Instagram: ಎಚ್ಚರ..! ರೀಲ್ಸ್ ನೋಡುವುದರಿಂದಲೂ ನಿಮ್ಮ ತೂಕ ಹೆಚ್ಚಾಗುತ್ತದೆ
ಸಾಮಾಜಿಕ ಜಾಲತಾಣ..ಅದೊಂತರ ಜಾಲವೇ ಸರಿ. ಒಮ್ಮೆ ಇದರ ಒಳ ಹೊಕ್ಕವರು ಮತ್ತೆ ಹೊರಗೆ ಬರುವುದು ತುಂಬಾ ಕಷ್ಟ. ನಮ್ಮ ದಿನದ ಹೆಚ್ಚಿನ ಸಮಯವನ್ನು ಇದು ಆವರಿಸಿಕೊಂಡರೆ ಆಶ್ಚರ್ಯವೇನಿಲ್ಲ. ಕೆಲವರು ಸಾಮಾಜಿಕ ಜಾಲತಾಣದಿಂದ ಬದುಕು ಕಟ್ಟಿಕೊಂಡಿದ್ದರೆ, ಇನ್ನು ಕೆಲವರು ಸಾಮಾಜಿಕ ಜಾಲತಾಣ ನೋಡುವುದರಲ್ಲೇ ಬದುಕು ಕಳೆಯುತ್ತಾರೆ. ಅಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣ ನಮ್ಮನ್ನು ಆವರಿಸಿಕೊಂಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸದವರೇ ಬಹಳ ಕಡಿಮೆ ಎಂದು ಹೇಳಬಹುದು. ಬಹುತೇಕರು ಕನಿಷ್ಠ ಒಂದು ಗಂಟೆಗೆ ಒಮ್ಮೆಯಾದರೂ ಇನ್ಸ್ಟಾಗ್ರಾಮ್ ರೀಲ್ಸ್ ಓಪನ್ ಮಾಡುತ್ತಾರೆ. ಒಮ್ಮೆ ಇನ್ಸ್ಟಾಗ್ರಾಮ್ ರೀಲ್ಸ್ ತೆರೆದವರು ತಮಗೆ ಅರಿವಿಲ್ಲದಂತೆ ಅನೇಕ ಸಮಯವನ್ನು ಅದರಲ್ಲೇ ಕಳೆಯುತ್ತಾರೆ. ಇದರಿಂದ ಬಹುತೇಕರಿಗೆ ಕಣ್ಣಿನ ಸಮಸ್ಯೆ ಉಂಟಾಗುತ್ತಿದೆ. ಇದರ ಜೊತೆಗೆ ರೀಲ್ಸ್ ನೋಡುವುದರಿಂದ ನಿಮ್ಮ ತೂಕ ಕೂಡ ಹೆಚ್ಚಾಗುತ್ತದೆಯಂತೆ.

ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಒಮ್ಮೆ ನೀವು ಸ್ಕ್ರೋಲಿಂಗ್ ಮಾಡಲು ಪ್ರಾರಂಭಿಸಿದರೆ, ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಇದರಲ್ಲಿ ನೀವು ಯಾವ ರೀಲ್ಸ್‌ಗಳನ್ನು ನೋಡುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ. ನೀವು ಒಮ್ಮೆ ಒಂದು ರೀಲ್ಸ್ ಅನ್ನು ನೋಡಿ ಇಷ್ಟಪಟ್ಟು ಲೈಕ್ ಮಾಡಿದರೆ ಅದೇ ವಿಡಿಯೋಗಳು ಮತ್ತೆ ಮತ್ತೆ ಬರುತ್ತದೆ. ಹೀಗಾಗಿ ಇನ್ಸ್ಟಾಗ್ರಾಮ್‌ನಲ್ಲಿ ನೀವು ಆಹಾರಕ್ಕೆ ಸಂಬಂಧಿಸಿದಂತೆ ಅತಿಯಾಗಿ ರೀಲ್ಸ್ ನೋಡುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಆಹಾರಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಹೀಗಾಗಿ ಫುಡ್ ಲಾಗ್ ವಿಡಿಯೋಗಳಿಗೆ ಹೆಚ್ಚಿನ ವ್ಯೂವ್ಸ್ ಹಾಗೂ ಲೈಕ್ಸ್ ಬರುತ್ತದೆ. ನೀವು ಒಮ್ಮೆ ಈ ಆಹಾರದ ವಿಡಿಯೋಗಳನ್ನು ನೋಡಲು ಆರಂಭಿಸಿದರೆ ಮತ್ತೆ ಮತ್ತೆ ಅದೇ ವಿಡಿಯೋ ನಿಮ್ಮ ಕಣ್ಣಿಗೆ ಬೀಳುತ್ತದೆ. ಹೀಗಾಗಿ ನಿಮ್ಮಲ್ಲಿ ಆಹಾರದ ಮೇಲಿನ ಒಲವು ಹೆಚ್ಚುತ್ತದೆ. ಜೊತೆಗೆ ಬಯಕೆ ಕೂಡ ಹೆಚ್ಚಾಗುತ್ತದೆ.
ಅರದಲ್ಲೂ ಎಣ್ಣೆ ಪದಾರ್ಥಗಳನ್ನು ಬಹಳ ಆಕರ್ಷಕವಾಗಿ ಈ ರೀಲ್ಸ್‌ನಲ್ಲಿ ತೋರಿಸಲಾಗುತ್ತದೆ. ಇದರಿಂದ ತಿನ್ನಲೇ ಬೇಕು ಎನ್ನುವ ಆಸೆ ನಿಮ್ಮಲ್ಲಿ ಹೆಚ್ಚಾಗುತ್ತದೆ. ಜೊತೆಗೆ ರೀಲ್ಸ್‌ನಲ್ಲಿ ಇಂತಹ ಆಹಾರ ಸಿಗುವ ಸ್ಥಳಗಳ ವಿವರ ಹಾಗೂ ಆರ್ಡರ್ ಮಾಡುವ ಸುಲಭ ವಿಧಾನಗಳನ್ನು ನೀಡಲಾಗಿರುತ್ತದೆ. ಹೀಗಾಗಿ ಕೂಡಲೇ ಆರ್ಡರ್ ಮಾಡಿಯೋ ಅಥವಾ ಆ ಸ್ಥಳಗಳಿಗೆ ಭೇಟಿ ನೀಡಿ ತಿನ್ನಲು ಪ್ರಾರಂಭಿಸುತ್ತೀರಿ. ಕಣ್ಣಿಗೆ ಆಕರ್ಷಿಕವಾಗುವ ತಿನಿಸುಗಳನ್ನೇ ಹೆಚ್ಚಾಗಿ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ.

ಇನ್ನು ರೀಲ್ಸ್ ನೋಡುವುದರಿಂದ ನಿಮ್ಮ ಬೆರಳುಗಳು ಸ್ಕ್ರೋಲಿಂಗ್ ಮಾಡುತ್ತಲೇ ಇರುತ್ತವೆ, ಕಣ್ಣುಗಳು ಮೊಬೈಲ್ ಮೇಲೆಯೇ ನೆಟ್ಟಿರುತ್ತದೆ. ಮೆದುಳಿನ ಡೋಪಮೈನ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಮೊಬೈಲ್ ಜೊತೆ ಒಂದೇ ಸ್ಥಳದಲ್ಲಿದ್ದು, ರೀಲ್ಸ್ ನೋಡುವುದರಿಂದ ದೈಹಿಕ ಚಟುವಟಿಕೆಯ ಕೊರತೆಗೆ ಕಾರಣವಾಗುತ್ತದೆ. ಇದರಿಂದ ಜಡತ್ವ ಉಂಟಾಗಿ ದೇಹದ ತೂಕ ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.












Click it and Unblock the Notifications