Sunny Leone: ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಸರ್ಕಾರದಿಂದ ಪ್ರತಿ ತಿಂಗಳು ಭಾಗ್ಯ ಪಡೆದ ವ್ಯಕ್ತಿ
ಮೋಹಕ ನಟಿ ಸನ್ನಿ ಲಿಯೋನ್ ಕೋಟಿ ಕೋಟಿ ಆಸ್ತಿಯ ಒಡತಿ. ಆದರೆ ಸನ್ನಿ ಲಿಯೋನ್ ಅವರ ಸರ್ಕಾರದ ಯೋಜನೆಯಿಂದ ಹಣ ಪಡೆಯುತ್ತಾರೆ ಅಂದರೆ ಎಂತವರಿಗೂ ಶಾಕ್ ಆಗೋದು ಗ್ಯಾರಂಟಿ. ಅದರಲ್ಲೂ ಮಹಿಳೆಯರಿಗೆ ನೀಡುವ ಯೋಜನೆಯಡಿ ಸನ್ನಿ ಲಿಯೋನ್ ಪ್ರತಿ ತಿಂಗಳು 1000 ರೂಪಾಯಿ ಹಣ ಪಡೆದುಕೊಂಡಿದ್ದಾರೆ ಎನ್ನುವ ವಿಚಾರ ಎಲ್ಲೆಡೆ ಸಂಚಲನ ಮೂಡಿಸಿದೆ.
ಹೌದು, ಸನ್ನಿ ಲಿಯೋನ್ ಅವರು ಸರ್ಕಾರದ ಯೋಜನೆಯಿಂದ ಪ್ರತಿ ತಿಂಗಳು 1000 ರೂಪಾಯಿ ಹಣವನ್ನು ಪಡೆದು ಫಲಾನುಭವಿಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರದ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ.

ಆದರೆ, ಅಸಲಿಗೆ ಈ ಹಣ ಪಡೆದಿರುವುದು ಸನ್ನಿ ಲಿಯೋನ್ ಅಲ್ಲ ಎಂಬ ಸತ್ಯ ಕೂಡ ಬೆಳಕಿಗೆ ಬಂದಿದೆ. ಖತರ್ನಾಕ್ ವ್ಯಕ್ತಿಯೊಬ್ಬ ಸನ್ನಿ ಲಿಯೋನ್ ಅವರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಯನ್ನು ತೆರೆದಿದ್ದು, ಛತ್ತೀಸ್‌ಗಡ ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳೂ 1000 ರೂಪಾಯಿ ಪಡೆದು ಮಜಾ ಮಾಡಿದ್ದಾನೆ.
ಛತ್ತೀಸಗಢ ಸರ್ಕಾರ ವಿವಾಹಿತ ಮಹಿಳೆಯರಿಗಾಗಿ ಜಾರಿ ಮಾಡಿರುವ ಮಹತಾರಿ ವಂದನಾ ಯೋಜನೆಗೆ ಸನ್ನಿ ಲಿಯೋನ್ ಹೆಸರಿನಲ್ಲಿ ಅರ್ಜಿ ಸಲ್ಲಿಸಿ, ಫಲಾನುಭವಿಯೂ ಆಗಿದ್ದಾನೆ. ಈ ಯೋಜನೆಯಡಿ ವಿವಾಹಿತ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಸರ್ಕಾರ ಒಂದು ಸಾವಿರ ರೂಪಾಯಿಯನ್ನು ಜಮಾ ಮಾಡುತ್ತಿದ್ದು, ಅದರಂತೆ ಈ ವ್ಯಕ್ತಿ ಕೂಡ ಸನ್ನಿ ಲಿಯೋನ್ ಆಗಿ ಹಣ ಪಡೆದುಕೊಂಡಿದ್ದಾನೆ.

ವೀರೇಂದ್ರ ಜೋಶಿ ಎಂಬಾತ ಸರ್ಕಾರದ ಈ ಯೋಜನೆಯಿಂದ ಹಣ ಪಡೆದುಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಈ ನಕಲಿ ಸನ್ನಿ ಲಿಯೋನ್ ಅನ್ನು ಪತ್ತೆ ಹಚ್ಚಿ ಕೇಸ್ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಈ ಯೋಜನೆಯಡಿ ಫಲಾನುಭವಿಗಳ ಬಗ್ಗೆ ಪೂರ್ವಾಪರ ಪರಿಶೀಲನೆ ನಡೆಸದೆ ಹಣ ಜಮೆ ಮಾಡಿರುವ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಛತ್ತೀಸಗಢದ ಬಸ್ತಾರ್ ಜಿಲ್ಲೆಯ ಗ್ರಾಮವೊಂದರಲ್ಲಿ ಈ ರೀತಿಯ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಇನ್ನು ಈ ವಂಚನೆ ವಿಚಾರ ಬಹಿರಂಗವಾಗಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಸದ್ದು ಮಾಡಿದ್ದರಿಂದ ಜಿಲ್ಲಾಡಳಿತವು ಎಚ್ಚೆತ್ತುಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. ಸದ್ಯ ಈ ವಿಚಾರವು ಛತ್ತೀಸ್‌ಗಡ ಸರ್ಕಾರಕ್ಕೆ ಭಾರಿ ಮುಜುಗರ ಉಂಟು ಮಾಡಿದ್ದು, ಬಸ್ತಾರ್ ಜಿಲ್ಲಾಧಿಕಾರಿಯು ಇದರ ಬಗ್ಗೆ ತನಿಖೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಆದೇಶಿಸಿದ್ದಾರೆ.

ಈ ವಿಚಾರವು ಛತ್ತೀಸ್‌ಗಢ ರಾಜಕಾರಣದಲ್ಲೂ ಭಾರಿ ವಾಗ್ವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾದ ಪ್ರತಿವಾದ ಕೂಡ ನಡೆಯುತ್ತಿದೆ. ಬಿಜೆಪಿ ಸರ್ಕಾರದ ಈ ಯೋಜನೆಯನ್ನು ಅಣಕಿಸಿರುವ ಛತ್ತೀಸ್‌ಗಢ ಕಾಂಗ್ರೆಸ್ ಮಹತಾರಿ ವಂದನಾ ಯೋಜನೆಯ ಶೇ 50ರಷ್ಟು ಫಲಾನುಭವಿಗಳೆಲ್ಲ ನಕಲಿ ಎಂದು ಲೇವಡಿ ಮಾಡಿದೆ. ಇದನ್ನು ಬಿಜೆಪಿ ಒಪ್ಪಿಲ್ಲ. ಆ ರೀತಿ ಏನೂ ಆಗಿಲ್ಲ ಎಂದು ತಿರುಗೇಟು ನೀಡಿದೆ ಎಂದು ವರದಿಯಾಗಿದೆ. ಸದ್ಯ ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, Sunny Leone ಹೆಸರು ಟ್ರೆಂಡಿಂಗ್‌ನಲ್ಲೂ ಇದೆ.












Click it and Unblock the Notifications