ಕಮಿಟ್‌ಮೆಂಟ್ ಅಂದ್ರೆ ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದು, ಸಮಯ ವ್ಯರ್ಥ ಮಾಡದೆ ಇರುವುದು ಅನ್ಕೊಂಡಿದ್ದೆ. ಹಾಗಾಗಿ ನಾನು ಓಕೆ ಅಂದಿದ್ದೆ' ಎಂದು ವಿನಯ್ ಸನಾತನಿ ಶೋ ಯುಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.

'ಆಗ ಆ ವ್ಯಕ್ತಿ ರಾತ್ರಿ 11 ಗಂಟೆಗೆ ಫೋನ್ ಮಾಡಿ, ನೀನು ಈ ಕೂಡಲೇ ನಿನ್ನ ಬಾತ್‌ರೂಂಗೆ ಹೋಗಿ ನಿನ್ನ ನೆಕೆಡ್ (ಬೆತ್ತಲೆ) ವಿಡಿಯೋ ಕಳಿಸು ಅಂತ ಕೇಳಿದ. ಆಗ ನನಗೆ ಇಂಗ್ಲೀಷ್ ಅಷ್ಟಾಗಿ ಗೊತ್ತಿರಲಿಲ್ಲ, ನೆಕೆಡ್ ಅಂದ್ರೂ ತಿಳಿಯಲಿಲ್ಲ. ತಕ್ಷಣ ನನ್ನ ಫ್ರೆಂಡ್‌ಗೆ ಫೋನ್ ಮಾಡಿ ಇವರು ನೆಕೆಡ್ ವಿಡಿಯೋ ಕೇಳ್ತಿದ್ದಾರೆ ಕಣೋ ಅಂತ ಕೇಳಿದೆ. ಅದಕ್ಕೆ ನನ್ನ ಫ್ರೆಂಡ್ ಬಂದ್ರೆ ಜಾಡಿಸಿ ಒದೀತೀನಿ, ಆ ವಿಡಿಯೋ ಎಲ್ಲ ಕಳಿಸಬೇಡ. ನೆಕೆಡ್ ಅಂದ್ರೆ ಬೆತ್ತಲೆ ವಿಡಿಯೋ ಅಂದ. ಈಗ ಏನೂ ಮಾತಾಡಬೇಡ, ಫೋನ್ ಸ್ವಿಚ್ ಆಫ್ ಮಾಡಿ ನಿದ್ದೆ ಮಾಡು ಎಂದ. ನಾನು ಹಾಗೇ ಮಾಡಿದೆ'.
'ಮತ್ತೆ ಮರುದಿನ ರಾತ್ರಿ 11 ಗಂಟೆಗೆ ಮತ್ತೆ ಆ ವ್ಯಕ್ತಿಯಿಂದ ಫೋನ್ ಬಂತು. ಬಾತ್‌ರೂಂಗೆ ಹೋಗಿ ವಿಡಿಯೋ ಕಾಲ್ ಮಾಡು ಅಂದ, ನಾನು ಆಗ ಬಾತ್‌ರೂಂನಲ್ಲೇ ಯಾಕೆ ವಿಡಿಯೋ ಕಾಲ್ ಮಾಡಬೇಕು? ಅಂತ ಅಲ್ಲಿಂದಲೇ ಕಾಲ್ ಮಾಡಿದೆ. ಆಗ ನೀನು ಕಮಿಟ್‌ಮೆಂಟ್‌ಗೆಲ್ಲ ಓಕೆ ಅಂದೆ ಅಲ್ವಾ? ಅದಕ್ಕೆ ಪ್ರೊಡ್ಯೂಸರ್ ಜೊತೆ ನಾಳೆ ರೆಸಾರ್ಟ್‌ಗೆ ಹೋಗಬೇಕು ಅಂದ್ರು, ಆಗ ರೆಸಾರ್ಟ್ ಅಂದ್ರೂ ನನಗೆ ಗೊತ್ತಿರಲಿಲ್ಲ. ಆಗ ಕಮಿಟ್‌ಮೆಂಟ್ ಅಂದ್ರೆ ಏನು ಅಂತ ಅವರಿಗೇ ಕೇಳಿದೆ. ಆಗ ಕಮಿಟ್‌ಮೆಂಟ್ ಅಂದ್ರೆ ಡೈರೆಕ್ಟರ್, ಪ್ರೊಡ್ಯೂಸರ್, ಮ್ಯಾನೇಜರ್ ಹಾಗೂ ಅಸೋಸಿಯೇಟ್ ಜೊತೆ ಮಲಗೋದು ಎಂದು ಆ ವ್ಯಕ್ತಿ ಹೇಳಿದ. ಆಗ ಕೂಡಲೇ ನಾನು ಫೋನ್ ಕಟ್ ಮಾಡಿದೆ. ಆಗ ನೋಡಿ ಮುಗ್ಧ ಹುಡುಗಿಯರನ್ನ ಕಾಸ್ಟಿಂಗ್ ಕೌಚ್ ಅನ್ನೋ ಹೆಸರಲ್ಲಿ ಈ ದರಿದ್ರ ನನ್ ಮಕ್ಕಳು ಮಾಡೋ ಕೆಲಸ ಇದು ಅನ್ನೋದು ಗೊತ್ತಾಯಿತು' ಎಂದಿದ್ದಾರೆ.

ನಾನು ಬೇಡ ಅಂದ್ರೂ ಒಂದು ಹುಡುಗಿ ಮಾತು ಕೇಳಲಿಲ್ಲ!
'ನನಗೆ ಗೊತ್ತಿರುವ ಹುಡುಗಿಯೊಬ್ಬಳಿಗೆ ಅದೇ ವ್ಯಕ್ತಿ ಕಾಲ್ ಮಾಡಿದ್ದ. ಅದನ್ನು ಅವಳು ನನಗೆ ಹೇಳಿದಳು. ನಾನು ಅವರು ಕರೆದಾಗ ಹೋಗಬೇಡ, ನನಗೆ ಈ ರೀತಿ ಕೇಳಿದ್ರು ಎಂದು ಎಚ್ಚರಿಕೆ ಕೊಟ್ರೂ ಅವಳು ಹೋಗಿದ್ದಳು, ಸಿನಿಮಾನೂ ಮಾಡಿದ್ಳು, ಆದರೆ ರಿಲೀಸ್ ಆಗಲಿಲ್ಲ. ಕೊನೆಗೆ ನನ್ನತ್ರ ಬಂದು ಅಕ್ಕ ಅವರು ನನ್ನ ಹಾಗೇ, ಹೀಗೆಲ್ಲ ಬಳಸಿಕೊಂಡ್ರು ಅಂತ ಕಣ್ಣೀರು ಹಾಕಿದಳು. ಆ ಕಿರಾತಕರು ಆ ಹುಡುಗಿಯ ವಿಡಿಯೋಗಳನ್ನ ಮಾಡಿಕೊಂಡಿದ್ರು, ಅದನ್ನ ನನಗೆ ತೋರಿಸಿ ಪೊಲೀಸರಿಗೆ ಕಂಪ್ಲೇಂಟ್ ಕೊಡ್ಲಾ? ಅಂತ ಕೇಳಿದಳು. ಆದರೆ ನೀನೇ ಒಪ್ಪಿಕೊಂಡು ಇದೆಲ್ಲ ಮಾಡಿದ್ದೀಯ, ನಿನಗೆ ಯಾರು ನ್ಯಾಯ ಕೊಡ್ತಾರೆ ಅಂದಿದ್ದೆ. ಕೊನೆಗೆ ಇದನ್ನೆಲ್ಲ ಬಿಟ್ಟು ಅವಳು ಈಗ ಊರಲ್ಲಿ ತನ್ನ ಕುಟುಂಬದೊಂದಿಗೆ ಚೆನ್ನಾಗಿದ್ದಾಳೆ' ಎಂದು ಸಿತಾರಾ ಅವರು ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟಿದ್ದಾರೆ.












Click it and Unblock the Notifications