Gilli Nata: ಅಭಿಮಾನಿಗಳಿಗೆ ವಿಶೇಷ ಸಂದೇಶ ಹಂಚಿಕೊಂಡ ಗಿಲ್ಲಿ ನಟ, ಇಲ್ಲಿದೆ ವಿಡಿಯೋ
Gilli Nata: ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿಜೇತರಾದ ಗಿಲ್ಲಿ ನಟ ಅಭಿಮಾನಿಗಳಿಗೆ ಹಾಗೂ ತಮಗೆ ಬೆಂಬಲ ಸೂಚಿಸಿದವರಿಗೆ ವಿಡಿಯೋದ ಮೂಲಕ ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ. ಬಿಗ್‌ಬಾಸ್‌ನಲ್ಲಿ ಈ ಬಾರಿ ಒನ್ ಮ್ಯಾನ್ ಶೋ ಎನ್ನುವಂತೆ ಗಿಲ್ಲಿ ನಟ ಆಟವಾಡಿದ್ದರು. ಇವರ ಆಟವನ್ನು ಕನ್ನಡಿಗರ ಮೆಚ್ಚಿಕೊಂಡಿದ್ದಾರೆ, ಬಿಗ್‌ಬಾಸ್ ಇತಿಹಾಸದಲ್ಲೇ ಅತೀ ಹೆಚ್ಚು ಮತ ಚಲಾಯಿಸಿದ್ದರು. ಈ ಪ್ರೀತಿಗೆ ನಾನು ಶರಣು ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ. ಬಿಗ್‌ಬಾಸ್ ಗೆಲುವು ಹಾಗೂ ಸಂಭ್ರಮದ ಬಗ್ಗೆ ಅವರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ಇಷ್ಟು ದೂರ ಕರ್ಕೊಂಡು ಬಂದಿದ್ದೀರಾ .. ಮನಸ್ಸಲ್ಲಿ ಜಾಗ ಕೊಟ್ಟಿದ್ದೀರಾ.. ಕೈ ಮೇಲೆ ಹಚ್ಚೆ ಹಾಕಿಸ್ಕೊಂಡಿದ್ದೀರಾ.. ನಿರಂತರವಾಗಿ ಬೆಂಬಲಿಸಿದ್ದೀರಾ.. ಇದುವರೆಗೂ ಬರಿ ರನ್ನರ್ ಅಪ್ ಆಗೇ ಉಳ್ಕೊತಿದ್ದ ಗಿಲ್ಲಿಗೆ ಗೆಲುವಿನ ಕಿರೀಟ ತೊಡಿಸಿದ್ದೀರಾ.. ಮೆರೆಸಿದ್ದೀರಾ.. ಈ ಪ್ರೀತಿಗೆ ಏನು ಹೇಳಿದ್ರು, ಎಷ್ಟು ಹೇಳಿದ್ರು ಕಡಿಮೇನೆ!! ಗಿಲ್ಲಿ ಗೆಲುವಿಗಾಗಿ ವೋಟ್ ಮಾಡಿದವರಿಗೆ, ಹರಕೆ ಹೊತ್ತೋರಿಗೆ, ಅಭಿಮಾನದಿಂದ ಜೊತೆ ನಿಂತೋರಿಗೆ "ರೆಲೆಂಟ್ ಕ್ರಿಯೇಷನ್ಸ್" ಕಡೆಯಿಂದ ದೊಡ್ಡ ನಮಸ್ಕಾರ ಹಾಗೂ ತುಂಬು ಹೃದಯದ ಧನ್ಯವಾದಗಳು !!♥️ಈ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ , ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು!! ಎಂದು ಗಿಲ್ಲಿ ನಟ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಎಲ್ಲರಿಗೂ ನಮಸ್ಕಾರ ನಿಜವಾಗಿಯೂ ನಮ್ಮ ಕನ್ನಡಿಗರಿಗೆ, ಕನ್ನಡ ಜನರಿಗೆ ಯಾವ ರೀತಿ ಧನ್ಯವಾದ ತಿಳಿಸಬೇಕು ಎಂದೇ ಗೊತ್ತಾಗುತ್ತಿಲ್ಲ. ನಿಜವಾಗಿಯೂ ನಾನು ಬಿಗ್‌ಬಾಸ್‌ನ ಒಳಗಡೆ ಇರುವಾಗ ಹೊರಗಡೆ ಈ ರೀತಿ ಸಪೋರ್ಟ್ ಸಿಗುತ್ತಿದೆ. ಇಷ್ಟೊಂದು ಎಲ್ಲರೂ ಪ್ರೀತಿಸುತ್ತಿದ್ದಾರೆ. ಪ್ರೀತಿ - ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ಕನಸು - ಮನಸ್ಸಿನಲ್ಲೂ ಭಾವಿಸಿರಲಿಲ್ಲ. ಆಚೆಗೆ ಬಂದಾಗ ಸಖತ್ ಖುಷಿಯಾಯ್ತು. ನನಗೆ ನಾನೇ ನಂಬಲು ಆಗುತ್ತಿಲ್ಲ.
ನಮ್ಮ ಯೋಧರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ರೈತರು ಸಂಕ್ರಾಂತಿ ಸಂಭ್ರಮದಲ್ಲಿ ಬೆಂಬಲ ಕೊಟ್ಟಿದ್ದಾರೆ. ಕನ್ನಡಿಗರು ಮಾತ್ರವಲ್ಲದೆ ಆಂಧ್ರಪ್ರದೇಶದವರು, ತಮಿಳುನಾಡು ಹಾಗೂ ಬೇರೆ ದೇಶಗಳಲ್ಲಿ ಇರುವವರು ಸಹ ಬೆಂಬಲ ಕೊಟ್ಟಿದ್ದಾರೆ. ಆಟೋ ಚಾಲಕರು ಸ್ಟಿಕ್ಕರ್‌ಗಳನ್ನು ಹಾಕಿಕೊಂಡು ಪ್ರಚಾರ ಕೊಟ್ಟಿದ್ದಾರೆ. ಟ್ಯಾಟು ಹಾಕಿಸಿಕೊಂಡು ಯಾರು ಅಂತಲೇ ತಿಳಿಯದವರು ಅಷ್ಟೊಂದು ಪ್ರೀತಿ ತೋರಿಸಿದ್ದಾರೆ.
ಒಬ್ಬರಿಬ್ಬರು ಎಂದಲ್ಲ. ಚಿಕ್ಕ ಮಗುವಿನಿಂದ ದೊಡ್ಡವರವರೆಗೆ ಬೆಂಬಲ ಕೊಟ್ಟಿದ್ದಾರೆ. ಅಷ್ಟೊಂದು ಪ್ರೀತಿ - ಪ್ರೋತ್ಸಾಹ ಕೊಟ್ಟಿದ್ದಾರೆ. ಈಗಲೂ ಕೊಡುತ್ತಿದ್ದಾರೆ. ನಿಜವಾಗಿಯೂ ನಾನು ಬದುಕಿರುವವರೆಗೆ ಈ ಪ್ರೀತಿ ಮರೆಯುವುದಿಲ್ಲ. ನಮ್ಮ ಕನ್ನಡದ ನ್ಯೂಸ್ ಚಾನೆಲ್‌ಗಳು ಸಹ ಹಾಗೂ ಸೋಷಿಯಲ್ ಮೀಡಿಯಾದಲ್ಲೂ ತುಂಬಾ ಸಪೋರ್ಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಾನು ಒಂದೇ ಒಂದು ಟ್ರೋಲ್ ಅಥವಾ ನೆಗೆಟಿವ್ ಪ್ರಚಾರ ನೋಡಲಿಲ್ಲ. ಈ ಪ್ರೋತ್ಸಾಹ ಹಾಗೂ ಪ್ರೀತಿ ಕೊನೆಯ ವರೆಗೂ ಇದೇ ರೀತಿ ಇರಲಿ ಎಂದು ಅವರು ಹೇಳಿದ್ದಾರೆ.
ಕಾಮೆಂಟ್‌ಗಳ ಸುರಿಮಳೆ
ಇನ್ನು ಗಿಲ್ಲಿ ನಟ ಅವರು ಮಾಡಿರುವ ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕೆಲವರು ಮನವಿಯನ್ನೂ ಮಾಡಿದ್ದಾರೆ. ಪುರುಷೋತ್ತಮ್ ಗೌಡ ಎನ್ನುವವರು, ಒಳ್ಳೆದಾಗಲಿ ಆದರೆ ಯಾವುದೇ ರಾಜಕೀಯ ಪಕ್ಷದ ರಾಜಕೀಯ ವೇದಿಕೆಯಲ್ಲಿ ದಯಮಾಡಿ ಪಾಲ್ಗೊಳ್ಳಬೇಡಿ ರಾಜಕಾರಣಿಗಳು ಒಂಥರಾ. ಹಾಗಾಗಿ ಯಾವುದೇ ಪಕ್ಷದ ರಾಜಕೀಯ ಮುಖಂಡರ ವೇದಿಕೆ ಹಂಚಿಕೊಳ್ಳಬೇಡಿ ಒಡನಾಟವಿರಲಿ ಆದರೆ ಯಾವುದೇ ಪಕ್ಷದ ಪರ ಕ್ಯಾಂಪೇನ್ ಮಾಡುವುದಾಗಲಿ, ಬಾಹ್ಯ ಬೆಂಬಲ ನೀಡುವುದಾಗಲಿ ಮಾಡಿದರೆ ನಿಮಗೆ ಆ ದಿನದಿಂದಲೇ ನಿಮ್ಮ ಅಭಿಮಾನಿಗಳ ಸಂಖ್ಯೆ ನಿಮ್ಮ ಮೇಲೆ ಇಟ್ಟಿರುವ ಅಭಿಮಾನ ಎಲ್ಲಾ ಕಳೆದುಕೊಳ್ಳುತ್ತೀರಿ ಎಚ್ಚರ ಎಂದಿದ್ದಾರೆ.












Click it and Unblock the Notifications