Dileep Raj: 'ಮಿಲನ, ಹಿಟ್ಲರ್ ಕಲ್ಯಾಣ' ಖ್ಯಾತಿಯ ನಟ ದಿಲೀಪ್ ರಾಜ್ ನಿಧನ, ಸ್ಯಾಂಡಲ್‌ವುಡ್‌ನಲ್ಲಿ ಶೋಕ
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಮತ್ತೊಂದು ದೊಡ್ಡ ಆಘಾತ ಉಂಟಾಗಿದೆ. ನಟ, ನಿರ್ಮಾಪಕ ದಿಲೀಪ್ ರಾಜ್ (Actor Dileep Raj) ಅವರು ಹೃದಯಾಘಾತದಿಂದ ಇಂದು ನಿಧನರಾದರು. 47 ವಯಸ್ಸಿನ ದಿಲೀಪ್ ರಾಜ್ ಅವರಿಗೆ ಇಂದು ಬುಧವಾರ (ಮೇ 13) ಬೆಳಗಿನ ಜಾವ ಹೃದಯಾಘಾತ ಸಂಭವಿಸಿತ್ತು. ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ನಟ ದಿ.ಪುನೀತ್ ರಾಜ್ ಕುಮಾರ್ ಅಭಿನಯನದ 'ಮಿಲನ' ಸಿನಿಮಾ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. 'ಹಿಟ್ಲರ್ ಕಲ್ಯಾಣ' ಧಾರವಾಹಿ ಮೂಲಕ ಕಮ್ ಬ್ಯಾಕ್ ಮಾಡಿದ್ದ ನಟ ಮನೆ ಮಾತಾಗಿದ್ದರು. ಇಂತಹ ಪ್ರತಿಭಾನ್ವಿತ ನಟ ಇಂದು ಆಪ್ತರು, ಕುಟುಂಬವನ್ನು ಅಗಲಿದ್ದಾರೆ.

ಕಿರುತೆರೆಯಿಂದಲೇ ಬೆಳ್ಳಿತೆರೆಗೆ ಬಂದಿದ್ದ ಅವರು ಕೆಲವು ಸಿನಿಮಾಗಳ ಬಳಿಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಮತ್ತು ಟಿವಿ ಎರಡರಲ್ಲೂ ತೊಡಗಿಕೊಂಡಿದ್ದರು. 2005ರಲ್ಲಿ ತೆರೆ ಕಂಡಿದ್ದ 'ಬಾಯ್ ಫ್ರೆಂಡ್' ಸಿನಿಮಾದಲ್ಲಿ ನಾಯಕ ನಟರಾಗಿ ಬಣ್ಣಲೋಕ ಪ್ರವೇಶಿಸಿದ್ದರು. ಇನ್ನೂ ಅಪ್ಪು ಅಭಿನಯನದ 'ಮಿಲನ' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಪ್ರಮುಖ ಸಿನಿಮಾಗಳಲ್ಲಿ ನಟನೆ
2005ರಲ್ಲಿ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಿದರು, ನಾಯಕನ ಪಾತ್ರವು ಅವರ ಕೈ ಹಿಡಿಯಲಿಲ್ಲ. ಬಳಿಕ ಅವರು 2007ರಲ್ಲಿ ತೆರೆಗೆ ಬಂದು ಭರ್ಜರಿ ಪ್ರದರ್ಶನ ನೀಡಿದ 'ಮಿಲನ' ಸಿನಿಮಾದಲ್ಲಿ ನೆಗಟಿವ್ ರೋಲ್ ಮಾಡಿದ್ದರು. ಇದರೊಂದಿಗೆ ಕನ್ನಡದ 'ಕ್ಷಣ ಕ್ಷಣ, 7 ಓಕ್ಲಾಕ್, ಲವ್ ಗುರು' ಮತ್ತು ಇತ್ತೀಚೆಗೆ ತೆರೆ ಕಂಡ 'ಲವ್ ಮಾಕ್ಟೇಲ್ 3' ಸೇರಿ ಕೆಲವು ಸಿನಿಮಾಗಳಲ್ಲಿ ನಾಯಕ ನಟ ಸ್ನೇಹಿನಾಗಿ, ಪೋಷಕ ಪಾತ್ರಗಳಲ್ಲಿ ದಿಲೀಪ್ ರಾಜ್ ನಟಿಸಿದ್ದಾರೆ. ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿಯೂ ಅವರು ಕಾಣಿಸಿಕೊಂಡಿದ್ದರು.
'ಹಿಟ್ಲರ್ ಕಲ್ಯಾಣ' ಧಾರಾವಾಹಿಗೆ ಇವರೇ ನಿರ್ಮಾಪಕ
ಕನ್ನಡದ 'ರಥಸಪ್ತಮಿ' ಧಾರಾವಾಹಿಯೊಂದಿಗೆ ಕಿರುತೆರೆಗೆ ಮರಳಿದ್ದ ದಿಲೀಪ್ ರಾಜ್, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಟಿಸಿದ್ದರು. ವಿಶೇಷವೆಂದರೆ ಆ ಧಾರಾವಾಹಿಯನ್ನು ಅವರೇ ನಿರ್ಮಿಸಿದ್ದರು. ಅದರಲ್ಲಿ ಅವರ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ "ಕೃಷ್ಣ ರುಕ್ಕು" ನಿರ್ಮಾಪಕರು ಇವರೇ ಆಗಿದ್ದಾರೆ. ಕಿರುತೆರೆ, ಬೆಳ್ಳಿತೆರೆಗಳಲ್ಲಿ ಸಕ್ರಿಯರಾಗಿದ್ದ ದಿಲೀಪ್ ರಾಜ್ ಸಾವು ಚಿತ್ರರಂಗಕ್ಕೆ, ಅವರ ಆಪ್ತರು, ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ. ಅಂತ್ಯ ಕ್ರಿಯೆ ಕುರಿತು ಕುಟುಂಬ ಮೂಲಗಳಿಂದ ಇನ್ನೇನು ಮಾಹಿತಿ ದೊರೆಯಲಿದೆ.
ಅಂತಿಮ ದರ್ಶನಕ್ಕೆ ವ್ಯವಸ್ಥೆ: ಇಂದು ಸಂಜೆ ಅಂತ್ಯಕ್ರಿಯೆ
ಬೆಂಗಳೂರಿನ ಉತ್ತರಹಳ್ಳಿ ನಿವಾಸದಲ್ಲಿ ನಟ ದಿಲೀಪ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಿನಿಮಾ, ಸೀರಿಯಲ್ ಸಹ ಕಲಾವಿದರ ಬಂದು ಅಂತಿಮ ದರ್ಶನ ಪಡೆದು ಕಣ್ಣೀರಿಡುತ್ತಿದ್ದಾರೆ. ಇಂದು ಸಂಜೆ ಅವರ ಫಾರ್ಮ್ ಹೌಸ್‌ನಲ್ಲಿ ಅಂತಿಮ ವಿಧಾನಗಳು, ಅಂತ್ಯಕ್ರಿಯೆ ನೆರವೇರಲಿವೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.













Click it and Unblock the Notifications