Hostel Hudugaru: ‘ಹಾಸ್ಟೆಲ್ ಹುಡುಗರು’ ಒಟಿಟಿ ಎಂಟ್ರಿಗೆ ಮುಹೂರ್ತ!
ಕನ್ನಡ ಸಿನಿಮಾ ಅಭಿಮಾನಿಗಳನ್ನು ನಗಿಸಿ, ಸಖತ್ ಎಂಟರ್‌ಟೈನ್‌ಮೆಂಟ್ ನೀಡಿದ್ದ ಚಿತ್ರ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'. ಹೀಗೆ ದಾಖಲೆ ಮೇಲೆ ದಾಖಲೆ ಬರೆದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರ ತೆಲುಗು ಭಾಷೆಗೂ ಡಬ್ಬಿಂಗ್ ಆಗಿ ಅಬ್ಬರಿಸಿದೆ. ಆದ್ರೆ ಈ ಸಿನಿಮಾ ಒಟಿಟಿಗೆ ಬರೋದು ಯಾವಾಗ? ಅನ್ನೋ ಡೌಟ್ ಕಾಡುತ್ತಿತ್ತು. ಇದೀಗ ಹಾಸ್ಟೆಲ್ ಹುಡುಗರ ಒಟಿಟಿ ಅಬ್ಬರಕ್ಕೆ ಟೈಂ ಫಿಕ್ಸ್ ಆಗಿದೆ.
ಒಟಿಟಿ ಜಮಾನದಲ್ಲಿ ಜನರು ಸಿನಿಮಾ ಥಿಯೇಟರ್‌ಗೆ ಬರೋದಿಲ್ಲ ಅನ್ನೋ ಕೊರಗು ಭಾರಿ ಆತಂಕ ಮೂಡಿಸಿತ್ತು. ಅದ್ರಲ್ಲೂ ಕನ್ನಡದಲ್ಲಿ ಜೇಮ್ಸ್, ಕೆಜಿಎಫ್, ಕಾಂತಾರ, ವಿಕ್ರಾಂತ್ ರೋಣ, 777 ಚಾರ್ಲಿ, ಗಂಧದ ಗುಡಿ, ವೇದ ಬಿಟ್ಟರೆ ಕಳೆದ ಒಂದೂವರೆ ವರ್ಷಗಳಲ್ಲಿ ಅಷ್ಟು ಸದ್ದು ಮಾಡಿದ ಸಿನಿಮಾ ಬರಲೇ ಇಲ್ಲ. ಹೀಗಾಗಿ ಮತ್ತೆ ಕನ್ನಡ ಸಿನಿಮಾ ರಂಗ ಕುಸಿದು ಹೋಗುತ್ತೆ ಅನ್ನೋ ಭಯ ಹುಟ್ಟಿತ್ತು. ಅದರಲ್ಲೂ ಆಧುನಿಕ ಜಮಾನದಲ್ಲಿ ಚಿತ್ರರಂಗಕ್ಕೆ ಈ ಭಯ ಹೆಚ್ಚಾಗಿತ್ತು.

ದಾರಿ ಬಿಡಿ.. ದಾರಿ ಬಿಡಿ..
ಆದರೆ ಈ ಮಾತನ್ನು ಮತ್ತೆ ಸುಳ್ಳಾಗಿಸಿ ಫ್ಯಾನ್ಸ್ ಸೆಳೆಯಲು ಯಶಸ್ವಿಯಾಗಿದ್ದು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರ. ಬಾಕ್ಸ್ ಆಫಿಸ್‌ನಲ್ಲಿ ಕೋಟಿ ಕೋಟಿ ಬಾಚುವ ಜೊತೆಗೇ, ಜನರು ಕುಟುಂಬ ಸಮೇತ ಕೂತು ನೋಡುವ ಅವಕಾಶ ಕಲ್ಪಿಸಿತ್ತು. ಈಗ ಇದೇ ಸಿನಿಮಾ ಒಟಿಟಿ ಅಖಾಡದಲ್ಲಿ ಅಬ್ಬರಿಸಲು ಸಜ್ಜಾಗಿದೆ. ZEE5 ಮೂಲಕ ಒಟಿಟಿಗೆ ಈಗ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಎಂಟ್ರಿ ಕೊಡುತ್ತಿದ್ದು, ಡೇಟ್ ಕೂಡ ಫೈನಲ್ ಆಗಿದೆ. ಅರೆ ಆ ದಿನಾಂಕ ಯಾವುದು ಗೊತ್ತಾ? ಮುಂದೆ ಓದಿ.
ಒಟಿಟಿಗೆ ಹಾಸ್ಟೆಲ್ ಹುಡುಗರು ಎಂಟ್ರಿ!
ಅಂದಹಾಗೆ ಕರ್ನಾಟಕದಲ್ಲಿ ರಿಲೀಸ್ ಆಗಿ ಕೋಟಿ ಕೋಟಿ ಬಾಚಿ ಹಾಗೂ ಕನ್ನಡಿಗರ ಹೃದಯ ಗೆದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ತೆಲುಗು ಚಿತ್ರರಂಗದಲ್ಲೂ ಸದ್ದು ಮಾಡಿತ್ತು. ಈ ಸಿನಿಮಾ ನೋಡಿದ್ದ ಕನ್ನಡಿಗರು ಹೊಟ್ಟೆ ಹಿಡಿದುಕೊಂಡು ನಕ್ಕಿದ್ದರು. ತೆಲುಗಿನಲ್ಲಿ 'ಬಾಯ್ಸ್ ಹಾಸ್ಟೆಲ್' ಟೈಟಲ್ ಅಡಿಯಲ್ಲಿ ರಿಲೀಸ್ ಆಗಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'ಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಸೆಪ್ಟೆಂಬರ್ 15ರಂದು ಚಿತ್ರ ಒಟಿಟಿ ಅಖಾಡಕ್ಕೆ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ. ಈಗಲೂ ತೆಲುಗು ಭಾಷೆಯಲ್ಲಿ ಚಿತ್ರ ಉತ್ತಮ ಪ್ರದರ್ಶನವನ್ನೇ ಕಾಣುತ್ತಿದೆ.

ತೆಲುಗು ಚಿತ್ರರಂಗದಲ್ಲೂ ಕನ್ನಡದ ಕಂಪು
ಪ್ಯಾನ್ ಇಂಡಿಯಾ ಜಮಾನದಲ್ಲಿ ಕನ್ನಡ ಚಿತ್ರಗಳಿಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಅದ್ರಲ್ಲೂ ಕೆಜಿಎಫ್ ಮತ್ತು ಕಾಂತಾರ ಸಿನಿಮಾ ನಂತರ ಕನ್ನಡ ಸಿನಿಮಾಗಳ ಖದರ್‌ಗೆ ಬಾಲಿವುಡ್ ಕೂಡ ಶೇಕ್ ಆಗಿದೆ. ಹೀಗಿದ್ದಾಗ ಕನ್ನಡದ ಉತ್ತಮ ಚಿತ್ರಗಳನ್ನು ಪರಭಾಷೆ ಜನರು ಪ್ರೀತಿಸುತ್ತಿದ್ದಾರೆ. ಈ ಪ್ರಯತ್ನದ ಭಾಗವಾಗಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತೆಲುಗು ಭಾಷೆಗೂ ಡಬ್ ಆಗಿ, ಟಾಲಿವುಡ್ ಚಿತ್ರರಂಗದಲ್ಲೂ ಗೆದ್ದು ಬೀಗಿದೆ.
ಹೊಸಬರ ಪ್ರಯತ್ನಕ್ಕೆ ಬಿಗ್ ಸಕ್ಸಸ್
ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಪ್ರಯತ್ನದ ಫಲವಾಗಿ ಹಾಸ್ಟೆಲ್ ಹುಡುಗರು ತೆರೆಯ ಮೇಲೆ ಅಬ್ಬರಿಸಿದೆ. ಈ ಸಿನಿಮಾ ರಾಜ್ಯ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯ ಹಾಗೂ ವಿದೇಶದಲ್ಲಿಯೂ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ಕಾಮಿಡಿ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಟ್ಟಿತ್ತು. ಈಗ ಆಂಧ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ಬಾಯ್ಸ್ ಹಾಸ್ಟೆಲ್ ಹೆಸರಿನಡಿ ತೆಲುಗು ಭಾಷೆಗೆ ಡಬ್ ಆಗಿ ರಿಲೀಸ್ ಆಗಿ ಸದ್ದು ಮಾಡಿತ್ತು.
ರಿಷಬ್, ಪವನ್, ಶೈನ್ ಶೆಟ್ಟಿ ಸಾಥ್
ಚಾಯ್ ಬಿಸ್ಕೆಟ್ ಫಿಲ್ಮ್ಸ್ & ಅನ್ನಪೂರ್ಣ ಸ್ಟುಡಿಯೋಸ್ ಜಂಟಿಯಾಗಿ ತೆಲುಗಿನಲ್ಲಿ 'ಬಾಯ್ಸ್ ಹಾಸ್ಟೆಲ್' ಶೀರ್ಷಿಕೆಯಲ್ಲಿ ಚಿತ್ರವನ್ನ ರಿಲೀಸ್ ಮಾಡಿವೆ. ಕನ್ನಡದಲ್ಲಿ ಚಿತ್ರವನ್ನು ನಟ ರಕ್ಷಿತ್ ಶೆಟ್ಟಿ ತಮ್ಮ ಪರವಃ ಪಿಕ್ಚರ್ಸ್ ಬ್ಯಾನರ್ ಅಡಿ ಪ್ರೆಸೆಂಟ್ ಮಾಡಿದ್ದರು. ರಂಗಭೂಮಿ ಹಿನ್ನೆಲೆ ಹೊಂದಿದ ಈ ಪ್ರತಿಭಾನ್ವಿತರ ತಂಡಕ್ಕೆ ರಿಷಬ್ ಶೆಟ್ಟಿ, ರಮ್ಯಾ, ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ & ಇನ್ನಿತರರು ಸಾಥ್ ಕೊಟ್ಟಿದ್ದರು.












Click it and Unblock the Notifications