Sarigama Viji: ಹಿರಿಯ ನಟ ಸರಿಗಮ ವಿಜಿ ಸಿನಿ ಜರ್ನಿ ಹೇಗಿತ್ತು?
ವಯೋ ಸಹಜ ಕಾಯಿಲೆಗಳಿಂದಾಗಿ ಇಂದು ಹಿರಿಯ ನಟ ಸರಿಗಮ ವಿಜಿ ವಿಧಿವಶರಾಗಿದ್ದಾರೆ. ನಟ ಸರಿಗಮ ವಿಜಿ ಅವರಿಗೆ 76 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆ, ಶ್ವಾಸಕೋಶದ ಸೋಂಕು ಹೀಗೆ ಕೆಲ ಅನಾರೋಗ್ಯ ಕಾರಣಗಳಿಂದಾಗಿ ಅವರನ್ನು ಒಂದು ವಾರದ ಹಿಂದೆ ಬೆಂಗಳೂರಿನ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸರಿಗಮ ವಿಜಿ ಯಾರು? ಇವರು ಕನ್ನಡ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆ ಎಂಥದ್ದು? ಎಲ್ಲವನ್ನೂ ತಿಳಿಯೋಣ.
ಸರಿಗಮ ವಿಜಿ ಸಿನಿ ಜರ್ನಿ ಹೇಗಿತ್ತು?
ಬೆಂಗಳೂರಿನ ವಿಮಾನಪುರದಲ್ಲಿ (ಎಚ್‌ಎಎಲ್ ಪ್ರದೇಶ) ಸರಿಗಮ ವಿಜಿ ಜನಿಸಿದರು. ಸರಿಗಮ ವಿಜಿ ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಎನ್‌ಜಿಇಎಫ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರ ನಿಜವಾದ ಹೆಸರು ಆರ್ ವಿಜಯ್ ಕುಮಾರ್. ಸಿನಿಮಾರಂಗದಲ್ಲಿ ಇವರು 'ಸರಿಗಮ ವಿಜಿ' ಎಂದು ಖ್ಯಾತಿ ಪಡೆದುಕೊಂಡಿದ್ದಾರೆ. ಇವರಿಗೆ ಈ ಖ್ಯಾತಿ ತಮದು ಕೊಟ್ಟಿದ್ದು 'ಸಂಸಾರದಲ್ಲಿ ಸರಿಗಮ' ನಾಟಕ. ಇದು ಅವರೇ ನಿರ್ದೇಶಿಸಿ ನಟಿಸಿದ ನಾಟಕ ಇದಾಗಿದೆ. ಇದು ಹೈದರಾಬಾದ್, ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮುಂತಾದ 1390 ಕಡೆಗಳಲ್ಲಿ ನಾಟಕ ಪ್ರದರ್ಶನ ಕಂಡಿತ್ತು. ಇದೇ ನಾಟಕ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಹೀಗಾಗಿ ಇವರನ್ನು ಸರಿಗಮ ವಿಜಿ ಎಂದು ಕರೆಯುತ್ತಾರೆ.

ನಾಟಕದ ನಂಟು ಹೊಂದಿದ್ದ ಸರಿಗಮ ವಿಜಿ ಸಿನಿರಂಗಕ್ಕೆ ಹೆಜ್ಜೆ ಇಟ್ಟರು. 'ಬೆಳುವಲದ ಮಡಿಲಲ್ಲಿ' ಚಿತ್ರದಲ್ಲಿ ಸಹ ನಿರ್ದೇಶಕರಾಗಿ, ನಟನಾಗಿ ಸಿನಿಮಾ ಜರ್ನಿಯನ್ನು ಆರಂಭಿಸಿದರು. ದುರ್ಹಿ, ಕೆಂಪಯ್ಯ ಐಸಿಎಸ್, ಜಗತ್ ಕಿಲಾಡಿ, ಕಪ್ಪು ಹೊಲ, ಮನ ಮೆಚ್ಚಿದ ಸೊಸೆ, ಯಮಲೋಕದಲ್ಲಿ ವೀರಪ್ಪನ್, ಡಕೋಟ ಎಕ್ಸಪ್ರೆಸ್ ಸೇರಿದಂತೆ 269ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಸರಿಗಮ ವಿಜಿ ಜನಪ್ರಿಯತೆ ಪಡೆದಿದ್ದಾರೆ.
ಇದಲ್ಲದೆ 80 ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿ, 2400 ಧಾರಾವಹಿಗಳ ನಿರ್ದೇಶನದ ಜೊತೆಗೆ ನಟನೆ ಮಾಡಿದ್ದಾರೆ. ಇವರ ನಟನೆಯ ಚಿತ್ರಗಳ ಪಟ್ಟಿಯಲ್ಲಿ ಟೈಗರ್ ಪ್ರಭಾಕರ್ ಚಿತ್ರಗಳೇ ಹೆಚ್ಚಾಗಿವೆ. ದರ್ಶನ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಶಂಕರ್‌ನಾಗ್, ಕಲ್ಯಾಣ್‌ಕುಮಾರ್, ಅನಂತನಾಗ್, ಅಂಬರೀಶ್, ವಿಷ್ಣವರ್ಧನ್, ಟೈಗರ್ ಪ್ರಭಾಕರ್, ದೇವರಾಜ್ ಮುಂತಾದ ನಟರ ಜೊತೆ ವಿಜಯ್ ಕುಮಾರ್ ತೆರೆ ಹಂಚಿಕೊಂಡಿದ್ದಾರೆ. ಇವರ ಈ ಸಾಧನೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಶ್ರೀಕೃಷ್ಣದೇವರಾಯ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.
ಸರಿಗಮ ವಿಜಿ ಅಂತ್ಯಕ್ರಿಯೆ ಯಾವಾಗ?
ಸರಿಗಮ ವಿಜಿ ಅವರ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ನಿವಾಸಕ್ಕೆ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ರವಾನಿಸಲಾಗುತ್ತದೆ. ನಾಳೆ ಅಂದರೆ ಗುರುವಾರ (ಜನವರಿ 16) ಬೆಳಗ್ಗೆ 10 ರಿಂದ 12 ಗಂಟೆ ಹೊತ್ತಿಗೆ ಚಾಮರಾಜಪೇಟೆಯ ಟಿಆರ್ ಮಿಲ್ ಬಳಿ ಬರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಮದು ಕುಟುಂಬದ ಮೂಲಗಳು ತಿಳಿಸಿವೆ.












Click it and Unblock the Notifications