45 ವರ್ಷಕ್ಕೆ ದುರಂತ ಅಂತ್ಯ: ನಟ ಗಿರಿ ದಿನೇಶ್ ಸಾವಿಗೆ ಕಾರಣವೇನು?
ಕನ್ನಡ ಚಿತ್ರರಂಗದ ಹಿರಿಯ ನಟ ದಿನೇಶ್ ಅವರ ಪುತ್ರ ನವಗ್ರಹ ಖ್ಯಾತಿಯ ಗಿರಿ ದಿನೇಶ್ ಫೆಬ್ರವರಿ 07 ಶುಕ್ರವಾರದಂದು ವಿಧಿವಶರಾದರು. ಮನೆಯಲ್ಲಿ ಪೂಜೆ ಮಾಡುವ ವೇಳೆ ಗಿರಿ ದಿನೇಶ್ ಅವರು ಏಕಾಏಕಿ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಕುಟುಂಬಸ್ಥರು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದರು ಆದರೆ, ದುರಾದೃಷ್ಟವಶಾತ್ ಗಿರಿ ದಿನೇಶ್ ಮಾರ್ಗ ಮಧ್ಯವೇ ನಿಧನರಾದರು.
ಗಿರಿ ದಿನೇಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ನವಗ್ರಹ ಚಿತ್ರದಲ್ಲಿ ನಟಿಸಿದ್ದರು. ಚಮ್ಕಾಯ್ಸು ಚಿಂದಿ ಉಡಾಯ್ಸು, ವಜ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಗಿರಿ ದಿನೇಶ್ ಅವರಿಗೆ ನಟನೆಯಲ್ಲಿ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ವೃತ್ತಿ ಹಾಗೂ ವೈಯಕ್ತಿಕ ಎರಡರಲ್ಲೂ ಸೋಲು ಕಂಡಿದ್ದ ಗಿರಿ ದಿನೇಶ್ 45 ವರ್ಷವಾದರೂ ಮದುವೆ ಕೂಡ ಆಗಿದೇ ಒಬ್ಬಂಟಿಯಾಗಿದ್ದರು.

ಇದೀಗ ನಟ ಗಿರಿ ದಿನೇಶ್ ಅವರಿಗೆ ಏನಾಗಿತ್ತು? ಏನಾಯ್ತು? ಎನ್ನುವುದರ ಬಗ್ಗೆ ಗಿರಿ ದಿನೇಶ್ ಆಪ್ತ ನಟ ನಾಗೇಂದ್ರ ಅರಸ್ ಮಾತನಾಡಿದ್ದಾರೆ. 'ಕೇಳಿದಾಗೆಲ್ಲಾ ಆರಾಮಾಗಿದ್ದೇನೆ ಎಂದು ಹೇಳುತ್ತಿದ್ದ. ಅವನು ಒಂಥರಾ ಸ್ವಾಭಿಮಾನಿ. ನಾನು ಕೆಲವು ಸಿನಿಮಾಗಳನ್ನು ಹೇಳಿದ್ದೆ. ದರ್ಶನ್ ಅವರು ಕೂಡ ಒಂದಿಷ್ಟು ಸಿನಿಮಾಗಳ ಅವಕಾಶದ ಬಗ್ಗೆ ಹೇಳಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ ಹೋಗಲಿಲ್ಲ ಅವರು. ಅವರ ವೈಯಕ್ತಿಕ ವಿಚಾರದ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ' ಎಂದರು.
'ಒಬ್ಬರು ಒಳ್ಳೆಯ ನಟ. ಮೇರು ನಟನ ಮಗ ಅಂತಾ ಅಂದಾಗ ನಮಗೆ ಇನ್ನೂ ಒಂಥರಾ ಜಾಸ್ತಿ ಸೆಂಟಿಮೆಂಟ್ ಇರುತ್ತದೆ. ನವಗ್ರಹದಲ್ಲಿ ನಮ್ಮ ಜೊತೆಗೆ ನಟನೆ ಮಾಡಿದ್ದರು. ಹೀಗಾಗಿ ನಾವು ಕೂಡ ಒಂದಿಷ್ಟು ಸಿನಿಮಾಗಳನ್ನು ಹೇಳಿದ್ದೇವು. ಆದರೆ ಅಲ್ಲಿ ಏನಾಯ್ತೋ ನಮಗೆ ಗೊತ್ತಿಲ್ಲ. ಕ್ರಮೇಣ ನಾನು ನನ್ನ ಸಿನಿಮಾದಲ್ಲಿ ಬ್ಯೂಸಿಯಾದೆ' ಎಂದು ಹೇಳಿದರು.

'ಎರಡು ಮೂರು ತಿಂಗಳ ಹಿಂದೆ ನೋಡಿದ್ದೇನೆ. ಮನೆಗೆ ಬಾ ಅಂದೆ ಇಲ್ಲಾ ಬೇರೆ ಯಾರಿಗೋ ಕಾಯುತ್ತಿದ್ದೇನೆ ಅಂದ್ರು. ಅದೇ ಕೊನೆಯ ಭೇಟಿ. ಅದಾದ ಮೇಲೆ ಫೋನ್‌ನಲ್ಲಿ ಮಾತನಾಡಿದ್ದೆ. ನವಗ್ರಹ ಪ್ರಮೋಷನ್ ಸಮಯದಲ್ಲಿ ಫೋನ್ ಮಾಡಿದ್ದೆ ದಿನಕರ್ ಸರ್‌ಗೆ ಒಕೆ ಅಂತಾ ಸಹ ಹೇಳಿದ್ದರು.
ಆದರೆ ನನಗೆ ಫೋನ್ ಮಾಡಿ ಆಗಲ್ಲ. ಮೆಡಿಸಿನ್ ತೆಗೆದುಕೊಳ್ಳುತ್ತಿದ್ದೇನೆ. ಟೈಫಾಡ್ ಬಂದಿತ್ತು ಹೀಗಾಗಿ ಬರೋಕಾಗಲ್ಲ. ನೀವು ಹೋಗಿ ಬನ್ನಿ ಎಂದಿದ್ದರು. ತುಂಬಾ ವೀಕ್ ಆಗಿದ್ದ. ನನಗೂ ಗುರುತು ಹಿಡಿಯಲು ಆಗಲಿಲ್ಲ. ನವಗ್ರಹ ರೀ-ರಿಲೀಸ್ ಸಮಯದಲ್ಲೇ ಕೊನೆಯದಾಗಿ ಫೋನ್ ಮಾಡಿರುವುದು' ಎಂದು ನ್ಯಾಷನಲ್ ಟಿವಿಗೆ ನೀಡಿದ ಸಂದರ್ಶನದಲ್ಲಿ ನಾಗೇಂದ್ರ ಅರಸ್ ಮಾತನಾಡಿದ್ದಾರೆ.












Click it and Unblock the Notifications