Pooja Gandhi: ಕನ್ನಡ, ಕುವೆಂಪು ಮೇಲೆ ಪೂಜಾ ಗಾಂಧಿ ಅಭಿಮಾನ: ಕವಿಶೈಲದಲ್ಲಿ ಮಳೆ ಹುಡುಗಿ
ಬೆಂಗಳೂರು, ನವೆಂಬರ್ 06: ಕನ್ನಡ ಚಿತ್ರರಂಗದ ಮಳೆ ಹುಡುಗಿ ಪೂಜಾ ಗಾಂಧಿ ಅವರ ಕನ್ನಡ ಪ್ರೀತಿಗೆ ಮನಸೋಲದವರಿಲ್ಲ. ಉತ್ತರ ಪ್ರದೇಶ ಮೂಲದವರಾದ ಪೂಜಾ ಗಾಂಧಿ ಅನ್ನ ನೀಡಿದ ಭಾಷೆ ಕನ್ನಡದ ಮೇಲಿನ ಅಭಿಮಾನದಿಂದ ಓದಲು ಹಾಗೂ ಬರೆಯಲು ಕಲಿತಿದ್ದಾರೆ. ಪೂಜಾ ಗಾಂಧಿ ಅವರಿಗೆ ಕನ್ನಡ ಮಾತ್ರವಲ್ಲ, ರಾಷ್ಟ್ರಕವಿ ಕುವೆಂಪು ಅವರ ಮೇಲೂ ಅಪಾರವಾದ ಗೌರವ ಹೊಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿರುವ ಪೂಜಾ ಗಾಂಧಿ ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪೂಜಾ ಗಾಂಧಿ ತಮ್ಮ ಮದುವೆಯ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಂಡಾಗ ಎಲ್ಲರಿಗೂ ಆಶ್ಚರ್ಯ ಆಗಿದ್ದಂತೂ ಸತ್ಯ. ಯಾಕೆಂದರೆ ಜನಪ್ರಿಯ ನಟಿಯಾಗಿರುವ ಪೂಜಾ ಗಾಂಧಿ ಸರಳ ವಿವಾಹವನ್ನು ಆಯ್ಕೆ ಮಾಡಿಕೊಂಡಿದ್ದರು. ಮುಖ್ಯವಾಗಿ ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯ ಪ್ರಕಾರ ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು.

ನವೆಂಬರ್ 29ರಂದು ಬೆಂಗಳೂರಿನ ಯಲಹಂಕದಲ್ಲಿ ಪೂಜಾ ಗಾಂಧಿ ಉದ್ಯಮಿ ವಿಜಯ್ ಘೋರ್ಪಡೆ ಅವರ ಜೊತೆ ಮಂತ್ರ ಮಾಂಗಲ್ಯ ಪದ್ಧತಿಯ ಪ್ರಕಾರ ವಿವಾಹವಾಗಿದ್ದರು. ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪೂಜಾ ಗಾಂಧಿ ಅವರ ಮಂತ್ರ ಮಾಂಗಲ್ಯ ಪದ್ಧತಿ ಆಯ್ಕೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಪೂಜಾ ಗಾಂಧಿ ಅವರಿಗೆ ಕುವೆಂಪು ಅವರ ಮೇಲಿರುವ ಅಭಿಮಾನ ತಿಳಿದುಬಂದಿದೆ.
ಮದುವೆಯಾದ ಕೂಡಲೇ ವಿದೇಶಕ್ಕೆ ಹಾರುವ ನಟ-ನಟಿಯರ ಮಧ್ಯೆ ಪೂಜಾ ಗಾಂಧಿ ವಿಶೇಷವಾಗಿ ಕಂಡಿದ್ದಾರೆ. ಪೂಜಾ ಗಾಂಧಿ- ವಿಜಯ್ ಘೋರ್ಪಡೆ ದಂಪತಿ ಮದುವೆ ಬಳಿಕ ಕುವೆಂಪು ಹುಟ್ಟಿ ಬೆಳೆದ ಜಾಗ ಕವಿಶೈಲಕ್ಕೆ ಭೇಟಿ ನೀಡಿದ್ದಾರೆ. ಮದುವೆಯಾದ ಬಳಿಕ ಮೊದಲ ಪ್ರಯಾಣವೆಂಬಂತೆ ಪೂಜಾ ಗಾಂಧಿ ಕವಿಶೈಲ ಪ್ರವಾಸ ನಡೆಸಿದ್ದಾರೆ. ಜೊತೆಗೆ ಕುಪ್ಪಳ್ಳಿಯ ಕುವೆಂಪು ಮನೆಗೂ ಭೇಟಿ ನೀಡಿದ್ದಾರೆ. ಕವಿಶೈಲದಲ್ಲಿ ಪತಿ ಜೊತೆಗಿನ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನವ ದಂಪತಿಗೆ ಶುಭ ಹಾರೈಸಿರುವ ಅಭಿಮಾನಿಗಳು ಪೂಜಾ ಗಾಂಧಿ ಅವರ ಸರಳತೆಗೆ ಹಾಗೂ ಕನ್ನಡ ಹಾಗೂ ಕುವೆಂಪು ಅವರ ಮೇಲಿನ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಪೂಜಾ ಗಾಂಧಿ ಕವಿಶೈಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಚ್ಚ ಹಸಿರಿನ ತಾಣ ಕವಿಶೈಲ ಎಂತವರನ್ನಾದರೂ ತನ್ನತ್ತ ಸೆಳೆಯುತ್ತದೆ. ಜೊತೆಗೆ ಕುವೆಂಪು ಮೇಲಿನ ಅಭಿಮಾನಕ್ಕೂ ಈ ಜಾಗಕ್ಕೆ ಭೇಟಿ ನೀಡುವವರಿದ್ದಾರೆ.

ಮತ್ತೆ ಮತ್ತೆ ಕನ್ನಡಿಗರ ಮನ ಗೆದ್ದ ಮಳೆ ಹುಡುಗಿ
ಮೊದಮೊದಲು ಕನ್ನಡ ಮಾತನಾಡಲು ತಡವರಿಸುತ್ತಿದ್ದ ಪೂಜಾ ಗಾಂಧಿ ಇದೀಗ ಸ್ವಚ್ಛವಾಗಿ ಕನ್ನಡ ಮಾತನಾಡುತ್ತಾರೆ. ಅಲ್ಲದೇ ಕನ್ನಡವನ್ನು ಬರೆಯಲು ಕೂಡ ಕಲಿತಿದ್ದಾರೆ. ಪೂಜಾ ಗಾಂಧಿ ಕನ್ನಡ ಅಕ್ಷರಗಳನ್ನು ಬರೆಯುವ ವಿಡಿಯೋ ಕೂಡ ವೈರಲ್ ಆಗಿತ್ತು. ಇದಲ್ಲದೇ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ತಾವೇ ಕೈಯಾರೆ ಕನ್ನಡದಲ್ಲಿ ಬರೆಯುವ ಮೂಲಕ ಪೂಜಾ ಗಾಂಧಿ ಮತ್ತೆ ಕನ್ನಡಿಗರ ಮನಸು ಗೆದ್ದಿದ್ದರು. ಕನ್ನಡ ಮೇಲಿನ ಇವರ ಅಭಿಮಾನಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.
ಕನ್ನಡ ಕಲಿಸಿದ ಗುರುವಿಗೆ ಮನಸೋತ ಪೂಜಾ ಗಾಂಧಿ
ಪೂಜಾ ಗಾಂಧಿ ಬೆಂಗಳೂರಿನ ಉದ್ಯಮಿ ಕನ್ನಡಿಗ ವಿಜಯ್ ಘೋರ್ಪಡೆ ಅವರನ್ನು ವಿವಾಹವಾದರು. ವಿಜಯ್ ಘೋರ್ಪಡೆ ಅವರು ಕೂಡ ಕನ್ನಡದ ಮೇಲೆ ಅಪಾರ ಅಭಿಮಾನ ಹೊಂದಿದ್ದು, ಪೂಜಾ ಗಾಂಧಿ ಅವರ ಕನ್ನಡ ಕಲಿಕೆಯ ಹಿಂದಿರುವುದು ಕೂಡ ಇವರಂತೆ. ಪೂಜಾ ಅವರ ಕನ್ನಡ ಕಲಿಕೆಗೆ ವಿಜಯ್ ಘೋರ್ಪಡೆ ನೆರವಾಗಿದ್ದಲ್ಲದೇ ಸ್ವತಃ ಅವರೇ ಕನ್ನಡ ಕಲಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications