Hema Choudhary: ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಾ ಚೌಧರಿ ಸ್ಥಿತಿ ಗಂಭೀರ: ಆಗಿದ್ದೇನು..?
ಬೆಂಗಳೂರು, ಡಿಸೆಂಬರ್ 20: ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಾ ಚೌಧರಿ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ನಟಿ ಹೇಮಾ ಚೌಧರಿ ಅವರು ಬ್ರೈನ್ ಹ್ಯಾಮರೇಜ್ನಿಂದ ಬಳಲುತ್ತಿದ್ದು, ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಹೇಮಾ ಚೌಧರಿ ಅವರಿಗೆ ಬ್ರೈನ್ ಹ್ಯಾಮರೇಜ್ ಇರುವುದು ತಿಳಿದು ಬಂದಿದ್ದು, ಸದ್ಯ ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಇನ್ನು ನಟಿ ಹೇಮಾ ಚೌಧರಿ ಅವರ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಅವರ ಮಗ ಐರ್ಲ್ಯಾಂಡ್‌ನಲ್ಲಿದ್ದು , ಕುಟುಂಬಸ್ಥರು ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇನ್ನು ಹಿರಿಯ ನಟಿಯ ಆರೋಗ್ಯದ ಬಗ್ಗೆ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆ ವೈದ್ಯರು ಅಧೀಕೃತವಾಗಿ ಮಾಹಿತಿ ನೀಡಬೇಕಾಗಿದೆ.
ನಟಿ ಹೇಮಾ ಚೌಧರಿ ಅವರು ದಕ್ಷಿಣ ಭಾರತ ಚಲನಚಿತ್ರರಂಗದ ಹೆಸರಾಂತ ಕಲಾವಿದೆ. ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಮತ್ತು ತಮಿಳು ಸುಮಾರು 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅವರು ಹೆಸರಾಂತ ಕೂಚಿಪುಡಿ ಕಲಾವಿದೆಯೂ ಆಗಿದ್ದಾರೆ. ಕನ್ನಡ ಸಿನಿಮಾಗಳು ಮಾತ್ರವಲ್ಲದೇ ಧಾರವಾಹಿಗಳಲ್ಲೂ ಅವರು ನಟಿಸಿದ್ದರು.
ಒಂದು ಕಾಲದಲ್ಲಿ ಕನ್ನಡ ಕಿರುತೆರೆ ವೀಕ್ಷಕರ ನೆಚ್ಚಿನ ಧಾರವಾಹಿ ಅಮೃತ ವರ್ಷಿಣಿಯಲ್ಲಿ ಶಕುಂತಲಾ ದೇವಿ ಎನ್ನುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಇತ್ತೀಚಿಗೆ ಹಿರಿಯ ನಟಿ ಲೀಲಾವತಿ ಅವರ ತಿಥಿಯ ದಿನ ಅವರ ಮನೆಗೆ ಭೇಟಿ ನೀಡಿ ವಿನೋದ್ ರಾಜ್ಗೆ ಸಾಂತ್ವನ ಹೇಳಿದ್ದರು. ಇದೀಗ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.












Click it and Unblock the Notifications